ವಿಜಯಪುರ: ಶೋಷಿತ ಸಮುದಾಯಗಳಿಗೆ ಮೀಸಲು ಸೌಲಭ್ಯ ಕಲ್ಪಿಸುವ ಅಧಿಕಾರವನ್ನು ಪ್ರಧಾನಿ ಮೋದಿ ಅವರು ಕೇಂದ್ರದ ಬದಲಾಗಿ ರಾಜ್ಯ ಸರ್ಕಾರಕ್ಕೆ ನೀಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆಪಗಳನ್ನು ಹೇಳದೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ಮಾತ್ರವಲ್ಲ ಮೀಸಲು ಬೇಡಿಕೆ ಇರುವ ಎಲ್ಲ ಸಮುದಾಯಗಳಿಗೆ ಮೀಸಲು ಬೇಡಿಕೆ ಈಡೇರಿಸಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ಸೌಲಭ್ಯ ಕಲ್ಪಿಸುವ ಕುರಿತು ನಮ್ಮ ಸಮಾಜದ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ಪಂಚಮಸಾಲಿ ಸಮಾಜ ಮಾತ್ರವಲ್ಲ ಅದಿಬಣಜಿಗ, ಕೂಡು ಒಕ್ಕಲಿಗ, ಕುರುಬ ಸಮಾಜ ಹಾಗೂ ವಾಲ್ಮೀಕಿ, ಮಡಿವಾಳ ಸಮಾಜಗಳ ಮೀಸಲು ಬೇಡಿಕೆ ಈಡೇರಿಕೆಗೆ ಬೆಂಬಲಿಸಿದ್ದೇವೆ ಎಂದರು.
ಇದನ್ನೂ ಓದಿ:ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡಿಲ್ಲ, ಅವರ ನಾಯಕರ ಬಗ್ಗೆ ಹೇಳಿದ್ದೇನಷ್ಟೇ: ಈಶ್ವರಪ್ಪ
ಪಂಚಮಸಾಲಿ ಮೀಸಲು ಹೋರಾಟದ ಕುರಿತು ಚರ್ಚಿಸಲು ಗುರುವಾರ ಹುಬ್ಬಳ್ಳಿ ಖಾಸಗಿ ಹೊಟೇಲಿನಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಿದ್ದೇವೆ. ಮೀಸಲಾತಿ ನೀಡುವ ಅಧಿಕಾರವನ್ನು ಕೇಂದ್ರದ ಬದಲಾಗಿ ರಾಜ್ಯ ಸರ್ಕಾರಕ್ಕೆ ನೀಡಿ ಪ್ರಧಾನಿ ಮೋದಿ ಸರ್ಕಾರ ಕಾನೂನು ತಿದ್ದುಪಡಿ ನಿರ್ಧಾರ ಕೈಗೊಂಡಿದೆ. ಪ್ರಧಾನಿ ಮೋದಿ ಅವರು ಕಾಯ್ದೆಗೆ ತಿದ್ದುಪಡಿಗೆ ಕೈಗೊಂಡ ನಿರ್ಧಾರ ಐತಿಹಾಸಿಕವಾಗಿದೆ. ಪ್ರಧಾನಿ ಅವರು ಕೈಗೊಂಡ ಈ ನಿರ್ಧಾರ ಸ್ವಾಗತಿಸುವುದಾಗಿ ಯತ್ನಾಳ್ ಹೇಳಿದರು.
ಮೀಸಲಾತಿ ಸೌಲಭ್ಯ ಕಲ್ಪಿಸುವ ವಿಚಾರವಾಗಿ ನೆಪಗಳನ್ನು ಹೇಳದೆ ಸಿಎಂ ಬೊಮ್ಮಾಯಿ ಅವರು ನಿರ್ಧಾರ ಕೈಗೊಳ್ಳಬೇಕು. ಶೀಘ್ರವೇ ಪಂಚಮಸಾಲಿ ಸಮಾಜ ಮಾತ್ರವಲ್ಲ ಆದಿ ಬಣಜಿಗ, ಕೂಡುಒಕ್ಕಲಿಗ ಸಮಾಜಗಳಿಗೆ 2 ಎ ಮೀಸಲಾತಿ ನೀಡಬೇಕು. ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಲು ಹಾಗೂ ಎಸ್ಸಿ ಸಮಾಜದ ಮೀಸಲಾತಿಯನ್ನು ಶೇ.3 ರಿಂದ 7.5 ಕ್ಕೆ ಏರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಶಾಸಕ ಯತ್ನಾಳ್ ಆಗ್ರಹಿಸಿದರು.
ಇದಲ್ಲದೇ ಮಡಿವಾಳ, ಹಡಪದ, ಗಂಗಾಮತಸ್ತ, ತಳವಾರ, ಕೋಳಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಇದಕ್ಕಾಗಿ ಸಿಎಂ ಬೊಮ್ಮಾಯಿ ಅವರು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಅನಿವಾರ್ಯವಾಗಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಮೀಸಲು ಸೌಲಭ್ಯದ ಕುರಿತು ನಮ್ಮ ಹೋರಾಟಕ್ಕೆ ಯಾರಾದರೂ ಬರಲಿ ಬಿಡಲಿ, ನಮ್ಮ ಹೋರಾಟ ನಡೆದೇ ನಡೆಯುತ್ತದೆ. ಆಯಾ ಸಮುದಾಯದ ನಾಯಕರು, ಶಾಸಕರು ಬರದಿದ್ದರೆ ಮುಂದಿನ ಚುನಾವಣೆಯಲ್ಲಿ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು