ಶಿವಮೊಗ್ಗ: ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ಶಿಸ್ತಿನ ಪಕ್ಷವೆಂದೇ ಹೆಸರಾಗಿರುವ ಬಿಜೆಪಿಯಲ್ಲಿ ಸಚಿವ ಸ್ಥಾನ ವಂಚಿತರ ಅಸಮಧಾನ ಪರ್ವ ಮುಂದುವರಿಯುತ್ತಿದೆ. ಇದಕ್ಕೆ ಹೊಸ ಸೇರ್ಪಡೆಯೆಂಬಂತೆ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಈ ಕುರಿತಾಗಿ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.
ನಾನೂ 4 ಬಾರಿ ಶಾಸನಾಗಿದ್ದು ಪಕ್ಷಕ್ಕಾಗಿ ವಿದ್ಯಾರ್ಥಿ ದೆಸೆಯಿಂದ ದುಡಿದ್ದೇನೆ, ಆದ್ರೆ ಪಕ್ಷ ನನಗೆ ಸಚಿವ ಸ್ಥಾನ ನೀಡಬೇಕಿತ್ತು ಆದರೆ ಸಚಿವ ಸ್ಥಾನ ಸಿಗದೇ ಇರುವುದು ನೋವಾಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ನಾನೂ ಪಕ್ಷಕ್ಕೆ ಡ್ಯಾಮೇಜ್ ಮಾಡಲು ಬಯಸುವುದಿಲ್ಲ, ಇನ್ನು ಪಕ್ಷ ಕಟ್ಟಲು ಶ್ರಮ ಪಡುತ್ತೇನೆ. ಹಿರಿಯರು ನಮ್ಮ ಕೆಲಸವನ್ನು ನೋಡಿ ಇನ್ನು ಒಳ್ಳೆಯ ಸ್ಥಾನಮಾನ ನೀಡಬೇಕು.ನನ್ನ ಪಕ್ಷ ತತ್ವ ಸಿದ್ಧಾಂತಗಳ ನಡುವೆ ಬೆಳೆದಿದೆ, ನನಗೂ ನಿರೀಕ್ಷೆ ಇತ್ತು ಆದ್ರೆ ಹಾಗೆ ಆಗಲಿಲ್ಲ, ಹಿರಿಯರಿಗೆ ಅವಕಾಶ ನೀಡಲು ನನ್ನನ್ನು ಕಡೆಗಣಿಸಬಾರದು ಸರ್ಕಾರ ನಮ್ಮದು ಎಂಬುದು ಒಂದು ಸಮಾಧಾನ ಇದೆ ಎಂದು ಹೇಳಿದರು.
ನನಗೆ ಲಾಬಿ ಮಾಡಲು ಬರುವುದಿಲ್ಲ, ಲಾಬಿ ಮಾಡುವುದೂ ಇಲ್ಲ. ಪಕ್ಷ ಮೊದಲು ಎಂದು ಯೋಚನೆ ಮಾಡುವವನು ನಾನು. ಈಶ್ವರಪ್ಪ ಹಾಗೂ ಯಡಿಯೂರಪ್ಪ ನವರ ನಡುವೆ ಬೆಳೆದವನು ನಾನೂ ಹಾಗಾಗಿ ಯಾರಿಗೂ ಕೇಳಬೇಕಿಲ್ಲ, ಯಡಿಯೂರಪ್ಪನವರೆ ತಿಳಿದುಕೊಂಡು ಕೊಡಬೇಕಿತ್ತು.
ಕ್ಷೇತ್ರದ ಜನತೆ ನನಗೆ ಸಚಿವ ಸ್ಥಾನ ಸಿಗುತ್ತೆ ಎಂದು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ನಿಗಮ ಮಂಡಳಿಯ ಬಗ್ಗೆ ನನಗೆ ಆಸಕ್ತಿ ಇಲ್ಲ, ನನಗೆ ಬೇಕಾಗಿಯೂ ಇಲ್ಲ ಎಂದು ಹೇಳಿದರು.