Advertisement

ಮಿಶ್ರ ಬೆಳೆ, ಸಮ್ಮಿಶ್ರ ಆದಾಯ

03:26 PM Apr 03, 2017 | |

ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯ ಜೈನಾಪೂರ ಗ್ರಾಮದ ದುಂಡಪ್ಪ ಯಲ್ಲಪ್ಪ ಗೊಳಸಂಗಿ ಎನ್ನುವ ರೈತ, ತಂತ್ರಜ್ಞಾನವನ್ನು ಬಹಳ ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಲಕ್ಷ, ಲಕ್ಷ ಲಾಭ. ದುಂಡಪ್ಪ ಅವರದ್ದು 45 ಎಕರೆ ಜಮೀನಿದೆ. ಅದರಲ್ಲಿ 24 ಎಕರೆ
ನೀರಾವರಿ. ಮೂರು ಬೋರವೆಲ್‌ ಇದ್ದು, 5 ಬಾವಿ ಜಲ ಮೂಲ. 20 ಎಕರೆ ಒಣ ಬೇಸಾಯ. ಕಳೆದ 15 ವರ್ಷಗಳಿಂದ ಈರುಳ್ಳಿ, ಜೋಳ, ಮೆಣಸಿನಕಾಯಿ, ಬದನೆ, ಟೊಮೆಟೊ, ಸೌತೆ, ಹೀರೆಕಾಯಿ ಹಾಗೂ ಕೊತ್ತಂಬರಿ ಬೆಳೆಯುತ್ತಿದ್ದಾರೆ. 4 ಎಕರೆಯ ಕೊತ್ತಂಬರಿಯಲ್ಲಿ ತಿಂಗಳಿಗೆ ಒಂದು ಲಕ್ಷ ಆದಾಯವಿದೆ.

Advertisement

ಬೆಳೆಯುವ ವಿಧಾನ
ಭೂಮಿಯನ್ನು ಮೊದಲು ಹದ ಮಾಡಿಕೊಂಡು, ಉತ್ತಮ ಗುಂಟೂರು ಕೊತ್ತಂಬರಿ ಬೀಜವನ್ನು ಊರಿ ನೀರು ಹಾಯಿಸುತ್ತಾರೆ.
ಒಂದು ವಾರದಲ್ಲಿ ಬೀಜ ಮೊಳಕೆ ಒಡೆದು ಸಸಿಯಾಗುತ್ತದೆ. 15 ದಿನಗಳ ನಂತರ ಕಳೆ ತೆಗೆಸಲಾಗುತ್ತದೆ. 35 ದಿನಗಳ ಕಾಲ ಚೆನ್ನಾಗಿ ನಿರ್ವಹಣೆ ಮಾಡಿ ಕಳೆ ಹಾಗೂ ರೋಗ ಬಾರದಂತೆ ಕಾಪಾಡಿಕೊಂಡು ಬಂದರೆ ಕೊತ್ತಂಬರಿ ಉತ್ತಮ ಇಳುವರಿ. ಆದಾಯ ಗ್ಯಾರಂಟಿ ಅನ್ನೋದನ್ನು ದುಂಡಪ್ಪ ತೋರಿಸಿದ್ದಾರೆ. ಈ ಬೆಳೆಗೆ ಕನಿಷ್ಟ ವಾರಕ್ಕೊಮ್ಮೆ ನೀರು ಕೊಟ್ಟರೆ ಸಾಕು. “ಎಕರೆಗೆ 50 ಕ್ವಿಂಟಾಲ್‌ ಯೂರಿಯಾ ಗೊಬ್ಬರ ಹಾಕುತ್ತೇವೆ. ಎಲ್ಲಾ ಖರ್ಚು ತೆಗೆದು ಪ್ರತಿ ಎಕರೆಗೆ ಒಂದು ಲಕ್ಷ ರೂಗಳ ಆದಾಯ ಬರೀ ಕೊತ್ತಂಬರಿಯಿಂದ ಬರುತ್ತದೆ. ವಿಜಯಪುರದ ಮಾರುಟ್ಟೆಗೆ ತೆರಳಿ ಮಾರಾಟ ಮಾಡಿಕೊಂಡು ಬರುವೆ ಎನ್ನುತ್ತಾರೆ ದುಂಡಪ್ಪ.

ಇವರಿಗೆ ಈರೆ ಬೆಳೆಯಿಂದ ನಿತ್ಯ ಒಂದು ಸಾವಿರ ಆದಾಯವಿದೆ. ಹತ್ತು ಎಕರೆಯಲ್ಲಿರುವ ಪುನಾ ಪರಸಂಗಿ ಈರುಳ್ಳಿಯಿಂದ 15 ಲಕ್ಷ ರೂ. ಆದಾಯ ಸಿಗುತ್ತಿದೆ. ಗೋವಿನಜೋಳದಿಂದ 2 ಲಕ್ಷ, ಬದನೆ, ಮೆಣಸಿನಕಾಯಿಂದ ಒಂದು ಲಕ್ಷ ಹೀಗೆ ಪಟ್ಟಿ ಹಾಕುತ್ತಾ ಹೋದರೆ ದುಂಡಪ್ಪನವರ ಆದಾಯ ದುಪ್ಪಟ್ಟು.  

ಮಾಹಿತಿಗೆ -9611181214

ಗುರುರಾಜ.ಬ.ಕನ್ನೂರ

Advertisement
Advertisement

Udayavani is now on Telegram. Click here to join our channel and stay updated with the latest news.

Next