ಬೆಂಗಳೂರು: ನಾವು ಮೂಲತಃ ಕ್ರಿಶ್ಚಿಯನ್ ಸಮುದಾಯವರ ವಿರೋಧಿಯಲ್ಲ. ಸರ್ಕಾರ ಕೂಡ ಅವರ ಪರವಾಗಿದೆ. ನಾನೂ ಕೂಡ ಅವರ ಪರವಾಗಿದ್ದೇನೆ. ಕ್ರೈಸ್ತ ಸಮಾಜ, ಮಿಶಿನರಿಗಳ ಪರವಾಗಿದ್ದೇವೆ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಬಲವಂತವಾಗಿ ಮತಾಂತರ ಮಾಡುತ್ತಾರೋ ಅವರ ವಿರುದ್ಧ ನಮ್ಮ ಸಮರ ನಡೆಯಲಿದೆ. ಕ್ರೈಸ್ತ ಸಮುದಾಯದವರು ಹೆದರುವ ಅವಶ್ಯಕತೆ ಇಲ್ಲ. ಅವರ ಭಾವನೆಗೆ ಧಕ್ಕೆ ತರುವ ಮಾತನ್ನು ಎಂದೂ ಆಡಿಲ್ಲ ಎಂದರು.
ಹಿಂದೂಗಳಾಗಿ ಹುಟ್ಟಿ, ಅವರಿಂದ ನಾವು ನೋವು ತಿನ್ನುತ್ತಿದ್ದೇವೆ. ನಾನು ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯಲ್ಲಿದ್ದೇನೆ. ಅಲ್ಲಿ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಪ್ರತೀ ತಿಂಗಳು ಪರಿಶೀಲನಾ ಸಭೆ ಮಾಡುತ್ತೇವೆ. 75%ಹಿಂದುಳಿದವರಿದ್ದಾರೆ. ಹಿಂದುಳಿದವರ ಸಮುದಾಯದಲ್ಲಿ ಮುಸ್ಲಿಂ, ಸಿಖ್, ಪಾರ್ಸಿ ಎಲ್ಲರೂ ಬರುತ್ತಾರೆ. ಮುಸ್ಲಿಂ ಕಾರ್ಯಕ್ರಮದಲ್ಲಿ ಶಾದಿ ಮಾಲ್ ಸೇರಿದಂತೆ ಹಲವು ವಿಚಾರ ಚರ್ಚೆಗೆ ಬರಲಿದೆ. ಸಹಜವಾಗಿ ರಾಜ್ಯದಲ್ಲಿ ಎಷ್ಟು ಮಸೀದಿ, ಚರ್ಚ್ ಇದೆ ಅಂತ ಕೇಳಿದ್ದೇವೆ. ದರ್ಗಾ, ಚರ್ಚ್, ಸ್ಮಶಾನ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಬೇಕು. ಹಾಗಾಗಿ ಕಮಿಟಿಯಲ್ಲಿ ವರದಿ ಕೇಳಿದ್ದೇವೆ. 1,700 ಚರ್ಚ್ ಇರುವುದಾಗಿ ಮಾಹಿತಿ ನೀಡಿದ್ದಾರೆ. ಚರ್ಚ್ ವರದಿ ಕೇಳಿರುವುದು ಸರ್ವೆ ಮಾಡಲು ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:‘ವ್ಯಾಕ್ಸಿನ್ ಸೆಂಚುರಿ’: ‘ನಾವು ವಿಜಯವನ್ನು ಕಾಣುತ್ತಿದ್ದೇವೆ’ ಎಂದ ಪ್ರಧಾನಿ ಮೋದಿ
ನಮ್ಮ ಸಂವಿಧಾನ, ಕಾನೂನಿನಲ್ಲಿ ಸ್ವ ಇಚ್ಛೆಯಿಂದ ಯಾವುದೇ ಧರ್ಮ ಪಾಲನೆಗೆ ಅವಕಾಶ ಇದೆ. ಬಲವಂತವಾಗಿ ಮತಾಂತರ ಪ್ರಕರಣ ಬಗ್ಗೆ ಹೋಮ್ ಡಿಪಾರ್ಟ್‌ಮೆಂಟ್ ಗೆ ಮಾಹಿತಿ ಕೇಳಿದ್ದೇವೆ. 37 ಪ್ರಕರಣಗಳು ದಾಖಲಾಗಿರುವುದಾಗಿ ಗೃಹ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಗೂಳಿಹಟ್ಟಿ ಶೇಖರ್ ಹೇಳಿದರು.