ವೂರ್ಸ್ಟರ್: ಭಾರತ ವನಿತಾ ತಂಡದ ನಾಯಕಿ ಮಿಥಾಲಿ ರಾಜ್ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ವನಿತಾ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಖ್ಯಾತಿಗೆ ಭಾರತದ ಮಿಥಾಲಿ ರಾಜ್ ಪಾತ್ರರಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಮಿಥಾಲಿ ರಾಜ್ ಈ ಸಾಧನೆ ಮಾಡಿದರು. ಎಲ್ಲಾ ಮಾದರಿ ಸೇರಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಮಹಿಳಾ ಆಟಗಾರ್ತಿ ಎಂಬ ಸಾಧನೆಗೆ ಮಿಥಾಲಿ ಪಾತ್ರರಾಗಿದ್ದಾರೆ. ಪುರುಷರ ಕ್ರಿಕೆಟ್ ನಲ್ಲಿ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಲ್ಲಿದೆ.
ಇದನ್ನೂ ಓದಿ:ವಿಂಡೀಸ್ ಕಟ್ಟಿದ ಹಾಕಿದ ಶಮ್ಸಿ ಬಿಗು ದಾಳಿ: ದಕ್ಷಿಣ ಆಫ್ರಿಕಾಗೆ ಸರಣಿ ಜಯ
ಇಂಗ್ಲೆಂಡ್ ನ ಮಾಜಿ ನಾಯಕಿ ಚಾರ್ಲೋಟ್ ಎಡ್ವರ್ಡ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮಿಥಾಲಿ ರಾಜ್ ಮುರಿದಿದ್ದಾರೆ. ಎಡ್ವರ್ಡ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 10,273 ರನ್ ಗಳಿಸಿದ್ದರು. ನತಾಲಿಯಾ ಸೀವರ್ ಎಸೆದ 23ನೇ ಓವರ್ ನಲ್ಲಿ ಬೌಂಡರಿ ಬಾರಿಸುವ ಮೂಲಕ ಮಿಥಾಲಿ ಈ ರನ್ ದಾಖಲೆ ಮುರಿದರು.
ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ನಾಲ್ಕು ವಿಕೆಟ್ ಗಳ ಜಯ ಸಾಧಿಸಿದೆ. ಇಂಗ್ಲೆಂಡ್ ನೀಡಿದ 220 ರನ್ ಗಳ ಗುರಿಯನ್ನು ಭಾರತ ತಂಡ ಮೂರು ಎಸೆತ ಬಾಕಿ ಇರುವಂತೆ ಗಳಿಸಿ ಸರಣಿಯ ಮೊದಲ ಜಯ ಸಾಧಿಸಿತು. ಮಿಥಾಲಿ ರಾಜ್ ಅಜೇಯ 75 ರನ್ ಗಳಿಸಿದರು.