ರಾಮನಗರ: ಬಿಡದಿಯ ಈಗಲ್ಟನ ರೆಸಾರ್ಟ್‌ನಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪಿ ಕಂಪ್ಲಿ ಕ್ಷೇತ್ರ ಶಾಸಕ ಜೆ.ಎನ್.ಗಣೇಶ್ ಅವರನ್ನು ಬಂಧಿಸಲು ರಾಮನಗರ ಪೊಲೀಸರು ತಯಾರಿ ನಡೆಸಿದ್ದಾರೆ.
ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಾಸಕ ಆನಂದ್ ಸಿಂಗ್ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ನಂತರ ಶಾಸಕ ಗಣೇಶ್ ನಾಪತ್ತೆಯಾಗಿದ್ದರು.
ಬುಧವಾರ ಬಜೆಟ್ ಅಧಿವೇಶನ ಆರಂಭ ವಾಗಲಿದ್ದು, ಕಂಪ್ಲಿ ಶಾಸಕ ಜಿ.ಎನ್.ಗಣೇಶ್ ವಿಧಾನ ಸೌಧಕ್ಕೆ ಆಗಮಿಸುವ ಎಲ್ಲಾ ನಿರೀಕ್ಷೆಗಳು ಇದೆ. ಅವರನ್ನು ಅಲ್ಲಿಯೇ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಶಾಸಕರನ್ನು ಬಂಧಿಸಲು ಬಿಡದಿ ಪೊಲೀಸರು ಸ್ಪೀಕರ್ ಅವರಿಂದ ಅನುಮತಿ ಕೇಳಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ವಿಪ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಸಭೆಯಲ್ಲಿ ಭಾಗವಹಿಸಲೇ ಬೇಕಾದ ಅನಿವಾರ್ಯತೆ ಶಾಸಕ ಗಣೇಶ್‌ಗೆ ಇದೆ. ಹೀಗಾಗಿ ಅವರನ್ನು ಅಲ್ಲಿಯೇ ಬಂಧಿಸುವುದು ಸ್ಥಳೀಯ ಪೊಲೀಸರ ಲೆಕ್ಕಾಚಾರ.
ಕಾಂಗ್ರೆಸ್ ಪಕ್ಷ ನೀಡಿರುವ ವಿಪ್ ಶಾಸಕ ಗಣೇಶ್ ಅವರ ಕೈ ಸೇರಿದೆಯೇ ಎಂಬುದು ಗೊತ್ತಾಗಿಲ್ಲ. ಆದರೆ, ವಿಧಾನಸಭೆ ಕಲಾಪದ ವೇಳೆ ಅಥವಾ ವಿಧಾನಸಭೆಯಲ್ಲಿ ಯಾರನ್ನಾದರು ಬಂಧಿಸಬೇಕಾದರೆ ಸ್ಪೀಕರ್ ಅವರ ಅನುಮತಿ ಪಡೆಯುವುದು ಕಡ್ಡಾಯ. ಹೀಗಾಗಿ ಎಸ್‌ಪಿ ರಮೇಶ್, ಬಿಡದಿ ಪೊಲೀಸರು ಬುಧವಾರ ಬೆಳಿಗ್ಗೆಯೇ ಸ್ಪೀಕರ್ ಅವರ ಬಳಿ ಅನುಮತಿ ಕೇಳಲಿದ್ದಾರೆ.
ಬಂಧನದ ಭೀತಿ ಇದ್ದರೂ ಶಾಸಕ ಜಿ.ಎನ್.ಗಣೇಶ್ ಸ್ಥಳೀಯ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ ಎಂಬುದು ಇಲ್ಲಿ ಗಮನಸಿಬೇಕಾದ ಅಂಶ.