Advertisement

ಶಾಸಕಿ ಅನಿತಾಗೆ ಗ್ರಾಮಸ್ಥರಿಂದ ಪ್ರಶ್ನೆಗಳ ಸುರಿಮಳೆ  

02:34 PM Mar 02, 2023 | Team Udayavani |

ಹಾರೋಹಳ್ಳಿ: ಹಾರೋಹಳ್ಳಿ ಹೋಬಳಿಯ ಬೋಕಿಪುರ ಗ್ರಾಮದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಮುನೇಶ್ವರ ದೇವಸ್ಥಾನದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದರು.

Advertisement

ನಂತರ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮಗಳ ಆಶೀರ್ವಾದದಿಂದ ನಾನು ಮತ್ತು ನನ್ನ ಪತಿ ಕುಮಾರಸ್ವಾಮಿ ಅವರು ಶಾಸಕ ರಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಲು ಮುಂದಿನ ಚುನಾವಣೆಯಲ್ಲಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಗ್ರಾಮಸ್ಥರ ಆಕ್ರೋಶ: ಬೋಕಿಪುರ ಗ್ರಾಮದಲ್ಲಿ ಅಂಗನವಾಡಿ ಕಟ್ಟಡವಿಲ್ಲ. ನಮ್ಮ ಮಕ್ಕಳು ಒಂದು ಕಿ.ಮೀ. ನಡೆದುಕೊಂಡು ಕಾಡುದಾರಿಯಲ್ಲಿ ಹೋಗಬೇಕು, ನಮ್ಮ ಗ್ರಾಮದಲ್ಲಿ ಮುನೇಶ್ವರ ದೇವಾಲಯವಿದ್ದೂ ಇಲ್ಲದಂತಾಗಿದೆ. ಇಲ್ಲಿ ಒಂದು ಸಮುದಾಯಭವನವಿಲ್ಲ. ಕಾಡುದಾರಿ ಅಗಲೀಕರಣವಾಗಬೇಕು, ಕಾಡು ಪ್ರಾಣಿಗಳ ಹಾವಳಿಯಿಂದ ಬೇಸತ್ತಿದ್ದೇವೆ. ನೀವು ಚುನಾವಣೆ ಬಂದಾಗ ಬಂದು ಭರವಸೆ ಕೊಟ್ಟು ಹೋಗುತ್ತೀರಿ, ಆನಂತರದ ದಿನಗಳಲ್ಲಿ ನಮ್ಮ ಗ್ರಾಮದ ಕಡೆ ತಲೆಹಾಕಿಯೂ ನೋಡುವುದಿಲ್ಲ, ಕೆಲಸಗಳನ್ನು ಮಾಡಿಸುವುದಿಲ್ಲ. ಯಾರೋ ಒಬ್ಬರು ಮುಖಂಡರು ಹೇಳಿದಂತೆ ಕೇಳುತ್ತೀರಿ, ನೆಪಮಾತ್ರಕ್ಕೆ ಬಂದು ಗುದ್ದಲಿ ಪೂಜೆ ಮಾಡುತ್ತೀರಿ. ಆದರೆ, ಮತ್ತೆ ಕಾಮಗಾರಿ ನಡೆಯುವುದಿಲ್ಲ ಇದು 2-3 ಬಾರಿ ಆಗಿದೆ. ನಮ್ಮ ಸಮಸ್ಯೆಗಳಿಗೆ ಸ್ಪಂದಿಸದ ಮೇಲೆ ನಿಮ್ಮನ್ನು ಏಕೆ ಗೆಲ್ಲಿಸ ಬೇಕು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್‌ ಮುಖಂಡರಾದ ಮೇಡಮಾರನಹಳ್ಳಿ ಕುಮಾರ್‌, ಜೆಸಿಬಿ ಕರಿಯಪ್ಪ, ಅಗರಗಣೇಶ್‌, ವಡೆರಹಳ್ಳಿ ಶಂಕರಪ್ಪ, ಶೇಖರ್‌, ಕೊಟ್ಟಗಾಳು ಚಂದ್ರು, ಯುವ ಮುಖಂಡ ಪ್ರದೀಪ್‌ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಗ್ರಾಮಕ್ಕೆ ಸೇರಿಸಲ್ಲ: ಎಚ್ಚರಿಕೆ : ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿ ಗ್ರಾಮಗಳಲ್ಲಿ ಚರಂಡಿ, ರಸ್ತೆ ಮತ್ತು ಕಿರು ಸೇತುವೆಗಳಿಗೆ ಗುದ್ದಲಿ ಪೂಜೆ ಮಾಡಿದ್ದೀರಿ. ಆದರೆ, ಯಾವ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಕೇವಲ ನೆಪಮಾತ್ರಕ್ಕೆ ಚುನಾವಣೆ ಸಮಯದಲ್ಲಿ ಬಂದು ಗುದ್ದಲಿ ಪೂಜೆಯನ್ನು ಮಾಡುತ್ತೀರಿ, ಆದರೆ, ಜನರನ್ನು ನಂಬಿಸಲು ಮಾತ್ರ. ಈ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ನಮ್ಮ ಗ್ರಾಮಕ್ಕೆ ಸೇರಿಸುವುದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next