ಕಾರ್ಕಳ: ತುಳುನಾಡಿನ ಕಂಬಳ ಕ್ರೀಡೆ ವಿಶ್ವಾದ್ಯಂತ ಪ್ರಸಿದ್ಧಿ ಗೊಂಡಿದೆ. ಈ ಕ್ರೀಡೆಯೂ ಕೆಲವು ಅಡೆತಡೆಯ ನಡುವೆಯೂ ನಿರಾತಂಕ ವಾಗಿ ನಡೆದು ಬಂದಿದೆ. ಕಂಬಳ ಕ್ರೀಡೆಗೆ ದೈವ-ದೇವರ ಸಂಬಂಧವಿದೆ ಎಂದು ಮಿಯ್ನಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರಿದಾಸ್ ಭಟ್ ಹೇಳಿದರು,
ಮಿಯ್ಯಾರು ಕಂಬಳ ಸಮಿತಿ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಇದರ ಸಹಯೋಗದಲ್ಲಿ ಶನಿವಾರ ನಡೆದ 17ನೇ ವರ್ಷದ ಲವಕುಶ ಜೋಡುಕರೆ ಬಯಲು ಕಂಬಳದ ಉದ್ಘಾಟನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಂಬಳ ವಿಶ್ವಪರ್ಯಂತ ನಡೆಯುವಂತಾಗಲಿ ಕೃಷಿ ವ್ಯಾಪ್ತಿ ಕಡಿಮೆಯಾಗಿ ಜಾನುವಾರು ಸಾಕಣೆ ಕುಸಿತದ ಸ್ಥಿತಿಯಲ್ಲಿಯೂ ಕಂಬಳ ಕ್ರೀಡೆ ತನ್ನ ಪ್ರಸಿದ್ಧಿಯನ್ನು ವಿಸ್ತರಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಕಂಬಳ ಕ್ರೀಡೆ ವಿಶ್ವ ಪರ್ಯಂತ ನಡೆಯುವಂತಾಗಲಿ ಎಂದು ಹಾರೈಸಿದರು.
ಶಾಸಕ ವಿ. ಸುನಿಲ್‌ಕುಮಾರ್ ಕಂಬಳ ಸ್ಪರ್ಧೆ ಉದ್ಘಾಟಿಸಿದರು. ಈ ಸಂದರ್ಭ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಜೀವನ್‌ದಾಸ್ ಅಡ್ಯಂತಾಯ, ಜಿ.ಪಂ. ಸದಸ್ಯ ಉದಯ್ ಕೋಟ್ಯಾನ್, ಗ್ರಾ.ಪಂ. ಅಧ್ಯಕ್ಷ ಗಿರೀಶ್ ಅಮೀನ್, ಜಿಲ್ಲಾ ಕಂಬಳ ಸಮಿತಿ ಮಾಜಿ ಅಧ್ಯಕ್ಷ ಎಂ. ಸದಾನಂದ ಶೆಟ್ಟಿ ಬೆಳುವಾಯಿ, ಪ್ರಮುಖರಾದ ಬೋರ್ಕಟ್ಟೆ ಪ್ರಭಾಕರ ಶೆಟ್ಟಿ, ಭಾಸ್ಕರ ಎಸ್. ಕೋಟ್ಯಾನ್, ಸುನಿಲ್‌ಕುಮಾರ್ ಬಜಗೋಳಿ, ಅಂತೋನಿ ಡಿ’ಸೋಜ ನಕ್ರೆ, ಉಮೇಶ್ ರಾವ್, ಪ್ರಕಾಶ್ ಬಲಿಪ, ಶುಭದಾ ರಾವ್, ಸುರೇಶ್ ಕೆ. ಪೂಜಾರಿ, ಸಂತೋಷ್ ಕುತೊìಟ್ಟು, ಪದ್ಮಪ್ರಸಾದ್, ಜೀವೆಂದರ್ ಹೆಗ್ಡೆ ಬೋರ್ಕಟ್ಟೆ, ಮಾಳ ದಿನೇಶ್ ಶೆಟ್ಟಿ, ಮಾಳ ಶೇಖರ್ ಶೆಟ್ಟಿ, ರಮೇಶ್ ರಾವ್, ಜೆರಾಲ್ಡ್ ಡಿ’ಸೋಜ, ಶಾಂತಿರಾಜ್, ಮಾಧವ ಕಾಮತ್, ಪಶುಸಂಗೋಪನ ಇಲಾಖೆಯ ಅಧಿಕಾರಿ ರಾಜಶೇಖರ್ ಮೊದಲಾದವರು ಉಪಸ್ಥಿತರಿದ್ದರು. ಕಂಬಳ ಸಂಘಟನ ಕಾರ್ಯದರ್ಶಿ ಕೆ. ಗುಣಪಾಲ ಕಾರ್ಯಕ್ರಮ ನಿರ್ವಹಿಸಿದರು.
ಮಿಯ್ನಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ, ವಿಶೇಷ ಹೂ ಪೂಜೆ ನಡೆಸಿ, ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿತ್ತು.
ಸ್ಪರ್ಧೆಗೆ ಚಾಲನೆ
ಉದ್ಘಾಟನೆ ಬಳಿಕ ಕೋಣಗಳನ್ನು ಗದ್ದೆಗೆ ಇಳಿಸುವ ಕಾರ್ಯ ನಡೆಯಿತು. ಆರಂಭದಲ್ಲಿ ನೇಗಿಲು ಕಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ಹಗ್ಗ ಹಿರಿಯ, ಕನೆ ಹಲಗೆ ಮತ್ತು ಅಡ್ಡ ಹಲಗೆ ಸ್ಪರ್ಧೆ ಗಳು ನಡೆದವು. ವಿವಿಧೆಡೆಗಳಿಂದ ಕಂಬಳ ಕ್ರೀಡೆಯ ಅಭಿಮಾನಿಗಳು ಆಗಮಿಸಿದ್ದರು.
ಕಂಬಳ ಊರಿನ ಉತ್ಸವ
ಮಿಯ್ನಾರು ಚರ್ಚ್ ಧರ್ಮಗುರು ಎ. ಫಾ. ಪಾವುಲ್ ರೇಗೋ ಮಾತನಾಡಿ, ಜಾನಪದ ಕ್ರೀಡೆ ಕಂಬಳ ಊರಿನ ಉತ್ಸವ. ರಾತ್ರಿ -ಹಗಲು ಕಾಲಿಡಲು ಸಾಧ್ಯವಾಗದಷ್ಟು ಜನಸಂದಣಿ ಸೇರುವ ಈ ಕ್ರೀಡೆಯನ್ನು ಎಲ್ಲರೂ ಸವಿಯುತ್ತಾರೆ. ಕೋಣ ಸಾಕುವುದು ಕಾಯಕಲ್ಪ ಎಂದು ಅಭಿಪ್ರಾಯಪಟ್ಟರು.