Advertisement

108 ವರ್ಷ ಪೂರೈಸಿದ ಮಿತ್ತೂರು ಸರಕಾರಿ ಹಿ.ಪ್ರಾ. ಶಾಲೆ

10:15 AM Nov 17, 2019 | Team Udayavani |

1910 ಶಾಲೆ ಆರಂಭ
2018ರಲ್ಲಿ “ಹಸಿರು ಶಾಲೆ’ ಪ್ರಶಸ್ತಿಯಿಂದ ಪುರಸ್ಕೃತ

Advertisement

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಮಾಣಿ: ಇಡ್ಕಿದು ಗ್ರಾಮದ ಮಿತ್ತೂರು ಭಂಡಾರದ ಮನೆ ಭಟ್ಟರ ಮನೆಯಲ್ಲಿ ಪಾಠ ಶಾಲೆ ನಡೆಯುತ್ತಿತ್ತು. ಭಟ್ಟರ ಕಾಲಾನಂತರ ಅಧಿಕೃತ ದಾಖಲೆಯಂತೆ 1910ರಲ್ಲಿ ಈ ಶಾಲೆಯನ್ನು ಬಂಟ್ವಾಳ – ಪುತ್ತೂರು ಹೆದ್ದಾರಿ ಸಮೀಪ ಮಿತ್ತೂರಿಗೆ ಸ್ಥಳಾಂತರಿಸಲಾಗಿತ್ತು. ಮುಳಿ ಹುಲ್ಲಿನ ಜೋಪಡಿ ನಿರ್ಮಿಸಿ 108 ವರ್ಷಗಳ ಹಿಂದೆ ಶಾಲೆ ಆರಂಭಿಸಲಾಗಿತ್ತು. ಆಗ 16 ಮಕ್ಕಳಿದ್ದು, 1ರಿಂದ 4ನೇ ತರಗತಿ ನಡೆಸಲಾಗಿತ್ತು. ಬೆಂಕಿಯಿಂದ ನಾಶವಾದ ಶಾಲೆಯನ್ನು ಅಂದಿನ ಶಿಕ್ಷಕ ಅನಂತಾಡಿ ಗೌಡ ಮೇಸ್ಟ್ರೆ, ಗಣ್ಯರಾದ ಮಿತ್ತೂರು ಈಶ್ವರ ಪೂಜಾರಿ ಹತ್ತಿರದ ಗುಡ್ಡದಲ್ಲಿ ನಿರ್ಮಿಸುವುದಾಗಿ ನಿರ್ಧರಿಸಿದರು. ಸ್ಥಳೀಯರಾದ ಎಂ.ಎಚ್‌. ನಾರಾಯಣ ಭಟ್‌ ಈಗ ಶಾಲೆ ಇರುವ ಗುಡ್ಡದಲ್ಲಿ 50 ಸೆಂಟ್ಸ್‌ ಜಾಗವನ್ನು 500 ರೂ.ಗೆ ಖರೀದಿಸಿ ಶಾಲೆಗೆ ದಾನ ನೀಡಿದ್ದರು. ಹೀಗೆ ಆರಂಭವಾದ ಶಾಲೆಗೆ ಬಳಿಕ ಸರಕಾರದ ಅನುದಾನದಲ್ಲಿ ನಾಲ್ಕುಕೊಠಡಿಗಳನ್ನು ನಿರ್ಮಿಸಲಾಗಿತ್ತು.

ಮುಖ್ಯ ಶಿಕ್ಷಕರು
ಮಮ್ಮಿ ಮೇಸ್ಟ್ರೆ ಮೊದಲ ಮುಖ್ಯ ಶಿಕ್ಷಕರು, ಪಿಯದ ಮಸ್ಕರೇನ್ಹಸ್‌ 20 ವರ್ಷ, ವಿಟuಲ ಮಡಿವಾಳ 30 ವರ್ಷ ಸೇವೆ ಸಲ್ಲಿಸಿ ದ್ದಾರೆ. ಸೆವರಿನ್‌ ಮಾರ್ಟಿಸ್‌, ನಾರಾಯಣ ನಾಯ್ಕ, ಲೀಲಾವತಿ, ಪ್ರಭಾವತಿ, ವಿಲ್ಮಾ ಸಿಕ್ವೇರಾ ಸೇವೆ ಸಲ್ಲಿಸಿದ್ದಾರೆ. ಇಲ್ಲಿನ ಶಿಕ್ಷಕಿಯರೇ ತಮ್ಮ ವೇತನದ ಒಂದು ಪಾಲು ನೀಡಿ ಗೌರವ ಶಿಕ್ಷಕಿಯನ್ನು ನಿಯೋಜಿಸಿದ್ದಾರೆ. ಪ್ರಸ್ತುತ 106 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 2019ರ ಜೂನ್‌ನಲ್ಲಿ ಹೆಚ್ಚುವರಿ 5 ವಿದ್ಯಾರ್ಥಿಗಳು ಸೇರ್ಪಡೆ ಆಗಿದ್ದಾರೆ.

ಮೂಲ ಸೌಕರ್ಯ
ಕೊಳವೆ ಬಾವಿ, ಮಳೆ ಕೊಯ್ಲು, ಶಾಲಾ ಕೊಠಡಿಯಲ್ಲಿ ವರ್ಲಿ ಚಿತ್ರ, ವಿದ್ಯುತ್‌ ಸಂಪರ್ಕ, ತೆರೆದ ಸಭಾಂಗಣ, ರಂಗಮಂಟಪ ಹೊಂದಿದೆ. ಇಲ್ಲಿನ ಜಿಲ್ಲಾ ಪ್ರಶಸ್ತಿ ಪುರಸ್ಕತ ಶಿಕ್ಷಕ ಸಂಜೀವ ನಾಯ್ಕರು ಅಕ್ಷರ ದಾಸೋಹ ಕಟ್ಟಡ ಮುಂಛಾವಣಿ ನಿರ್ಮಿಸಿಕೊಟ್ಟಿದ್ದಾರೆ. ನಿವೃತ್ತ ಶಿಕ್ಷಕಿ ಜೂಲಿಯಟ್‌ ಶಾಲೆಯ ಮಿಕ್ಸಿಯ ಆವಶ್ಯಕತೆಯನ್ನು ಪೂರೈಸಿದ್ದಾರೆ. ಶಾಲೆಗೆ ಒಟ್ಟು 4.14 ಎಕ್ರೆ ಜಮೀನು ಇದೆ. ಎರಡು ಎಕ್ರೆಯಲ್ಲಿ ಸಮೃದ್ಧ ಫಸಲು ನೀಡುವ ಅಡಿಕೆ ತೋಟ, ಬಾಳೆ, ಮಲ್ಲಿಗೆ, ಪಪ್ಪಾಯಿ, ಸುತ್ತಲೂ ತೆಂಗು ಕೃಷಿ ಇದೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆದಂ ಮಿತ್ತೂರು ಹಾಗೂ ಪದಾಧಿಕಾರಿಗಳ ಸಹಕಾರ ದಲ್ಲಿ ಶಾಲೆ ಉತ್ತಮ ಫಲಿತಾಂಶ, ಪ್ರಗತಿ ಸಾಧಿಸಿದೆ. 2018ರಲ್ಲಿ “ಹಸಿರು ಶಾಲೆ’ ಪ್ರಶಸ್ತಿ ಪುರಸ್ಕೃತ ಜಿಲ್ಲೆಯ ಏಕೈಕ ಶಾಲೆಯಾಗಿದೆ.

Advertisement

ಶಾಲೆ ಆರಂಭದ ಸಂದರ್ಭ ಇಡಿRದು, ಮಿತ್ತೂರು ಗ್ರಾ.ಪಂ. ವ್ಯಾಪ್ತಿಯನ್ನು ಒಳಗೊಂಡಿತ್ತು. ಶಾಲೆಯ ವ್ಯಾಪ್ತಿ ಪ್ರದೇಶದಲ್ಲಿ ಪ್ರಸ್ತುತ ಸೂರ್ಯ ಹಿ.ಪ್ರಾ. ಶಾಲೆ, ಅಳಕೆಮಜಲು ಕಿ.ಪ್ರಾ. ಶಾಲೆ, ಏಮಾಜೆ ಕಿ.ಪ್ರಾ. ಶಾಲೆ ಕಾರ್ಯಾಚರಿಸುತ್ತಿದೆ.

ಹಿರಿಯ ವಿದ್ಯಾರ್ಥಿಗಳು
ರಾಷ್ಟ್ರ ಪ್ರಸಿದ್ಧಿಯ ನಾಡಿ ತಜ್ಞ ಮಿತ್ತೂರು ಡಾ| ಸುಬ್ರಹ್ಮಣ್ಯ ಭಟ್‌, ಮಿತ್ತೂರು ಗ್ರಾ.ಪಂ. ಉಪಾಧ್ಯಕ್ಷ ಸುಧೀರ್‌ ಕುಮಾರ್‌, ಪುತ್ತೂರು ಪೊಲೀಸ್‌ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಮತ್ತಿತ ರರು ಈ ಶಾಲೆಯಲ್ಲಿ ಕಲಿತು ಸಾಧನೆ ಮಾಡಿದ್ದಾರೆ.

ಕಳೆದ 4 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಜನಪ್ರತಿನಿಧಿಗಳು, ಹಳೆ ವಿದ್ಯಾರ್ಥಿಗಳು, ಸ್ಥಳೀಯರ ಸಹಕಾರದಲ್ಲಿ ಉತ್ತಮ ಶೈಕ್ಷಣಿಕ ಸಾಧನೆ ಸಾಧ್ಯವಾಗಿದೆ. ಶಾಲೆಯ ಸನಿಹದಲ್ಲಿ ರೈಲು ಮಾರ್ಗ ಇರುವ ಕಾರಣ ಇಲಾಖೆಯು ಅತ್ಯಾಧುನಿಕ ಶೌಚಾಲಯ ನಿರ್ಮಿಸಿಕೊಟ್ಟಿದೆ. ಶಾಲೆಯ ಜಮೀನಿನಲ್ಲಿ 2 ಎಕ್ರೆ ಅಡಿಕೆ, ಉಳಿದಂತೆ ತರಕಾರಿ ಕೃಷಿ ಬೆಳೆಸಿದ್ದೇವೆ. ನಮ್ಮ ಶಾಲಾ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.
-ಮೋಹನ್‌ ಪಿ.ಎಂ., ಮುಖ್ಯ ಶಿಕ್ಷಕರು

ತಂದೆ ಮಿತ್ತೂರು ಈಶ್ವರ ಪೂಜಾರಿ ಅಂದಿನ ಬಡತನದ ಕಾಲದಲ್ಲಿ ಶಾಲೆ ನಿರ್ಮಿಸಲು ಜತೆಯಾಗಿದ್ದರು. ನಾನು, ನಮ್ಮ ಕುಟುಂಬದ ಎಲ್ಲ ಮಕ್ಕಳು ಇದೇ ಶಾಲೆಯಲ್ಲಿ ಕಲಿತಿದ್ದೇವೆ. ಇಪ್ಪತ್ತು ವರ್ಷಗಳಿಂದ ಶಾಲಾಭಿವೃದ್ಧಿ ಸಮಿತಿ ಸದಸ್ಯನಾಗಿ, ಶಾಲೆಯ ಅಗತ್ಯಗಳನ್ನು ಪೂರೈಸಲು ಇಂದಿಗೂ ಆರ್ಥಿಕ ಸಹಾಯ ಸಹಕಾರ ನೀಡುತ್ತಾ ಬಂದಿದ್ದೇನೆ. ನಮ್ಮ ಶಾಲೆಯ ಮಕ್ಕಳ ಸಂಖ್ಯೆ ಹೆಚ್ಚ ಬೇಕಾದರೆ ಶಾಲೆಗೆ ಮಕ್ಕಳನ್ನು ಕರೆತರುವ ವಾಹನ ಬೇಕು. ಸರಕಾರ ಅದನ್ನು ಒದಗಿಸಿದಲ್ಲಿ ಉಪಕಾರ ಆಗಲಿದೆ.
-ಚಂದ್ರಹಾಸ ಪೂಜಾರಿ ಮಿತ್ತೂರು, ಹಳೆ ವಿದ್ಯಾರ್ಥಿ

-  ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next