Advertisement

ಸರ್ಕಾರದಿಂದ ಕಲ್ಯಾಣ ಕರ್ನಾಟಕ ನಿರ್ಲಕ್ಷ್ಯ: ಶಾಸಕ ಬಯ್ಯಾಪೂರ

07:58 PM Aug 24, 2020 | Hari Prasad |

ಕೊಪ್ಪಳ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಬೇಕಾದ ರಾಜ್ಯ ಸರ್ಕಾರದಿಂದ ಪ್ರಸಕ್ತ ವರ್ಷದಲ್ಲಿ ಅನುದಾನವನ್ನೇ ಕೊಟ್ಟಿಲ್ಲ.

Advertisement

ಈ ಕುರಿತಾಗಿ ಕಾರ್ಯದರ್ಶಿಯವರನ್ನು ಕೇಳಿದರೆ ಸರ್ಕಾರದಿಂದ ಅನುಮತಿಯೇ ಸಿಕ್ಕಲ್ಲವೆಂದು ಹೇಳುತ್ತಿದ್ದಾರೆ. ಇದೊಂದು ದುರ್ದೈವದ ಸಂಗತಿ. ಕಲ್ಯಾಣ ಕರ್ನಾಟಕ ಭಾಗವನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಕುಷ್ಟಗಿ ಶಾಸಕ ಅಮರೆಗೌಡ ಬಯ್ಯಾಪೂರ ಆರೋಪಿಸಿದರು.

ಕಲ್ಯಾಣ ಕರ್ನಾಟಕ ಮಂಡಳಿಗೆ ಪ್ರತಿ ವರ್ಷ 1500 ಕೋಟಿ ರೂ. ಅನುದಾನ ಕೊಡಬೇಕು. ಆದರೆ ಈ ವರ್ಷ ಕೋವಿಡ್ ಇದೆ ಎಂಬ ಕಾರಣ ನೀಡಿ ಸರ್ಕಾರ ಇದನ್ನು 1100 ಕೋಟಿ ರೂ.ಗೆ ಕಡಿತ ಮಾಡಿದೆ ಎಂದು ಹೇಳಿತ್ತು ಮಾತ್ರವಲ್ಲದೇ ಈ ಕುರಿತಾಗಿ ನಮ್ಮಿಂದ ಪ್ರಸ್ತಾವನೆಗಳನ್ನೂ ಪಡೆದಿಕೊಂಡಿದೆ.

ಆದರೆ ಆರ್ಥಿಕ ವರ್ಷವು ಆರು ತಿಂಗಳು ಕಳೆಯುತ್ತಾ ಬಂದರೂ ಅನುದಾನವನ್ನೇ ಕೊಟ್ಟಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರೂ ಇದ್ದಾರೆ. ಅವರ ಹಕ್ಕನ್ನೇ ಮೊಟಕುಗೊಳಿಸುವ ಕೆಲಸವನ್ನು ಈ ಸರಕಾರ ಮಾಡುತ್ತಿದೆ ಎಂದು ಶಾಸಕ ಬಯ್ಯಾಪುರ ಅವರು ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾದೇಶಿಕ ನಿಧಿ ಇರುತ್ತದೆ. ಶೇ.6ರಷ್ಟು ಅನುದಾನ ಮೀಸಲಿರುತ್ತೆ. ಅದನ್ನು ಹೇಗೆ ವೆಚ್ಚ ಮಾಡುತ್ತಾರೆ ಎನ್ನುವುದೇ ಗೊತ್ತಾಗುತ್ತಿಲ್ಲ. ಆಡಳಿತದ ವೆಚ್ಚವನ್ನು ಕೇವಲ ಕಲಬುರ್ಗಿ ಕೇಂದ್ರಿಕೃತವಾಗಿದೆ. ಬೇರೆ ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಮಂಡಳಿಗೆ ಪತ್ರ ವ್ಯವಹಾರ ವೆಚ್ಚಕ್ಕೆ ಅನುದಾನ ಇಲ್ಲದಂತಾಗಿದೆ ಎಂದರು.

Advertisement

ವಿಶೇಷವೆಂಬಂತೆ, ಕಲ್ಯಾಣ ಕರ್ನಾಟಕ ಮಂಡಳಿಗೆ ಅಧ್ಯಕ್ಷರನ್ನು ಮಾನದಂಡ ಇಲ್ಲದೇ ನೇಮಕ ಮಾಡಲಾಗಿದೆ. ಈ ಭಾಗದ ಶಾಸಕರು ಸದಸ್ಯರಾಗಬೇಕು. ಜಿಲ್ಲಾ ಮಂತ್ರಿಗಳು ಸದಸ್ಯರಾಗಬೇಕು. ಆದರೆ ಅವರ‍್ಯಾರನ್ನು ನೇಮಕ ಮಾಡಿಲ್ಲ. ಕೇವಲ ಅಧ್ಯಕ್ಷರೊಬ್ಬರನ್ನೇ ನೇಮಕ ಮಾಡಿದೆ. ಮಂಡಳಿಯಿಂದ ಒಂದು ಸಭೆಯೂ ಆಗಿಲ್ಲ. ವರ್ಷ ಪೂರೈಸಿ, ಎರಡನೇ ವರ್ಷಕ್ಕೆ ಕಾಲಿರಿಸಿದೆ. ವಿವಿಧ ಇಲಾಖೆಗಳಿಗೆ ಅನುದಾನ ಬಾರದ ಕಾರಣ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷ ಕಾನೂನು ಬಂದ ಬಳಿಕ ನೇಮಕಾತಿಗೆ ಯಾವುದೇ ಆರ್ಥಿಕ ನಿರ್ಬಂಧ ಇಲ್ಲವೇ ಇಲ್ಲ. ಯಾವುದೇ ಸಂದರ್ಭದಲ್ಲಿ ನೇಮಕ ಪ್ರಕ್ರಿಯೆ ನಡೆಸಬಹುದು. ಆದರೆ ಸರ್ಕಾರವು ಅದಕ್ಕೆ ತಡೆಯೊಡ್ಡಿದೆ. ಆದರೆ ಯಾವುದೇ ನೇಮಕವೂ ನಡೆಯುತ್ತಿಲ್ಲ. ಸರ್ಕಾರ ನೇಮಕಾತಿಯಲ್ಲಿ ನಿಯಮ ಉಲ್ಲಂಘಿಸಿದೆ.

ಇಡೀ ರಾಜ್ಯದಲ್ಲಿ ಖಾಲಿ ಇರುವ ಹುದ್ದೆಯ ಶೇ.40ರಷ್ಟು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆಯಿದೆ. ಇದರಿಂದ ಪ್ರಾಥಮಿಕ ಶಿಕ್ಷಣ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದರು.

ಇನ್ನು ರಾಜ್ಯ ಸರ್ಕಾರವು ಕಕ ಭಾಗಕ್ಕೆ ಸೇಡಂ ಅವರ ಅಧ್ಯಕ್ಷತೆಯಲ್ಲಿ ಸಂಘ ಸ್ಥಾಪನೆ ಮಾಡಿದೆ. ಆದರೆ ಈ ಬಗ್ಗೆ ಮಾಹಿತಿಯೇ ಇಲ್ಲ. ಅದಕ್ಕೊಂದು ನಿಯಮಾವಳಿಯೂ ಇಲ್ಲ. ಸಂಘದ ಕಾರ್ಯವೇನೂ ಎನ್ನುವುದು ನಮಗೆ ಗೊತ್ತಿಲ್ಲ. ಇದರ ಹಿಂದೆ ಯಾವ ಉದ್ದೇಶವಿದೆಯೋ ಗೊತ್ತಿಲ್ಲ. ಅನುದಾನ ಕಡಿತ ಸೇರಿ ಇತರೆ ವಿಷಯಗಳ ಕುರಿತು ಸದನದಲ್ಲಿ ಮಾತನಾಡಲಿದ್ದೇನೆ ಎಂದು ಶಾಸಕರು ಇದೇ ಸಂದರ್ಭದಲ್ಲಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next