Advertisement

ಕ್ಷೇತ್ರ ಜನರ ಸುರಕ್ಷತೆಗೆ ಆದ್ಯತೆ ನೀಡಿದ ಅರವಿಂದ

06:30 PM May 26, 2021 | Team Udayavani |

ಹುಬ್ಬಳ್ಳಿ: ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಗರ ಪ್ರದೇಶಕ್ಕೆ ಹೊಂದಿರುವ ಗ್ರಾಮಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಇಂತಹ ಪ್ರದೇಶಗಳಲ್ಲಿ ಸೋಂಕಿನ ಪ್ರಕರಣ ನಿಯಂತ್ರಿಸುವುದು ಸವಾಲಿನ ಕಾರ್ಯ. ಜನರ ಸುರಕ್ಷತೆಗೆ ಮುಂದಾಗಿರುವ ಹು-ಧಾ ಪಶ್ಚಿಮ ವಿಧಾನಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ವೈದ್ಯಕೀಯ ಕಿಟ್‌ಗಳ ವಿತರಣೆ ಸೇರಿದಂತೆ ವಿವಿಧ ನೆರವಿನ ಕಾರ್ಯ ಕೈಗೊಳ್ಳುತ್ತಿದ್ದಾರೆ.

Advertisement

ಹು-ಧಾ ಪಶ್ಚಿಮ ವಿಧಾನಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ತಮ್ಮ ಕ್ಷೇತ್ರದ ಜನರ ಯೋಗಕ್ಷೇಮದ ಜತೆಗೆ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಆಸ್ಪತ್ರೆಗಳ ಬಲವರ್ಧನೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಪ್ರಮುಖವಾಗಿ ಜಿಲ್ಲಾಸ್ಪತ್ರೆ, ಜತ್ತಿ ಆಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಲು ಮುಂದಾಗಿದ್ದಾರೆ. ಕೋವಿಡ್‌ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಲ್ಲಿ ಪ್ರಮುಖವಾಗಿ ಬೇಕಾದ ಆಕ್ಸಿಜನ್‌ ವ್ಯವಸ್ಥೆಗೆ ಹೆಚ್ಚಿನ ಕಾಳಜಿ ತೋರಿದ್ದಾರೆ. ಚಾಮರಾಜ ನಗರ ಜಿಲ್ಲೆಯಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ಆಕ್ಸಿಜನ್‌ ದಾಸ್ತಾನು, ಪೂರೈಕೆಗೆ ಹೆಚ್ಚು ಒತ್ತು ನೀಡಿದ್ದಾರೆ.

ಇದರೊಂದಿಗೆ ಕೋವಿಡ್‌ ಜಾಗೃತ ಜಾಥಾಗಳನ್ನು ಮಾಡಿದ್ದಾರೆ. ಸ್ನೇಹಿತರು, ಉದ್ಯಮಿಗಳು, ವಿವಿಧ ಸಂಘ-ಸಂಸ್ಥೆಗಳ ನೆರವು ಪಡೆದು ಈಗಾಗಲೇ 50 ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ತಮ್ಮ ಕ್ಷೇತ್ರ ವ್ಯಾಪ್ತಿಯ ಆಸ್ಪತ್ರೆಗಳಿಗೆ ಹಂಚಿಕೆ ಮಾಡಿದ್ದಾರೆ. ಇದರೊಂದಿಗೆ ತಮ್ಮ ಸ್ನೇಹಿತ ಉದ್ಯಮಿಗಳಿಂದ 100 ಆಕ್ಸಿಜನ್‌ ಖಾಲಿ ಸಿಲಿಂಡರ್‌ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದು, ಆಸ್ಪತ್ರೆಗಳಲ್ಲಿ ಅಗತ್ಯ ಆಕ್ಸಿಜನ್‌ ದಾಸ್ತಾನು ಹಾಗೂ ಪೂರೈಕೆಗೆ ಸಾಕಷ್ಟು ಅನುಕೂಲವಾಗಿದೆ. ಇನ್ನಷ್ಟು ಆಕ್ಸಿಜನ್‌ ಕಾನ್ಸಂಟ್ರೇಟರ್ ತರುವ ಕೆಲಸ ಮಾಡುತ್ತಿದ್ದಾರೆ.

ದೇಶಪಾಂಡೆ ಫೌಂಡೇಶನ್‌, ಆರೆಸ್ಸೆಸ್‌ ವತಿಯಿಂದ ಮಾಡಿರುವ ಕೋವಿಡ್‌ ಕೇರ್‌ ಕೇಂದ್ರಗಳ ಬಲವರ್ಧನೆಗೂ ಪ್ರಯತ್ನಗಳು ನಡೆದಿವೆ. ಮೆಡಿಕಲ್‌ ಕಿಟ್‌ ಪರಿಣಾಮಕಾರಿ: ಆರಂಭದಲ್ಲೇ ಕೋವಿಡ್‌ ಸೋಂಕಿಗೆ ಚಿಕಿತ್ಸೆ ಪಡೆಯದೆ ಕೊನೆಯ ಹಂತದಲ್ಲಿ ಆಸ್ಪತ್ರೆಗಳಿಗೆ ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಪ್ರದೇಶಗಳನ್ನು ಗುರುತಿಸಿ ವಿಟಾಮಿನ್‌ ಸಿ, ಜಿಂಕ್‌, ಪ್ಯಾರಾಸಿಟಮಲ್‌ ಸೇರಿದಂತೆ ಇನ್ನಿತರೆ ಮಾತ್ರೆಗಳ ಕಿಟ್‌ ವಿತರಿಸುವ ಕೆಲಸ ಪಾಲಿಕೆ, ಆರೋಗ್ಯ ಇಲಾಖೆಯಿಂದ ಪಕ್ಷದ ಪ್ರಮುಖರ ಮೂಲಕ ಮಾಡುತ್ತಿದ್ದಾರೆ.

ಸಣ್ಣ ಪ್ರಮಾಣದಲ್ಲಿ ಕೆಮ್ಮು, ಜ್ವರ, ಮೈಕೈ ನೋವು, ಶೀತ ಕಾಣಿಸಿಕೊಂಡರೆ ಈ ಮಾತ್ರೆಗಳನ್ನು ತೆಗೆದುಕೊಳ್ಳುವುದು. ಕಡಿಮೆಯಾಗದಿದ್ದರೆ ವಿಳಂಬ ಮಾಡದೆ ಆಸ್ಪತ್ರೆ ತೆರಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಇದರೊಂದಿಗೆ ಮನೆಯಲ್ಲಿ ಸೋಂಕಿನ ಲಕ್ಷಣ ಹೊಂದಿದವರ ಮಾಹಿತಿ ಪಡೆಯುವ ಕೆಲಸ ಮಾಡಲಾಗುತ್ತಿದೆ. ಕ್ಷೇತ್ರ ವ್ಯಾಪ್ತಿಯ ನವಲೂರು, ಸಿದ್ದೇಶ್ವರ ನಗರ, ಅನಂದ ನಗರ, ಸುತಗಟ್ಟಿ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಇದರ ನಿಯಂತ್ರಣಕ್ಕೆ ಮೆಡಿಕಲ್‌ ಕಿಟ್‌ನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಇದರ ಮೂಲಕ ಸೋಂಕಿತರನ್ನು ಪತ್ತೆ ಹಚ್ಚುವ ಕೆಲಸ, ಆರಂಭದಲ್ಲೇ ಔಷಧೋಪಚಾರ ನೀಡಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next