ಅರಕಲಗೂಡು : ತಾಲೂಕು ಆಡಳಿತ ರೈತರು, ಜನ ಸಾಮಾನ್ಯರಿಗೆ ಸಕರಾತ್ಮಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಹಮ್ಮಿ ಕೊಂಡಿರುವ ಸಾರ್ವಜನಿಕ ಕುಂದುಕೊರತೆ ನಿವಾರಣೆ ಕಾರ್ಯಕ್ರಮ ರಾಜ್ಯದಲ್ಲಿಯೇ ಮಾದರಿಯಾಗಲಿ ಎಂದು ಶಾಸಕ ಎ.ಟಿ.ರಾಮಸ್ವಾಮಿ ಶುಭ ಹಾರೈಸಿದರು.
ಸೋಮವಾರ ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಕುಂದು ಕೊರತೆ ನಿವಾರಣೆ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಮುಖವಾಗಿ ಜಮೀನಿನ ದಾಖಲೆ ಸರಿಪಡಿಸಿಕೊಳ್ಳಲು, ಖಾತೆ ಬದಲಾವಣೆ, ಸರ್ವೆ ಹಾಗೂ ಸಾಮಾಜಿಕ ಭದ್ರತಾ ಯೋಜನೆ ಸೌಕ ರ್ಯ ಪಡೆದುಕೊಳ್ಳಲು ವರ್ಷ, ತಿಂಗಳುಗಳ ಕಾಲ ಅಲೆಯುವಂತಹ ವಾತವರಣ ಕುರಿತು ಜನರಿಂದ ದೂರು ಕೇಳಿಬರುತಿತ್ತು. ಇದರ ನಿವಾರಣೆಗೆ ನೂತನ ತಹಶೀಲ್ದಾರ್ ಶ್ರೀನಿವಾಸ್ ತಮ್ಮ ಅಧಿಕಾರಿ, ಸಿಬ್ಬಂದಿಗಳನ್ನು ಒಂದೆಡೆ ಸೇರಿಸಿ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಪ್ರತಿ ಸೋಮವಾರ ಬೆಳಗ್ಗೆ 10ರಿಂದ ಆಯೋಜನೆ ಮಾಡಿದ್ದಾರೆ. ಇದು ಜಿಲ್ಲೆ ಅಲ್ಲದೆ ರಾಜ್ಯಕ್ಕೆ ಮಾದರಿಯಾಗಲಿದೆ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಕೈ ಜೋಡಿಸಬೇಕೆಂದು ಸೂಚನೆ ನೀಡಿದರು.
ಜನರು ಸಹಕರಿಸಿ: ನಾನು ಕ್ಷೇತ್ರದ ಜನರನ್ನು ಕಾಯುವನಾಗಿದ್ದೇನೆ ವಿನಃ ಮೇಯುವನಲ್ಲ. ಆ ದಿಕ್ಕಿನಲ್ಲಿ ಅಧಿಕಾರಿಗಳು ಕೂಡ ಮುಂದಾಗಬೇಕಿದೆ. ಸಾರ್ಥಕತೆ ಪಡೆದುಕೊಳ್ಳಬೇಕಾದರೇ ಸಿಕ್ಕಿರುವ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕಿದೆ. ಒಂದು ದಿನದಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಇದನ್ನು ಅರ್ಥಮಾಡಿಕೊಂಡು ಜನರು ಕೂಡ ಸಹಕಾರ ಕೊಡಿ ಎಂದು ಶಾಸಕ ಎ.ಟಿ.ರಾಮಸ್ವಾಮಿ ಸಲಹೆ ನೀಡಿದರು.
ಸಮಸ್ಯೆಗಳಿಗೆ ಪರಿಹಾರ ಸಾಧ್ಯ: ತಹಶೀಲ್ದಾರ್ ಕೆ. ಆರ್.ಶ್ರೀನಿವಾಸ್ ಮಾತನಾಡಿ, ಕ್ಷೇತ್ರದ ಶಾಸಕರ ಸಲಹೆ ಮೇರೆಗೆ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಅವರ ನಿರೀಕ್ಷೆ ಸಕಾರಗೊಳಿಸಿ ಜನರ ಮೆಚ್ಚುಗೆಯನ್ನು ಅಧಿಕಾರಿ, ಸಿಬ್ಬಂದಿ ವರ್ಗ ಪಡೆದುಕೊಳ್ಳುವತ್ತಾ ಸಹಕಾರ ನೀಡಬೇಕಿದೆ. ಸಣ್ಣಪುಟ್ಟ ವ್ಯಾಜ್ಯ ಹೊರತು ಪಡಿಸಿ ದರೇ ಉಳಿದೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇದಕ್ಕೆ ಜನರ ಸಹಕಾರ ಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಬಾಸಿತ್, ಮಾಜಿ ಅಧ್ಯಕ್ಷ ಹೂವಣ್ಣ, ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಪಾಲ್ಗೊಂಡಿದ್ದರು.