Advertisement

Election 2023; ಬೆಳ್ತಂಗಡಿ- ಹಿಂದುತ್ವ ಒಂದಿಂಚು ಬಿಟ್ಟು ಕೊಡದ ಶಾಸಕ ಹರೀಶ್‌ ಪೂಂಜ

05:18 PM May 08, 2023 | Team Udayavani |

ಬೆಳ್ತಂಗಡಿ; ಬೆಳ್ತಂಗಡಿ ತಾಲೂಕಿನಲ್ಲಿ ಐದು ವರ್ಷಗಳ ಹಿಂದೆ ಚಾರ್ಮಾಡಿ ಘಾಟ್‌ ಕುಸಿತವಾದಾಗ ನೋಡಿದ ಹರೀಶ್‌ ಪೂಂಜನಿಗೂ ಇಂದಿನ ಹರೀಶ್‌ ಪೂಂಜನಿಗೂ ಯಾವುದೇ ಬದಲಾವಣೆಯಾಗಿಲ್ಲ. ಬೆಳ್ತಂಗಡಿ ತಾಲೂಕಿನ ಮೂಲೆ ಮೂಲೆ ಹುಡುಕಿ ಅಭಿವೃದ್ಧಿ ಮಾಡುವುದರ ಜತೆಗೆ ಒಂದಿಂಚು ಹಿಂದುತ್ವವನ್ನು ಬಿಟ್ಟು ಕೊಡದ ಶ್ರಮಿಕನನ್ನು 50 ಸಾವಿರ ಮತಗಳಿಂದ ಗೆಲ್ಲಿಸಬೇಕು. ಅವರು ಕೇವಲ ಶಾಸಕರಲ್ಲದೆ ರಾಜ್ಯದ ಉನ್ನತ ಸ್ಥಾನಕ್ಕೇರಿಸಬೇಕು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ಚುನಾವಣ ಸಹ ಪ್ರಭಾರಿ ಅಣ್ಣಾಮಲೈ ಕಾರ್ಯಕರ್ತರಿಗೆ ಕರೆ ನೀಡಿದರು.

Advertisement

ಬಿಜೆಪಿ ಮಂಡಲದ ವತಿಯಿಂದ ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್‌ ಪೂಂಜ ಪರ ರವಿವಾರ ಅಳದಂಗಡಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಬೆಳ್ತಂಗಡಿ ಕ್ಷೇತ್ರದಲ್ಲಿ ನೋಡಿದಾಗ 3500 ಕೋಟಿ ಅನುದಾನ ಹರೀಶ್‌ ಪೂಂಜ ತಂದಿದ್ದಾರೆ. ಬೆಳ್ತಂಗಡಿಯಲ್ಲಿರುವಂತಹ 10 ಮೀಟರ್‌ ರಸ್ತೆ ಬೇರೆ ಯಾವ ಹಳ್ಳಿಯಲ್ಲಿಲ್ಲ. ತಮಿಳುನಾಡಿನಲ್ಲಿಯೂ ಇಲ್ಲ. ಕಿಂಡಿ ಅಣೆಕಟ್ಟು ನಿರ್ಮಿಸಿದ್ದಾರೆ, ಮೆರೈನ್‌ ಡಿಪ್ಲೋಮಾ ಕಾಲೇಜು ತರುವ ಸಾಧನೆ ಮಾಡಿದ್ದಾರೆ ಎಂದರು.

ಮೇ 13ರಂದು ಇತಿಹಾಸ ಸೃಷ್ಟಿ
ಈ ಬಾರಿ ಮೇ 10 ರಂದು ಬಿಜೆಪಿಗೆ ಮತ ಚಲಾಯಿಸುವ ಮೂಲಕ ಮತ್ತು ಮೇ 13 ರಂದು ದಾಖಲೆ ಸಾಧಿಸುವ ಮೂಲಕ ಇತಿಹಾಸವೊಂದು ಸೃಷ್ಟಿಯಾಗಲಿದೆ. ರಾಜ್ಯದಲ್ಲಿ 130ಕ್ಕಿಂತ ಅಧಿಕ ಬಿಜೆಪಿ ಶಾಸಕರು ಗೆಲ್ಲುವ ಮೂಲಕ ಬಹುಮತದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ಪ್ರತಿಪಾದಿಸಿದರು.

ಯಾವ ಬೂತ್‌ನಲ್ಲೂ ಲೀಡ್‌ ಬಾರದಂತೆ ಶ್ರಮಿಸಿ
ಕಾಂಗ್ರೆಸ್‌ ಜೀವ ಉಳಿಸುವ ಬಜರಂಗದಳ ಹಾಗೂ ಜೀವ ತೆಗೆಯುವ ಪಿಎಫ್‌ಐಯನ್ನು ಒಂದೇ ತಕ್ಕಡಿಯಲ್ಲಿ ತೂಗಿ ನಿಷೇಧಿಸಲು ಮುಂದಾಗಿದ್ದೀರಿ. ಹಾಗಾಗಿ ಯಾವ ಬೂತ್‌ನಲ್ಲೂ ಕಾಂಗ್ರೆಸ್‌ಗೆ ಮುನ್ನಡೆ ಕೊಡಬಾರದು ಎಂಬ ಸಂಕಲ್ಪವನ್ನು ಕಾರ್ಯಕರ್ತರು ಮಾಡಬೇಕು ಎಂದರು.

Advertisement

ಬಿಜೆಪಿ ಪ್ರಣಾಳಿಕೆಯಲ್ಲಿರುವ ಒಂದೊಂದೂ ಅಂಶವನ್ನೂ ಕೊಟ್ಟೇ ಕೊಡುತ್ತೇವೆ. ಆದರೆ ಕಾಂಗ್ರೆಸ್‌ ಪ್ರಣಾಳಿಕೆ ಈಡೇರಿಸಲು 50 ಸಾವಿರ ಕೋಟಿ ರೂ.ಬೇಕು, ಎಲ್ಲಿಂದ ತರುತ್ತೀರಿ ಡಿ.ಕೆ. ಶಿವಕುಮಾರ್‌ ಮನೆಯಲ್ಲಿ ಅಥವಾ ಸಿದ್ದರಾಮಯ್ಯ ತೋಟದಲ್ಲಿ ನೋಟು ಮುದ್ರಿಸುವ ಯಂತ್ರ ಇರಿಸಿದ್ದಾರೆಯೆ ಎಂದು ಪ್ರಶ್ನಿಸಿದರು.

ಹರೀಶ್‌ ಪೂಂಜ ಶ್ರಮಿಕ ಶಾಸಕ;
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದೆಲ್ಲೆಡೆ ತಿರುಗಿದ್ದೇನೆ, ಹರೀಶ್‌ ಪೂಂಜರಂತಹ ಶ್ರಮಿಕ ಶಾಸಕನನ್ನು ನನ್ನ ಸಾರ್ವಜನಿಕ ಜೀವನದಲ್ಲಿ ಕಂಡಿಲ್ಲ ಎಂದರು.
ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಾರಾಯಣ ಗುರು ನಿಗಮ ಸ್ಥಾಪನೆ ಮಾಡಿದ್ದು ಬಿಜೆಪಿ ಸರಕಾರ. ಪಂಗಡವಾರು ಜನಸಂಖ್ಯೆ ನೋಡಿ ಒಳ ಮೀಸಲಾತಿ ವಿಂಗಡಣೆ ಮಾಡಿದ್ದರಿಂದ ಕೆಳವರ್ಗದ ಮಕ್ಕಳು ಮುಂದಿನ ದಿನ ಐಎಎಸ್‌, ಐಪಿಎಸ್‌ ಮಕ್ಕಳಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ, ಬಿಜೆಪಿ ಅಭ್ಯರ್ಥಿ ಹರೀಶ್‌ ಪೂಂಜ ಮಾತನಾಡಿ, ನೀವು ಮತ ನೀಡಿದ್ದಕ್ಕೆ ನಿಮ್ಮ ಮಗನಾಗಿ ಸೇವೆ ಸಲ್ಲಿಸಿದ್ದೇನೆ. ಅಭಿವೃದ್ಧಿ ರಾಜ್ಯದಲ್ಲೇ ಮೊದಲು ಎಂಬಂತೆ ಕಲ್ಪನೆ ನೀಡಿದ್ದೇನೆ. ನನ್ನ ಬಳಿ ಬಂದಾಗ, ಜಾತಿ, ಧರ್ಮ ನೋಡದೆ ಸೇವೆ ಮಾಡಿದ್ದೇನೆ. ಇನ್ನೈದು ವರ್ಷ ಅವಕಾಶ ನೀಡಿ ಶ್ರಮಿಕನಂತೆ ನಿಮ್ಮ ಮಗನಂತೆ ಸೇವೆ ಮಾಡಲು ಅವಕಾಶ ನೀಡಿ. ಕಾಂಗ್ರೆಸ್‌ ಮುಕ್ತ ಕರ್ನಾಟಕ, ಕಾಂಗ್ರೆಸ್‌ ಮುಕ್ತ ಬೆಳ್ತಂಗಡಿಯಾಗಿ ಮಾಡೋಣ ಎಂದರು.

ಹಲವು ಮಂದಿ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ನಾರಾವಿ ಹಿರಿಯ ಬಿಜೆಪಿ ಕಾರ್ಯಕರ್ತ ಡಾಕಯ್ಯ ಪೂಜಾರಿ, ಬಿಜೆಪಿ ಮುಖಂಡ ಸುಬ್ರಮಣ್ಯ ಕುಮಾರ್‌ ಅಗರ್ತ, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಪೂಜಾರಿ, ಪಿ.ಎಲ್‌.ಡಿ. ಬ್ಯಾಂಕ್‌ ಅಧ್ಯಕ್ಷ ಸೋಮನಾಥ್‌ ಬಂಗೇರ ವರ್ಪಾಳೆ, ಅಭ್ಯರ್ಥಿ ಪ್ರಮುಖ್‌ ಜಯಾನಂದ ಗೌಡ, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್‌ ಕಾಪಿನಡ್ಕ, ಅನೀಶ್‌ ವೇಣೂರು, ಚುನಾವಣಾ ಪ್ರಭಾರಿ ಯತೀಶ್‌, ಹಿರಿಯರಾದ ಕೊರಗಪ್ಪ ನಾಯ್ಕ, ಶ್ರೀನಿವಾಸ್‌ ಕಿಣಿ ಉಪಸ್ಥಿತರಿದ್ದರು. ಜಯಂತ್‌ ಕೋಟ್ಯಾನ್‌ ಪ್ರಾಸ್ತಾವಿಸಿ, ಸ್ವಾಗತಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌ ರಾವ್‌ ಕಾರ್ಯಕ್ರಮ ನಿರ್ವಹಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next