ನವದೆಹಲಿ: ಟಿಕ್ ಟಾಕ್ ಗೆ ಪರ್ಯಾಯವಾಗಿ ಭಾರತದಲ್ಲಿ ಸದ್ದು ಮಾಡಿದ ಮಿತ್ರೊನ್ ಆ್ಯಪ್ ಅಧಿಕೃತವಾಗಿ ಗೂಗಲ್ ಪ್ಲೇಸ್ಟೋರ್ ನಿಂದ ಕಣ್ಮರೆಯಾಗಿದೆ. ಚೀನಾ ಆ್ಯಪ್ ಗಳ ಮೇಲಿನ ಅಭಿಯಾನದಿಂದಾಗಿ, ದೇಸಿ ಅಪ್ಲಿಕೇಶನ್ ಎಂದೇ ಗುರುತಿಸಿಕೊಂಡಿದ್ದ ಮಿತ್ರೊನ್ ಕೆಲವೇ ದಿನಗಳಲ್ಲಿ 50 ಲಕ್ಷ ಡೌನ್ ಲೋಡ್ ಆಗಿದ್ದು ಮಾತ್ರವಲ್ಲದೆ ಉತ್ತಮ ರೇಟಿಂಗ್ ಪಡೆದುಕೊಂಡಿತ್ತು.
ಇದೀಗ ಗೂಗಲ್ ತನ್ನ ಪ್ಲೇಸ್ಟೊರ್ ನಿಂದ ಅಧಿಕೃತವಾಗಿ ಮಿತ್ರೊನ್ ಆ್ಯಪ್ ಅನ್ನು ತೆಗೆದುಹಾಕಿದೆ. ಈ ಬಗ್ಗೆ ಗೂಗಲ್ ಆಗಲಿ, ಅಥವಾ ಮಿತ್ರೊನ್ ಸಂಸ್ಥೆಯಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ.
ಸದ್ಯ ಗೂಗಲ್ ಪ್ಲೇಸ್ಟೋರ್ ನಲ್ಲಿ 25ಕ್ಕಿಂತ ಹೆಚ್ಚು ನಕಲಿ ಮಿತ್ರೊನ್ ಆ್ಯಪ್ ಗಳಿದ್ದು ಸ್ಮಾರ್ಟ್ ಫೋನ್ ಬಳಕೆದಾರರು ಜಾಗೃತೆ ವಹಿಸುವುದು ಅತ್ಯಗತ್ಯ. ಮಾತ್ರವಲ್ಲದೆ ಈಗಾಗಲೇ ಡೌನ್ ಲೋಡ್ ಮಾಡಿದ್ದರೆ ಅಧಿಕೃತ ಮಾನ್ಯತೆ ದೊರಕುವವರೆಗೂ ಅನ್ ಇನ್ ಸ್ಟಾಲ್ ಮಾಡುವುದು ಒಳಿತು ಎಂದು ಮಾಧ್ಯಮದ ವರದಿ ತಿಳಿಸಿದೆ.
ಐಐಟಿ ರೂರ್ಕಿಯ ವಿದ್ಯಾರ್ಥಿ ಶಿಬಾಂಕ್ ಅಗರ್ ವಾಲ್ ಈ ಮಿತ್ರೊನ್ ಆ್ಯಪ್ ನ ಸ್ಥಾಪಕ. ಗಮನಾರ್ಹ ಸಂಗತಿಯೆಂದರೇ ಮಿತ್ರೋನ್ ಆ್ಯಪ್‌ಗೆ ಪಾಕಿಸ್ತಾನ ಮೂಲದ ಡೆವಲಪರ್ ರಚಿಸಿದ್ದ ಕೋಡಿಂಗ್ ಬಳಸಲಾಗಿತ್ತು. ಪಾಕಿಸ್ತಾನದಲ್ಲಿ ರಚಿಸಿದ್ದ ಟಿಕ್ ಟಿಕ್ ಎನ್ನುವ ಆ್ಯಪ್ ಕೋಡಿಂಗ್ ಅನ್ನು ಖರೀದಿಸಿದ್ದ ಮಿತ್ರೊನ್ ಡೆವಲಪರ್ಸ್, ಅದರ ಯಥಾವತ್ ಕಾಪಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, 2571 ರೂ. ತೆತ್ತರೆ ಯಾರು ಬೇಕಾದರೂ ಕೋಡ್ ಕ್ಯಾನನ್‌ನಲ್ಲಿ ಪಾಕ್ ಮೂಲದ ಟಿಕ್ ಟಿಕ್ ಆ್ಯಪ್‌ನಲ್ಲಿ ಬಳಸಿರುವ ಸೋರ್ಸ್ ಕೋಡ್ ಖರೀದಿಗೆ ಅವಕಾಶವಿತ್ತು.
ವರದಿಯ ಪ್ರಕಾರ ಸ್ಪ್ಯಾಮ್ ಮತ್ತು ಭದ್ರತಾ ಮಾರ್ಗ ಸೂಚಿಗಳನ್ನು ಸ್ಪಷ್ವವಾಗಿ ಉಲ್ಲಂಘಿಸಿದಕ್ಕಾಗಿ ಪ್ಲೇಸ್ಟೋರ್ ನಿಂದ ರಿಮೂವ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಗೂಗಲ್ ಪಾಲಿಸಿ ಪ್ರಕಾರ, ಇತರ ಆ್ಯಪ್ ಗಳ ಕೋಡ್ ಅನ್ನು ಯಾವುದೇ ಬದಲಾವಣೆಗಳಿಲ್ಲದೆ ಕಾಪಿ ಮಾಡುವುದು ಅಪರಾಧವಾಗಿದ್ದು, ಈಗಾಗಲೇ ಅಂತಹ ಹಲವಾರು ಆ್ಯಪ್ ಗಳನ್ನು ಪ್ಲೇಸ್ಟೋರ್ ನಿಂದ ತೆಗೆದುಹಾಕಲಾಗಿದೆ ಎನ್ನಲಾಗಿದೆ.