ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಗೊಂದಲ ಹಾಗೂ ಜಂಜಾಟಗಳು ನಡೆಯುತ್ತಿದ್ದರೂ ಈ ಗೊಂದಲಗಳಿಗೆ ತಲೆಕೆಡಿಸಿಕೊಳ್ಳದ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ರವಿವಾರ ಬೆಳಗ್ಗೆ ಎಂದಿನಂತೆ ಕೈಯಲ್ಲಿ ಸಲಕೆ ಹಿಡಿದು ಸ್ವಚ್ಛತಾ ಕಾರ್ಯಕ್ಕೆ ತೆರಳಿದರು.
ಪ್ರತಿ ರವಿವಾರ ತಮ್ಮ ಕ್ಷೇತ್ರದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿಕೊಂಡು ಬಂದಿರುವ ಶಾಸಕ ಅಭಯ ಪಾಟೀಲ ದಿನನಿತ್ಯ ನಡೆಯುತ್ತಿರುವ ರಾಜಕೀಯ ಜಂಜಾಟದಲ್ಲೂ ಇದನ್ನು ಮುಂದುವರಿಸಿಕೊಂಡು ಬಂದಿರುವುದು ಕ್ಷೇತ್ರದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಉಳಿದ ಶಾಸಕರಂತೆ ರೆಸಾರ್ಟ್‌ಗೆ ಹೋಗದೆ ಅಧಿವೇಶನ ಮುಗಿಸಿ ಕ್ಷೇತ್ರಕ್ಕೆ ಬಂದಿರುವ ಶಾಸಕ ಅಭಯ ಪಾಟೀಲ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು.
ವ್ಯಾಪಕ ಮಳೆಯಿಂದಾಗಿ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾರ್ಯಕ್ಕೆ ಇಳಿದರು. ಇವರ ಜೊತೆ ಕಾರ್ಯಕರ್ತರು ಹಾಗೂ ಬಡಾವಣೆಗಳ ನಿವಾಸಿಗಳು ಸಹ ಕೈ ಜೋಡಿಸಿದರು.
ಹಾಳಾದ ರಸ್ತೆಯ ದುರಸ್ತಿ, ಒಳಚರಂಡಿ, ಕಸ ವಿಲೇವಾರಿ, ಸ್ವಚ್ಛತೆ, ಮುಂತಾದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದ ಶಾಸಕರು ಜನಸಾಮಾನ್ಯರ ಭಾವನೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದರು.
ಬಾಗೇವಾಡಿ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆ ಮೆಟ್ಟಿಲು ಹತ್ತಿರುವ ಅಭಯ ಪಾಟೀಲ 12 ವರ್ಷಗಳ ಹಿಂದೆ ತಮ್ಮ ಕ್ಷೇತ್ರದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದು, ಈಗಲೂ ಅದನ್ನು ಮುಂದುವರಿಸಿಕೊಂಡು ಬಂದಿದ್ದಲ್ಲದೆ ಜನರಲ್ಲಿ ಸಹ ಇದರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.