ಬೆಂಗಳೂರು: ಬಲವಂತವಾಗಿಯೇ ಲೋಕಸಭಾ ಚುನಾವಣೆಗೆ ಧುಮುಕಿದ್ದ ಸಂಡೂರು ಶಾಸಕ ತುಕಾರಾಂ ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೋ? ಈಗಷ್ಟೇ ಗೆದ್ದ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ಕೊಡಬೇಕೋ ಎಂಬ ಗೊಂದಲದಲ್ಲಿದ್ದಾರೆ. ಮಂತ್ರಿಗಿರಿ ಆಸೆಯೇ ಇದಕ್ಕೆ ಕಾರಣವಾಗಿದೆ.
ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಕ್ರೀಡಾ ಸಚಿವರಾಗಿದ್ದ ಬಳ್ಳಾರಿ ಶಾಸಕ ನಾಗೇಂದ್ರ ಅವರು ಕರ್ನಾಟಕ ವಾಲ್ಮೀಕಿ ಮಹರ್ಷಿ ಅಭಿವೃದ್ಧಿ ನಿಗಮದ 187 ಕೋಟಿ ರೂ.ಗಳ ಅಕ್ರಮ ವರ್ಗಾವಣೆ ಹಗರಣದ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದಷ್ಟೇ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಈಗ ತುಕಾರಾಂಗೆ ಈ ಸ್ಥಾನದ ಮೇಲೆ ಕಣ್ಣು ಬಿದ್ದಿದೆ. ಒಂದೇ ಜಿಲ್ಲೆ ಹಾಗೂ ಒಂದೇ ಸಮುದಾಯ(ಪರಿಶಿಷ್ಟ ಪಂಗಡ)ಕ್ಕೆ ಸೇರಿದ ನಾಗೇಂದ್ರ ಹಾಗೂ ತುಕಾರಾಂ ಇಬ್ಬರಲ್ಲಿ ಒಬ್ಬರು (ನಾಗೇಂದ್ರ) ಈಗ ಸಚಿವ ಸ್ಥಾನ ಕಳೆದುಕೊಂಡಿರುವುದರಿಂದ ಅವರ ರಾಜೀನಾಮೆಯಿಂದ ತೆರವಾದ ಸ್ಥಾನದ ಮೇಲೆ ತುಕಾರಾಂಗೆ ಆಸೆಯಾಗಿದೆ.
ಚುನಾವಣೆಗೆ ಸ್ಪರ್ಧಿಸುವುದಕ್ಕೆ ಹಿಂದೇಟು ಹಾಕಿದ್ದ ತುಕಾರಾಂ ಪುತ್ರಿಗೆ ಟಿಕೆಟ್ ಕೇಳಿದ್ದರೂ ಒಪ್ಪದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇವರನ್ನೇ ಕಣಕ್ಕಿಳಿಸಿದ್ದರು. ಸೋತರೆ ಮಂತ್ರಿ ಮಾಡಬೇಕೆಂಬ ಷರತ್ತಿನ ಮೇಲೆ ತುಕಾರಾಂ ಸ್ಪರ್ಧಿಸಿದ್ದರು ಎನ್ನಲಾಗಿದೆ.
ಈಗ ಲೋಕಸಭೆಗೆ ಆಯ್ಕೆಯಾಗಿದ್ದರೂ ಸಚಿವನಾಗಬೇಕೆಂಬ ಆಸೆ ಮೂಡಿದೆ. ನಾಗೇಂದ್ರ ರಾಜೀನಾಮೆಯಿಂದ ತೆರವಾದ ಸ್ಥಾನ ಪರಿಶಿಷ್ಟ ಪಂಗಡದ ಪಾಲಾಗುವುದು ಖಚಿತ. ಈ ಸ್ಥಾನದ ಮೇಲೆ ಮೊಳಕಾಲ್ಮೂರಿನ ಎನ್.ವೈ.ಗೋಪಾಲಕೃಷ್ಣ, ಎಚ್.ಡಿ.ಕೋಟೆಯ ಅನಿಲ್ ಚಿಕ್ಕಮಾದು ನಡುವೆ ಪೈಪೋಟಿ ಇದೆ. ಈ ಮಧ್ಯೆ ತುಕಾರಾಂ ಕೂಡ ಕಣ್ಣಿಟ್ಟಿದ್ದು, ಸಿಎಂ ಭೇಟಿಗೆ ಮುಂದಾಲಿದ್ದಾರೆ ಎನ್ನಲಾಗಿದೆ.