ಕಾರ್ಕಳ : ಬಜಗೋಳಿ ಮಿಯ್ಯಾರು ರಾಷ್ಟ್ರೀಯ ಹೆದ್ದಾರಿಯ ಜೋಡುಕಟ್ಟೆಯ ಕಾಜರ್‌ಬೈಲ್ ಸೇತುವೆ ಬಳಿ ರಸ್ತೆ ಕೆಟ್ಟಿದ್ದು, ವಾಹನ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.
ಈ ಹೆದ್ದಾರಿಯು ಮಿಯ್ಯಾರು ಪಂಚಾಯತ್ ವ್ಯಾಪ್ತಿಯಲ್ಲಿ ಹಾದು ಹೋಗಿದೆ. ರಸ್ತೆ ಬದಿಯಲ್ಲೇ ಕುಡಿಯುವ ನೀರಿನ ಭೂಗತ ಪೈಪ್ ಕೂಡ ಹಾದು ಹೋಗಿದ್ದು. ಇತ್ತೀಚೆಗೆ ಅದು ಕೆಟ್ಟು ಹೋದ ಹಿನ್ನೆಲೆಯಲ್ಲಿ ಇದನ್ನು ಸಂಬಂಧಿಸಿದವರು ದುರಸ್ತಿ ಪಡಿಸಿದ್ದಾರೆ. ಕಾಜರ್‌ಬೈಲ್ ಸೇತುವೆಯ ಒಂದು ಬದಿ ಅಗೆದು ಕಾಮಗಾರಿ ನಡೆಸಿ, ಪೈಪ್ ಮರು ಜೋಡಿಸಿ ಸರಿಪಡಿಸಲಾಗಿದೆ. ರಸ್ತೆ ಅಗೆಯುವಾಗ ಹೆದ್ದಾರಿ ರಸ್ತೆಗೂ ಹಾನಿಯಾಗಿದೆ.
ಅನಂತರದಲ್ಲಿ ಮುಚ್ಚುವಾಗ ಹಾನಿಯಾದ ಸ್ಥಳವನ್ನು ಹಿಂದಿನಂತೆ ಸರಿಯಾಗಿ ಮುಚ್ಚದೆ ಬಿಡಲಾಗಿದೆ. ಗುಂಡಿ ತೋಡಿದ ಜಾಗದಲ್ಲಿ ಕಲ್ಲು ಇಡಲಾಗಿದ್ದು, ಅವು ಮೇಲ್ಭಾಗದಲ್ಲೇ ಇವೆ. ವಾಹನ ಸಂಚರಿಸುವಾಗ ಇವುಗಳು ತೊಂದರೆ ಕೊಡುತ್ತಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನಕ್ಕೆ ಸಹಸ್ರಾರು ವಾಹನಗಳು ವೇಗವಾಗಿ ಸಂಚಾರ ನಡೆಸುತ್ತಿದ್ದು, ಇದೇ ವೇಳೆ ಅಗೆದಿಟ್ಟ ಜಾಗದ ಕಲ್ಲುಗಳಿಂದ ಅಪಾಯ ಸಂಭವಿಸುತ್ತಿವೆ. ಬಹುಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಇಲ್ಲಿ ಹೆಚ್ಚು ಅಪಘಾತಕ್ಕೆ ಒಳಗಾಗುತ್ತಿರುತ್ತಾರೆ.
ಲಘು, ಘನ ವಾಹನಗಳು ಒಂದಕ್ಕೊಂದು ಸೈಡ್ ಕೊಟ್ಟು ತೆರಳುವಾಗ ಸ್ಥಳದಲ್ಲಿನ ಕಲ್ಲುಗಳಿಗೆ ಗುದ್ದಿ ಬೀಳುವ ಸನ್ನಿವೇಶವೇ ಹೆಚ್ಚು. ರಾತ್ರಿ ವೇಳೆ ಹಲವು ಅಪಘಾತಗಳು ಈ ಸ್ಥಳದಲ್ಲಿ ಸಂಭವಿಸಿದ್ದೂ ಇದೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಜಾಗವನ್ನು ಇದೇ ರೀತಿ ಇಟ್ಟಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟೂ ಅವಘಡಗಳು ಸಂಭವಿಸಿ ಜೀವಹಾನಿ ಸಂಭವಿಸುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಗುಂಡಿ ತೋಡಿಟ್ಟವರು ವೈಜ್ಞಾನಿಕವಾಗಿ ಹಿಂದಿನಂತೆ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಸರಿಪಡಿಸಿಕೊಡಬೇಕು ಎಂದು ವಾಹನ ಸವಾರರು ಹೇಳುತ್ತಾರೆ.
ಸ್ಥಳ ಪರಿಶೀಲನೆ ನಡೆಸಿ ಕ್ರಮ
ಹೆದ್ದಾರಿ ಬದಿ ಕಾಮಗಾರಿಗೆಂದು ಅಗೆದ ಸ್ಥಳ ಅಪಾಯಕಾರಿ ಸ್ಥಿತಿಯಲ್ಲಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು ನಾನು ಸ್ಥಳ ಪರಿಶೀಲನೆ ನಡೆಸಿ ಅನಂತರ ಅದರ ಬಗ್ಗೆ ಕ್ರಮ ವಹಿಸಲಾಗುವುದು.
-ಮಹಾದೇವ,, ಪಿಡಿಒ . ಮಿಯ್ನಾರು ಗ್ರಾ.ಪಂ.
ರಸ್ತೆ ಮುಚ್ಚದೆ ಹಾಗೆಯೇ ಬಿಡಲಾಗಿದೆ
ಇತ್ತೀಚೆಗೆ ಕಾಮಗಾರಿ ನಡೆಸಲೆಂದು ರಸ್ತೆಯನ್ನು ಅಗೆಯಲಾಗಿತ್ತು. ಅನಂತರ ಇದನ್ನು ಸರಿಯಾಗಿ ಮುಚ್ಚದೆ ಹಾಗೆಯೇ ಬಿಡಲಾಗಿದೆ. ಇಲ್ಲಿ ಸಾಮಾನ್ಯವಾಗಿ ರಾತ್ರಿ ಅಪಘಾತ ಆಗುತ್ತಿರುತ್ತವೆ.
-ಮೇಕ್ಸ್ , ಸ್ಥಳೀಯರು