Advertisement

ಮಿಯಾವಕಿ ಫಾರೆಸ್ಟ್ ಮಾದರಿ ಅರಣ್ಣೀಕರಣ

05:50 PM Jun 15, 2021 | Team Udayavani |

ವರದಿ: ಶಿವಶಂಕರ ಕಂಠಿ

Advertisement

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಗೋಕುಲ ರಸ್ತೆ-ಶಿರೂರ ಪಾರ್ಕ್‌ ರಸ್ತೆಯ ತೋಳನ ಕೆರೆ ಹತ್ತಿರ ತನ್ನ ಒಡೆತನದ 2.5 ಎಕರೆ ಜಾಗೆಯಲ್ಲಿ ಜಪಾನ್‌ ದೇಶದ ಸಸ್ಯತಜ್ಞ ಡಾ| ಅಕಿರಾ ಮಿಯಾವಕಿ ಅಭಿವೃದ್ಧಿಪಡಿಸಿರುವ ಮಿಯಾವಕಿ ಫಾರೆಸ್ಟ್‌ (ಅರಣ್ಯ) ಮಾದರಿಯಲ್ಲಿ ನಗರ ಅರಣ್ಯೀಕರಣ ಅಭಿವೃದ್ಧಿ ಪಡಿಸಲು ಮುಂದಾಗಿದೆ.

ಈಗಾಗಲೇ ತೋಳನ ಕೆರೆ ಪ್ರದೇಶದಲ್ಲಿ ಹು-ಧಾ ಸ್ಮಾರ್ಟ್‌ಸಿಟಿ ವತಿಯಿಂದ ಕೆರೆ ಅಭಿವೃದ್ಧಿ ಪಡಿಸಲಾಗಿದೆ. ಈ ಪ್ರದೇಶದಲ್ಲಿ ಜನಸಾಂದ್ರತೆ ಹೆಚ್ಚಾಗಿದೆ. ಹೀಗಾಗಿ ಜನಸಂಖ್ಯೆಗೆ ಅನುಗುಣವಾಗಿ ಹಸಿರು ಜಾಗ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪಾಲಿಕೆಯು 2.5 ಎಕರೆ ವಿಸ್ತೀರ್ಣದ ಜಾಗದಲ್ಲಿ ಅರ್ಧ ಎಕರೆ ಅರ್ಬನ್‌ ಫಾರೆಸ್ಟರಿ, ಅರ್ಧ ಎಕರೆ ಟ್ರೀ ಪಾರ್ಕ್‌, ಅರ್ಧ ಎಕರೆ ಗಿಡಮೂಲಿಕೆಗಳು ಹಾಗೂ ಅರ್ಧ ಎಕರೆ ತೆರೆದ ಜಾಗ ಮೀಸಲಿಡಲು ಉದ್ದೇಶಿಸಿದೆ. ಆ ಮೂಲಕ ಮಿಯಾವಕಿ ಫಾರೆಸ್ಟ್‌ (ಅರಣ್ಯ) ಮಾದರಿಯಲ್ಲಿ ಸ್ಥಳೀಯ ಸಸ್ಯ ಸಂಕುಲಗಳನ್ನು ಬೆಳೆಸಿ ನಗರ ಅರಣ್ಯೀಕರಣ ಮಾಡುವ ಗುರಿ ಹೊಂದಲಾಗಿದೆ.

ನಗರ ಪ್ರದೇಶದ ಜನರು ಒತ್ತಡದ ಜೀವನ ಶೈಲಿಯಿಂದ ಮುಕ್ತಿ ಹೊಂದಲು ನವೀನ ಶೈಲಿಯಲ್ಲಿ ಆಧುನಿಕತೆಗನುಗುಣವಾಗಿ ಅರ್ಬನ್‌ ಲಂಗ್‌ ಸ್ಪೇಸ್‌ ಅಥವಾ ಅರ್ಬನ್‌ ಫಾರೆಸ್ಟರಿ ಅಭಿವೃದ್ಧಿಪಡಿಸಿ ಮೂಲ ಸೌಕರ್ಯ ಒದಗಿಸಲು ಪಾಲಿಕೆ ಬದ್ಧವಾಗಿದೆ. ತನ್ಮೂಲಕ ಮಾನವ ಹಾಗೂ ಪ್ರಕೃತಿಯ ಸಂಬಂಧ ಬೆಸೆಯಲು ಪ್ರಯತ್ನಿಸಬಹುದಾಗಿದೆ.

ಖಾಸಗಿ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿ ಅಡಿ ಹಾಗೂ ಸ್ಥಳೀಯರು ತಮ್ಮ ಪ್ರೀತಿ ಪಾತ್ರರ ನೆನಪಿಗಾಗಿ ಮೆಮೊರಿ ಪ್ಲಾಂಟೆಶನ್ ಮಾದರಿಯಲ್ಲಿ ಗಿಡಗಳನ್ನು ನೆಡುವುದರಿಂದ, ಅವರ ಸಹಭಾಗಿತ್ವ ಹಾಗೂ ವೈಯಕ್ತಿಕ ಆಸಕ್ತಿ ಬೆಳೆಸಬಹುದಾಗಿದೆ.

Advertisement

ಮಿಯಾವಕಿ ಅರಣ್ಯ ಹೇಗಿರಲಿದೆ: ಸಾಂಪ್ರದಾಯಿಕ ಅರಣ್ಯಗಳಿಗಿಂತ 30 ಪಟ್ಟು ಹೆಚ್ಚು ದಟ್ಟವಾಗಿರುತ್ತದೆ. ಕನಿಷ್ಟ 50ರಿಂದ 100 ಬಗೆಯ ವಿವಿಧ ಜಾತಿಯ ಸ್ಥಳೀಯ ಸಸ್ಯಸಂಕುಲಗಳನ್ನು ಹೊಂದಿರುತ್ತದೆ. ಸಾಂಪ್ರದಾಯಿಕ ಅರಣ್ಯಗಳಿಗಿಂತ 30 ಪಟ್ಟು ಹೆಚ್ಚು ಶಬ್ದಮಾಲಿನ್ಯ ಹಾಗೂ ವಾಯುಮಾಲಿನ್ಯ ತಡೆಯುತ್ತದೆ. ಏಕರೂಪದ ನೆಡುತೋಪುಗಳಿಗೆ ಹೋಲಿಸಿದಾಗ ಶೇ.30 ಹೆಚ್ಚು ಇಂಗಾಲದ ಡೈ ಆಕ್ಸೈಡ್‌ ಹೀರುವ ಸಾಮರ್ಥ್ಯ ಹೊಂದಿರುತ್ತದೆ. ವೇಗವಾಗಿ ಬೆಳೆಯುವ, ಸಾವಯವ, ಸುಸ್ಥಿರ ಹಾಗೂ ಸ್ಥಳೀಯ ಜೀವವೈವಿಧ್ಯ ಪೋಷಿಸುತ್ತದೆ. ಔಷಧಿ ಗಿಡಮೂಲಿಕೆ ಸಸ್ಯಗಳನ್ನು ಪೋಷಿಸಿ ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಸಂರಕ್ಷಿಸುವ ನಿಟ್ಟಿನಲ್ಲಿ ಪಾಲಿಕೆ ಅರ್ಧ ಎಕರೆ ಜಾಗೆಯಲ್ಲಿ ಗಿಡಮೂಲಿಕೆ ಸಸ್ಯಗಳನ್ನು ಬೆಳೆಸಲು ಉದ್ದೇಶಿಸಿದ್ದು, ಹಲವಾರು ಸಂಘ-ಸಂಸ್ಥೆಗಳು ಪಾಲಿಕೆಗೆ ಕೈಜೋಡಿಸಲಿವೆ. ಎಲ್ಲಾ ಗಿಡಮೂಲಿಕೆ ಸಸ್ಯಗಳಿಗೆ ಸ್ಥಳೀಯ ಹೆಸರು ಹಾಗೂ ವೈಜ್ಞಾನಿಕ ಹೆಸರು ಸೂಚಿಸುವ ನಾಮಫಲಕಗಳನ್ನು (ಬೊಟೊನಿಕಲ್ ನೇಮ್ ಬೋರ್ಡ್ಸ್) ಅಳವಡಿಸಲಾಗುತ್ತಿದ್ದು, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಾಯಕಾರಿಯಾಗಿರಲಿದೆ. ಪ್ರಸ್ತುತ 15ನೇ ಹಣಕಾಸು ಯೋಜನೆಯಡಿ 38 ಲಕ್ಷ ರೂ. ಅನುದಾನ ಹಾಗೂ ಮಹಾನಗರ ಪಾಲಿಕೆ ಸಾಮಾನ್ಯ ನಿಧಿ ಯ 30 ಲಕ್ಷ ರೂ.ಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹಿರಿಯ ನಾಗರಿಕರಿಗೆ, ಮಕ್ಕಳಿಗೆ, ಯುವಕರಿಗೆ ವಾಯುವಿಹಾರ ಮಾಡಲು ವಾಕಿಂಗ್‌ ಪಾಥ್‌ ವೇ, ಬೀದಿದೀಪ ಹಾಗೂ ಇತರೆ ಮೂಲ ಸೌಕರ್ಯಗಳನ್ನು 130 ಲಕ್ಷ ರೂ. ಗಳಲ್ಲಿ ಅಭಿವೃದ್ಧಿಪಡಿಸಲು ಪಾಲಿಕೆ ಯೋಜಿಸಿದೆ. ರೋಟರಿ ಹುಬ್ಬಳ್ಳಿ ಸಂಸ್ಥೆಯವರು 33 ಲಕ್ಷ ರೂ. ವೆಚ್ಚದಲ್ಲಿ 1.50 ಎಕರೆ ಪ್ರದೇಶದಲ್ಲಿ ಮಿಯಾವಕಿ ಫಾರೆಸ್ಟ್ ಹರ್ಬಲ್ ಮೆಡಿಕಲ್ ಪ್ಲಾಂಟ್ ಹಾಗೂ ಟ್ರೀ ಪಾರ್ಕ್‌ ಅಭಿವೃದ್ಧಿಪಡಿಸಿ 1 ವರ್ಷ ನಿರ್ವಹಣೆ ಮಾಡಿ ಪಾಲಿಕೆಗೆ ಹಸ್ತಾಂತರಿಸಲಿದೆ. ಇತರೇ ಮೂಲ ಸೌಕರ್ಯಗಳನ್ನು ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಕಾನೊಪಿ ವಾಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಈ ಪ್ರದೇಶದ ಸೌಂದರ್ಯ ಹೆಚ್ಚಿಸಬಹುದಾಗಿದೆ.

ಮಿಯಾವಕಿ ಫಾರೆಸ್‌ ,ಅರಣ್ಣೀಕರಣ, ಟ್ರೀ ಪಾರ್ಕ್‌, ಹರ್ಬಲ್ ಮೆಡಿಕಲ್ ಪ್ಲಾಂಟ್,

 

Advertisement

Udayavani is now on Telegram. Click here to join our channel and stay updated with the latest news.

Next