ಚಿಂಚೋಳಿ: ಡ್ರಗ್ಸ್ ಮಾಫಿಯಾ ಮತ್ತು ಗಾಂಜಾ ಮಾದಕ ವಸ್ತುಗಳ ಅಕ್ರಮ ದಂಧೆ ಮೊದಲಿನ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗಲೂ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಡ್ರಗ್ ಮಾಫಿಯಾ ಹತ್ತಿಕ್ಕಲು ಎಲ್ಲ ಕಡೆ ದಾಳಿ ನಡೆಸಲಾಗುತ್ತಿದೆ ಎಂದು ಶಾಸಕ ಡಾ| ಅವಿನಾಶ ಜಾಧವ್ ಹೇಳಿದರು.
ಚಂದ್ರಂಪಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾಕೆ ಇಂತಹ ಅಕ್ರಮ ದಂಧೆ ಹತ್ತಿಕ್ಕಲಿಲ್ಲ. ಗೃಹ ಸಚಿವ ಬಸವರಾಜ ಬೊಮ್ಮಯಿ ಅವರು ಇಂತಹ ಅಕ್ರಮ ಚಟುವಟಿಕೆಗಳನ್ನು ನಡೆಯದಂತೆ ಕಾನೂನು ಕ್ರಮ ಕೈಗೊಂಡಿದ್ದರಿಂದ ರಾಜ್ಯದ ಎಲ್ಲ ಕಡೆ ದಾಳಿ ನಡೆಸಲಾಗುತ್ತಿದೆ. ಡ್ರಗ್ಸ್ ಮಾಫಿಯಾದಲ್ಲಿ ಯಾರೇ ಭಾಗಿಯಾಗಿದ್ದರೂ ಸಹಾ, ಅವರ ವಿರುದ್ಧ ರಾಜ್ಯ ಸರಕಾರ ಕಠಿಣ ಕ್ರಮ ಕೈಕೊಳ್ಳುತ್ತದೆ. ಯಾರು ತಪ್ಪು ಮಾಡಿದರು ಅದು ತಪ್ಪೆ. ರಾಜ್ಯ ಸರಕಾರ ಇಂತಹ ಅಕ್ರಮ ದಂಧೆಗಳಿಗೆ ಅವಕಾಶ ಕೊಡುವುದಿಲ್ಲವೆಂದು ಹೇಳಿದರು.
ತಾಲೂಕು ಗಡಿಭಾಗದಲ್ಲಿ ಇರುವುದರಿಂದ ತಾಂಡಾ ಮತ್ತು ಗ್ರಾಮಗಳಲ್ಲಿ ಗಾಂಜಾ ಮತ್ತು ಡ್ರಗ್ಸ್ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕಾಗಿದೆ. ಗಾಂಜಾ ಸೇವನೆಯಿಂದ ಮನುಷ್ಯನ ಆರೋಗ್ಯ ಜೊತೆಗೆ ಆತನ ಕುಟುಂಬವುಹಾಳಾಗುತ್ತವೆ ಎಂಬುದರ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಮಾದಕ ದ್ರವ್ಯ ಸೇವನೆ ಮತ್ತು ಗಾಂಜಾ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜನರಿಗೆ ಜಾಗೃತಿ ಮೂಡಿಸುವಲ್ಲಿ ಮಾಧ್ಯಮ ಪಾತ್ರ ಅತಿ ಮುಖ್ಯವಾಗಿದೆ ಎಂದರು.
ತಾಲೂಕಿನ ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ಜು.5ರಂದು ಏಕಾಏಕಿ ನದಿಗೆ 20 ಸಾವಿರ ಕ್ಯೂಸೆಕ್ ಹರಿದು ಬಿಟ್ಟ ಪರಿಣಾಮವಾಗಿ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಿ ಮುಂಗಾರು ಬೆಳೆಗಳಾದ ತೊಗರಿ, ಹೆಸರು, ಉದ್ದು ಇನ್ನಿತರ ಬೆಳೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಕುರಿತು ಕೃಷಿ ಮತ್ತು ಕಂದಾಯ, ತೋಟಗಾರಿಕೆ ಇಲಾಖೆನಡೆಸಿದ ಹಾನಿ ಸಮೀಕ್ಷೆ ವರದಿಯನ್ನು ಸರಕಾರಕ್ಕೆ ನೀಡಲಾಗಿದೆ. ಆದರೂ ಸಹಾ ಸರಕಾರ ಚಿಂಚೋಳಿ ತಾಲೂಕನ್ನು ಪ್ರವಾಹ ಪೀಡಿತ ಪ್ರದೇಶ ಪಟ್ಟಿಯಿಂದ ಕೈ ಬಿಟ್ಟಿರುವ ಕುರಿತು ಕಂದಾಯ ಸಚಿವರನ್ನು ಭೇಟಿಯಾಗಿಚರ್ಚಿಸುತ್ತೇನೆ. ಚಿಂಚೋಳಿ ತಾಲೂಕಿಗೂ ಬೆಳೆಹಾನಿ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಬಿಜೆಪಿ ಮುಖಂಡ ಅಜೀತ ಪಾಟೀಲ, ಭೀಮಶೆಟ್ಟಿ ಮುರುಡಾ, ರಾಜೂ ಪವಾರ, ಅಶೋಕ ಚವ್ಹಾಣ, ಪ್ರೇಮಸಿಂಗ ಜಾಧವ್, ಭೀಮಶೆಟ್ಟಿ ಮುರುಡಾ, ಶ್ರೀಮಂತ ಕಟ್ಟಿಮನಿ, ರಾಕೇಶ ಗೋಸುಲ ಇದ್ದರು.