ಹೊಸದಿಲ್ಲಿ: ಮೀ ಟೂ ಆಭಿಯಾನದಲ್ಲಿ ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿದ್ದ ಕೇಂದ್ರ ವಿದೇಶಾಂಗ ರಾಜ್ಯ ಖಾತೆ ಸಚಿವ ಎಂ.ಜೆ.ಅಕ್ಬರ್ ಅವರು ಭಾನುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ವರದಿಯಾಗಿದೆ.
ನೈಜಿರೀಯಾ ಪ್ರವಾಸಕ್ಕೆ ತೆರಳಿದ್ದ ಅಕ್ಬರ್ ಅವರು ದೆಹಲಿಗೆ ಆಗಮಿಸಿದ್ದು, ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಈ ಬಗ್ಗೆ ನಂತರ ಹೇಳಿಕೆ ನೀಡುವುದಾಗಿ ತಿಳಿಸಿದರು.
ಅಕ್ಬರ್ ವಿರುದ್ಧ ಸಿಡಿದೆದ್ದಿದ್ದ ಭಾರತೀಯ ಪತ್ರಕರ್ತೆಯರ ಆರೋಪಗಳಿಗೆ ಸಿಎನ್‌ಎನ್ ವಾಹಿನಿಯ ಪತ್ರಕರ್ತೆ ಮಜಿ ಡಿ ಪುಯ್ ಕಾಂಪ್ ದನಿಗೂಡಿಸಿದ್ದರು. 1990ರಲ್ಲಿ ಅಕ್ಬರ್ ಏಷ್ಯನ್ ಏಜ್ ಸಂಪಾದಕರಾಗಿದ್ದಾಗ, ತರಬೇತಿಗಾಗಿ ಅವರ ಸಂಸ್ಥೆ ಸೇರಿದ್ದ ತಮ್ಮೊಂದಿಗೆ ಅಕ್ಬರ್ ಅಸಭ್ಯವಾಗಿ ವರ್ತಿಸಿದ್ದರು ಎಂದು “ಹಫಿಂಗ್ಟನ್ ಪೋಸ್ಟ್’ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದರು.
ಪ್ರಧಾನಿ ತುರ್ತು ಸಭೆ
ಅಕ್ಬರ್ ರಾಜೀನಾಮೆ ನೀಡಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಸಭೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.