ಹೊಸದಿಲ್ಲಿ : ಭಾರತೀಯ ವನಿತಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಇದೀಗ ವಿಶ್ವ ವನಿತಾ ಕ್ರಿಕೆಟ್ ರಂಗದ ಸಚಿನ್ ತೆಂಡುಲ್ಕರ್ ಎನಿಸಿಕೊಳ್ಳುವಂತಹ ಅದ್ಭುತ ಸಾಧನೆಯನ್ನು ಮಾಡಿದ್ದಾರೆ.
ಮಹಿಳೆಯರ ವಿಶ್ವ ಏಕದಿನ ಕ್ರಿಕೆಟ್‌ನಲ್ಲಿ ಈ ವರೆಗಿನ ಗರಿಷ್ಠ ಸ್ಕೋರರ್ ಆಗಿದ್ದ ಇಂಗ್ಲಂಡ್‌ನ ಮಾಜಿ ನಾಯಕಿ ಚಾರ್ಲಟ್ ಎಡ್‌ವರ್ಡ್ಸ್ ಅವರನ್ನು ಮಿಥಾಲಿ ಹಿಂದಿಕ್ಕಿದ್ದಾರೆ. ಅದ್ಭುತವಾದ ಸಿಕ್ಸರ್ ಬಾರಿಸುವ ಮೂಲಕ ಮಿಥಾಲಿ ವನಿತೆಯರ ಏಕದಿನ ಕ್ರಿಕೆಟ್‌ನಲ್ಲಿ 6,000 ರನ್ ಗಳಿಕೆಯ ಟಾಪ್ ಸ್ಕೋರರ್ ಸಾಧನೆ ಮಾಡಿರುವ ಪ್ರಪ್ರಥಮ ಮಹಿಳೆ ಎನಿಸಿದ್ದಾರೆ.
ಚಾರ್ಲಟ್ ಎಡ್ವರ್ಡ್ಸ್ ಅವರು 117 ಏಕದಿನ ಪಂದ್ಯಗಳಲ್ಲಿ ಇಂಗ್ಲಂಡ್ ತಂಡವನ್ನು ಮುನ್ನಡೆಸುವ ಮೂಲಕ ಗರಿಷ್ಠ ಪಂದ್ಯಗಳ ನಾಯಕಿ ಎಂಬ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಮಿಥಾಲಿ ಅವರ 105 ಪಂದ್ಯಗಳನ್ನು ಭಾರತವನ್ನು ಮುನ್ನಡೆಸಿ ಎರಡನೇ ಸ್ಥಾನದಲ್ಲಿದ್ದು ಸದ್ಯದಲ್ಲೇ ಎಡ್ವರ್ಡ್ಸ್ ಅವರ ಈ ದಾಖಲೆಯನ್ನು ಕೂಡ ಅಳಿಸಿ ಹಾಕಲಿದ್ದಾರೆ.
ಮಿಥಾಲಿ ಅವರು ಐಸಿಸಿ ವನಿತೆಯರ ವಿಶ್ವ ಕಪ್ ಕ್ರಿಕೆಟ್ ಕ್ವಾರ್ಟರ್ ಫೈನಲ್‌ನಲ್ಲಿ ಆರು ಬಾರಿಯ ಚಾಂಪ್ಯನ್ ಆಸ್ಟ್ರೇಲಿಯವನ್ನು ಎದುರಿಸುವ ಮುನ್ನ 6,000 ರನ್ ಗಳಿಕೆ ವಿಶ್ವ ದಾಖಲೆಗೆ ಕೇವಲ 34 ರನ್ ಹಿಂದಿದ್ದರು. ಆಗ ಆಕೆಯ ಗಳಿಗೆ 5,959 ರನ್ ಆಗಿತ್ತು. ವಿಶ್ವ ವನಿತೆಯರ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಕೆಯ ದಾಖಲೆಯನ್ನು ಹೊಂದಿದ್ದ ಇಂಗ್ಲಂಡ್‌ನ ಚಾರ್ಲಟ್ ಮಾಡಿರುವ ರನ್ 5,992.
ಆಸೀಸ್ ಎದುರಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತೀಯ ವನಿತಾ ತಂಡದ ನಾಯಕಿ ಮಿಥಾಲಿ ಕೇವಲ 11 ರನ್ ಗಳಿಸಿದ್ದಾಗಲೇ ಅಂಗಣದಲ್ಲಿದ್ದ ಅಂಪಾಯರ್ ಆಕೆ ಎಲ್‌ಬಿಡಬ್ಲ್ಯು ಎಂದು ತೀರ್ಪುಕೊಟಿದ್ದರು. ಆದರೆ ಡಿಆರ್‌ಎಸ್ ನಲ್ಲಿ ಆಕೆ ಔಟ್ ಅಲ್ಲವೆಂದು ಖಚಿತವಾದಾಗ ಮಿಥಾಲಿ ತನ್ನ ಇನ್ನಿಂಗ್ಸ್ ಮುಂದುವರಿಸಿ ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ವನಿತಾ ಟಾಪ್ ಸ್ಕೋರರ್ ಎನಿಸಿಕೊಳ್ಳುವ ದಾಖಲೆಯನ್ನು ಮಾಡಿದರು.
1999ರಲ್ಲಿ ತನ್ನ ಹದಿನಾರರ ಹರೆಯದಲ್ಲೇ ಕ್ರಿಕೆಟ್‌ಗೆ ಕಾಲಿಟ್ಟಿದ್ದ ಮಿಥಾಲಿ ಮಿಲ್ಟನ್ ಕೇನ್ಸ್ ನಲ್ಲಿ ನಡೆದಿದ್ದ ಅಯರ್ಲಂಡ್ ಎದುರಿನ ತನ್ನ ಚೊಚ್ಚಲ ಪಂದ್ಯದಲ್ಲೇ ಚೊಚ್ಚಲ ಶತಕ ಬಾರಿಸಿದ್ದರು. ಅಲ್ಲಿಂದ ಇಲ್ಲಿಯ ತನಕವೂ ತನ್ನ ಬ್ಯಾಟಿಂಗ್ ನಿರ್ವಹಣೆಯಲ್ಲಿ ಏಕಪ್ರಕಾರತೆಯನ್ನು ಮಿಥಾಲಿ ಪ್ರದರ್ಶಿಸಿಕೊಂಡು ಬಂದಿದ್ದಾರೆ.