ಮಹಾನಗರ: ನಗರ ಬೆಳೆಯುತ್ತಿರುವಂತೆಯೇ ಹಸುರು ಮಾಯವಾಗುತ್ತದೆ ಎಂಬ ಆಕ್ಷೇಪ ಸಾಮಾನ್ಯ. ಇಂತಹ ಅಪವಾದ ದೂರ ಮಾಡುವ ನಿಟ್ಟಿನಲ್ಲಿ ಮಿಯಾವಾಕಿ ಮುಖೇನ “ಗ್ರೀನ್ ಮಂಗಳೂರು’ ಪರಿಕಲ್ಪನೆ ನಗರದಲ್ಲಿ ಸದ್ದಿಲ್ಲದೆ ಅನುಷ್ಠಾನ ಪಡೆಯುತ್ತಿರುವುದು ನಗರದ ಹಸುರೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದೆ.
ಕಡಿಮೆ ಜಾಗ ದಲ್ಲಿ ದಟ್ಟವಾಗಿ ಕಾಡು ಬೆಳೆಸುವ ಜಪಾನ್‌ನ “ಮಿಯಾವಾಕಿ’ ಮಾದರಿ ಸದ್ಯ ಮಂಗಳೂರಿನ ವಿವಿಧ ಭಾಗಗಳಲ್ಲಿ ಅನುಷ್ಠಾನ ಪಡೆಯುತ್ತಿದೆ. ಈ ಮೂಲಕ ನಗರದಲ್ಲಿ ಹಸುರಿನ ಜಾಗೃತಿ ಅಲ್ಲಲ್ಲಿ ಕೇಳಿಬರುತ್ತಿದೆ.
ದೇಶವೇ ಕೊಂಡಾಡುವ ಸ್ವರೂಪದಲ್ಲಿ ನಗರ ಸ್ವತ್ಛತೆಯ ಕಾರ್ಯ ನಡೆಸಿದ ಮಂಗಳೂರಿನ ಶ್ರೀ ರಾಮಕೃಷ್ಣ ಮಠ ಈಗಾಗಲೇ ಮೂರು ಇಂತಹ ಮಿಯಾವಾಕಿ ಪರಿಕಲ್ಪನೆಯನ್ನು ಮಂಗಳೂರಿನಲ್ಲಿ ಜಾರಿಗೆ ತಂದಿದೆ. 2019ರ ಅಕ್ಟೋಬರ್ 2ರಂದು ಕೊಟ್ಟಾರದ ಜಿಲ್ಲಾ ಪಂಚಾಯತ್ ಮುಂಭಾಗದಲ್ಲಿ ಮಿಯಾವಾಕಿ ಆರಂಭವಾಯಿತು. ಇಲ್ಲಿ 4 ಸೆಂಟ್ಸ್ ಜಾಗದಲ್ಲಿ 103 ಜಾತಿಯ 238 ಗಿಡಗಳನ್ನು ನೆಡಲಾಗಿದ್ದು ಈಗ ಅವು ಸೊಂಪಾಗಿ ಬೆಳೆಯುತ್ತಿವೆ. ಸಾಮಾನ್ಯವಾಗಿ ಇಷ್ಟು ಜಾಗದಲ್ಲಿ 10-12 ಗಿಡಗಳನ್ನು ನೆಡಲಾಗುತ್ತದೆ. ಆದರೆ ಮಿಯಾವಾಕಿ ಮಾದರಿಯಲ್ಲಿ 600 ಗಿಡಗಳನ್ನು ಬೆಳೆಸಬಹುದಾಗಿದೆ. ಸದ್ಯ ಇಲ್ಲಿ 238 ಗಿಡಗಳನ್ನು ಬೆಳೆಸಲಾಗಿದೆ. ಇಲ್ಲಿ ಅರ್ತಿ, ಶ್ರೀಗಂಧ, ರಕ್ತಚಂದನ, ಪೇರಳೆ, ಮಾವು, ಹಲಸು, ಪುನರ್ಪುಳಿ, ನೇರಳೆ ಸೇರಿದಂತೆ ಹಣ್ಣು ಹಾಗೂ ಇತರ ಜಾತಿಯ ಮರಗಳಿವೆ. ಸಹಜವಾದ ಕಾಡಿನಲ್ಲಿ ಇರಬೇಕಾದ ವಿವಿಧ ಜಾತಿಯ ಗಿಡಗಳನ್ನು ಬೆಳೆಸಲಾಗಿದೆ. ಬಳಿಕ ರಾಮಕೃಷ್ಣ ಮಠದಲ್ಲಿ 2020ರ ಅ.2ರಂದು ಹಾಗೂ 2022ರ ಜ.1ರಂದು ಮಿಯಾವಾಕಿಯ ಎರಡು ಅವತರಣಿಕೆ ಆರಂಭವಾಯಿತು. ಈ ಮೂಲಕ ನಗರದಲ್ಲಿ ಮಿಯಾವಾಕಿ ಪರಿಕಲ್ಪನೆ ಬಹು ಆಯಾಮದಿಂದ ಸುದ್ದಿಯಾಗುವಲ್ಲಿ ಕಾರಣವಾಯಿತು.
ಸದ್ಯ ರಾಮಕೃಷ್ಣ ಮಠ ಕೈಗೊಂಡ ಮಿಯಾವಾಕಿಯನ್ನು ಬಹುಮಂದಿ ಕಂಡು ಇಂತಹುದೇ ಪರಿಕಲ್ಪನೆ ಜಾರಿಗೊಳಿಸುವಂತೆ ಕೇಳಿಕೊಂಡಿದ್ದಾರೆ. 20 ಮಂದಿ ಇದರ ಬಗ್ಗೆ ವಿಚಾರಿಸಿದ್ದು ತಮ್ಮ ವ್ಯಾಪ್ತಿಯ ಸ್ಥಳದಲ್ಲಿ ಗಿಡ ನೆಡಲು ಕೋರಿದ್ದಾರೆ. ಜತೆಗೆ ರಾಮಕೃಷ್ಣ ಮಠವು ನಗರದ 100 ಕಡೆಗಳಲ್ಲಿ ಮಿಯಾವಾಕಿ ಅನುಷ್ಠಾನಕ್ಕೆ ಇಚ್ಚಾಶಕ್ತಿ ಪ್ರದರ್ಶಿಸಿದೆ.
ಈ ಮಧ್ಯೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಮಿಯಾವಾಕಿ ಆರಂಭದ ಬಗ್ಗೆ ಒಲವು ಹೊಂದಿದ್ದು, ಸ್ಥಳ ಸಮೀಕ್ಷೆಗೆ ಮುಂದಾಗಿದೆ. ಶಾಸಕ ವೇದವ್ಯಾಸ್ ಕಾಮತ್ ಅವರು ಕೂಡ ಮಿಯಾವಾಕಿ ಬಗ್ಗೆ ಪೂರಕವಾಗಿ ಸ್ಪಂದಿಸಿದ್ದು, ಮಂಗಳೂರು ಪಾಲಿಕೆ ವತಿಯಿಂದ ಇಂತಹ ಪರಿಕಲ್ಪನೆ ಜಾರಿಗೆ ಮುಂದಡಿ ಇಟ್ಟಿದ್ದಾರೆ.
ಪರಿಸರ ಕಾರ್ಯಕರ್ತ ಜೀತ್ ಮಿಲನ್ ರೋಚ್ ಅವರ ಮೂಲಕ ಪಡೀಲ್ ರೈಲ್ವೆ ಸೇತುವೆಯ ಇಕ್ಕೆಲಗಳಲ್ಲಿ ಮಿಯಾವಾಕಿ ಶುರುವಾಗಿದೆ.ಇನ್ನು ಅರಣ್ಯ ಇಲಾಖೆ ಮೂಲಕವೂ ಈ ಪ್ರಯತ್ನ ನಡೆದಿದೆ.
ಮಿಯಾವಾಕಿ ಪರಿಹಾರ
ವಿವಿಧ ಕಾರಣಗಳಿಂದ ಹಸುರು ಮಾಯವಾಗುತ್ತಿದೆ. ಮಂಗಳೂರು ನಗರದಲ್ಲಿಯೂ ಶುದ್ಧ ಗಾಳಿಯ ಕೊರತೆ ಉದ್ಭವಿಸದಿರಲು ಹಸುರು ಅನಿವಾರ್ಯ ವಾಗಿದೆ. ಇದೆಲ್ಲದಕ್ಕೆ ಸದ್ಯದ ಸ್ಥಿತಿಯಲ್ಲಿ ಮಿಯಾವಾಕಿ ಕಾಡುಗಳೇ ಪರಿಹಾರ. ಕೊಟ್ಟಾರಚೌಕಿಯಲ್ಲಿ ಆರಂಭಿಸಿದ ಮಿಯಾವಾಕಿ ಕಾಡು ನಿರೀಕ್ಷಿತ ರೀತಿಯಲ್ಲಿ ಬೆಳೆಯುತ್ತಿದೆ. ಇದೇ ಮಾದರಿಯಲ್ಲಿ ನಗರದ 100 ಕಡೆ ಬೆಳೆಸುವ ಚಿಂತನೆಯಿದೆ. ಸ್ವತ್ಛತೆಯಂತೆ ಹಸುರಿಗೂ ಆದ್ಯತೆ ಈ ಸಮಯದ ಅಗತ್ಯ.
– ಶ್ರೀ ಏಕಗಮ್ಯಾನಂದ ಸ್ವಾಮೀಜಿ, ಶ್ರೀ ರಾಮಕೃಷ್ಣ ಮಠ, ಮಂಗಳೂರು
-ದಿನೇಶ್ ಇರಾ