ಗುಂಡ್ಲುಪೇಟೆ: ಮತಯಾಚನೆಗೆ ಬಂದ ಶಾಸಕ ಸಿ.ಎಸ್ .ನಿರಂಜನಕುಮಾರ್ ಗೆ ಗ್ರಾಮಸ್ಥರು ಘೇರಾವ್ ಹಾಕಿ ವಾಪಸ್ ಕಳುಹಿಸಿದ ಘಟನೆ ತಾಲೂಕಿನ ಹಿರೀಕಾಟಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ತಾಲೂಕಿನ ಹಿರೀಕಾಟಿ ಗ್ರಾಮದ ದಲಿತರ ಬೀದಿಗೆ ಶಾಸಕ ನಿರಂಜನಕುಮಾರ್ ತಮ್ಮ ಬೆಂಬಲಿಗರೊಂದಿಗೆ ಮತಯಾಚನೆಗೆ ಸೋಮವಾರ ರಾತ್ರಿ ಆಗಮಿಸಿ ವೇಳೆ ಗ್ರಾಮದ ಯುವಕರು ನಿರಂಜನಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ, ನಮ್ಮ ಗ್ರಾಮಕ್ಕೇನು ಮಾಡಿದ್ದೀರಿ ನೀವು ಎಂದು ಪ್ರಶ್ನಿಸಿದರು.
ಈ ವೇಳೆ ತಾಪಂ ಮಾಜಿ ಉಪಾಧ್ಯಕ್ಷ ಕೃಷ್ಣ ಯುವಕರನ್ನು ಸಮಾಧಾನ ಮಾಡಲು ಯತ್ನಿಸಿದಾಗ ಯುವಕರು ಸುಮ್ಮನಾಗದೆ ಮಾತು ಮುಂದುವರಿಸಿದರು.
ಆಗ ಶಾಸಕರು ಹಾಗೂ ಬಿಜೆಪಿ ಮುಖಂಡ ಸೋಮಶೇಖರ್ ಮಾತನಾಡಲು ಬಂದರು. ಆಗಲೂ, ಯುವಕರು ಪಟ್ಟು ಬಿಡದೆ ಗ್ರಾಮಕ್ಕೆ ಏನು ಮಾಡಿದ್ದೀರಾ ಹೇಳಿ ಎಂದು ತರಾಟೆಗೆ ತೆಗೆದುಕೊಂಡರು. ಯುವಕರ ಗುಂಪು ಆಕ್ರೋಶ ಹೆಚ್ಚಾಗಿ ನಮ್ಮ ಅನುಮತಿ ಇಲ್ಲದೆ ನೀವು ಗ್ರಾಮದೊಳಗೆ ಹೇಗೆ ಬಂದ್ರಿ ಎಂದು ಕೂಗಾಡಿದರು.
ಈ ದೃಶ್ಯವನ್ನು ಗ್ರಾಮಸ್ಥರು ವಿಡಿಯೋ ಮಾಡುತ್ತಿದ್ದಾರೆ ಎಂಬುದು ಶಾಸಕರ ಅರಿವಿಗೆ ಬಂದ ಕೂಡಲೇ ನಿರಂಜನಕುಮಾರ್ ದಲಿತರ ಬೀದಿಯಲ್ಲಿ ಮತ ಯಾಚನೆ ಬೇಡ ಎಂದು ವಾಪಸ್ ತೆರಳಿದರು.