ರಾಮನಗರ: ಬಗರ್ ಹುಕುಂ ಸಾಗುವಳಿದಾರರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಲು ಬಿಡುವುದಿಲ್ಲ. ಹಕ್ಕುಪತ್ರಕ್ಕಾಗಿ ಅರ್ಜಿ ಹಾಕಿರುವವರ ಪರವಾಗಿ ನಿಲ್ಲುತ್ತೇನೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.
ನಗರದ ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಬಗರ್ ಹುಕುಂ ಸಾಗುವಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಬಗರ್ ಹುಕುಂ ಸಾಗುವಳಿದಾರರು ಸಲ್ಲಿಸಿರುವ ನೂರಾರು ಅರ್ಜಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಕೆಲವು ಅರ್ಜಿಗಳನ್ನು ಖುದ್ದು ಪರಿಶೀಲಿಸಿದರು.
ಅರ್ಜಿದಾರರ ಮಾಹಿತಿ ಸಂಗ್ರಹಿಸಿ: ಪ್ರಭಾವಿಗಳ ಒತ್ತಡ, ಶಿಪಾರಸ್ಸುಗಳಿಗೆ ಅಧಿಕಾರಿಗಳು ಮಣಿದುಅರ್ಹರಲ್ಲದವರಿಗು ಬಗರ್ ಹುಕುಂ ಸಾಗುವಳಿ ಚೀಟಿ ನೀಡಬಾರದು ಎಂದು ಸೂಚಿಸಿದರು.ಅರ್ಜಿ ಹಾಕಿರುವವರ ಜಮೀನಿನ ಸಮೀಕ್ಷೆ ನಡೆಸಬೇಕು. ಅರ್ಜಿದಾರರ ಬಗ್ಗೆ ಮಾಹಿತಿ ಸಂಗ್ರಹಿಸ ಬೇಕು. ಅರ್ಹ ಫಲಾನುಭವಿಗಳಿಗೆ ಮಾತ್ರ ಭೂಮಿಮಂಜೂರು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ಈಗಾಗಲೆ ಬಗರ್ ಹುಕುಂ ಸಾಗುವಳಿ ಚೀಟಿ ಇದ್ದು ಅರ್ಹತೆ ಇದ್ದವರಿಗೆ ಭೂಮಿ ಮಂಜೂರುಮಾಡಲು ಅಗತ್ಯ ಕ್ರಮವನ್ನು ವಹಿಸಿ. ಸರ್ಕಾರಕ್ಕೆ ಮಾಹಿತಿ ಕೊಡಿ. ನಿಯಮಬದ್ಧವಾಗಿ ಪರಿಶೀಲನೆ ನಡೆಸಿ ಎಂದರು.
ಕೋವಿಡ್ ಪರಿಹಾರ ವಿತರಣೆ: ರಾಮನಗರ ತಾಲೂಕಿನ ನಾಲ್ಕೂ ಹೋಬಳಿಗಳಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ 21 ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ.ಪರಿಹಾರದ ಹಣವನ್ನುಚೆಕ್ ರೂಪದಲ್ಲಿ ರಾಮನಗರ ಶಾಸಕರಾದ ಅನಿತಾ ಕುಮಾರಸ್ವಾಮಿ ಮತ್ತು ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್ ವಿತರಿಸಿದರು. ಅವರಿಗೆಲ್ಲ ಸಾಂತ್ವನ ಹೇಳಿದರು. ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬಗಳ ಮಹಿಳೆಯರಿಗೆ ಉದ್ಯೋಗ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಈ ವೇಳೆ ತಹಶೀಲ್ದಾರ್ ವಿಜಯಕುಮಾರ್ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು. ಮಾಗಡಿ ವಿಧಾನಸಭಾ ಕ್ಷೇತ್ರದ ಕೂಟಗಲ್‌ಹೋಬಳಿಯ 3 ಕುಟುಂಬಗಳು, ಬಿಡದಿ ಹೋಬಳಿಯ 7 ಕುಟುಂಬಗಳು, ರಾಮನಗರ ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿಯ 7 ಕುಟುಂಬಗಳು ಮತ್ತು ಕೈಲಾಂಚ ಹೋಬಳಿಯ 4 ಕುಟುಂಬಗಳಿಗೆ ತಲಾ 1 ಲಕ್ಷ ರೂ ಪರಿಹಾರದ ಚೆಕ್ಕುಗಳನ್ನು ವಿತರಿಸಲಾಯಿತು.