Advertisement

ಸಂತ್ರಸ್ತರ ಹೆಸರಿನಲ್ಲಿ  ಸಕ್ರಿಯ ವಸೂಲಿ ಗ್ಯಾಂಗ್‌!

10:28 AM Aug 21, 2018 | |

ಮಂಗಳೂರು: ಕೊಡಗು, ಕೇರಳದ ನೆರೆ ಸಂತ್ರಸ್ತರಿಗೆ ನೆರವು ಎಂಬ ನೆಪ ಹೇಳಿ ಅಮಾಯಕರಿಂದ ಹಣ ವಸೂಲಿ ಮಾಡುವ ದಂಧೆ ದ.ಕ. ಮತ್ತು ಕೊಡಗು ಜಿಲ್ಲೆಯಲ್ಲಿ ಹುಟ್ಟಿಕೊಂಡಿದೆ. ನೆರೆಗೆ ನಲುಗಿದ ಕೇರಳ, ದ. ಕನ್ನಡ, ಕೊಡಗಿನ ಜನರಿಗೆ ದೇಶವೇ ಸ್ಪಂದಿಸಿ ನೆರವಿನ ಮಹಾಪೂರ ಹರಿದು ಬರುತ್ತಿದೆ. ಆದರೆ ಜನರ ಅನುಕಂಪವನ್ನೇ ದುರ್ಬಳಕೆ ಮಾಡಿಕೊಂಡು ಕಿಡಿಗೇಡಿಗಳು ಎಲ್ಲೆಂದರಲ್ಲಿ ನಗದು ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಇದು ಜಿಲ್ಲಾಡಳಿತಗಳಿಗೆ ತಲೆನೋವಾಗಿದೆ. 

Advertisement

ಮಳೆ ಮತ್ತು ಪ್ರವಾಹ ಕೇರಳ ಮತ್ತು ಕೊಡಗಿನ ಬದುಕನ್ನು ಕಸಿದುಕೊಂಡಿದೆ. ಆಸ್ತಿಪಾಸ್ತಿ ನಷ್ಟ, ಪ್ರಾಣಹಾನಿ ಆಗಿದೆ. ಪರಿಹಾರ ಕೇಂದ್ರಗಳಲ್ಲಿ ಹಂಚಿ ಹೋಗಿರುವ ಅನೇಕರಿಗೆ ತಮ್ಮವರ ಸುರಕ್ಷತೆಯ ಬಗ್ಗೆಯೂ ತಿಳಿದಿಲ್ಲ. ಸಂತ್ರಸ್ತರಿಗೆ ನೆರವಾಗಲೆಂದು ಸ್ವಯಂ ಸೇವಾ ಸಂಘಟನೆಗಳು, ಸಮಾಜಸೇವಾ ಸಂಘಟನೆಗಳು ನೆರವು ಸಂಗ್ರಹದಲ್ಲಿ ತೊಡಗಿದ್ದಾರೆ. ಈ ಸಂದರ್ಭದ ದುರ್ಲಾಭ ಪಡೆಯಲು ಯತ್ನಿಸುತ್ತಿರುವ ಕೆಲವರು ಜನರನ್ನು ನಂಬಿಸಿ ದೋಚುವ ಕೆಲಸದಲ್ಲಿ ತೊಡಗಿದ್ದಾರೆ. ವಾಹನ ಸವಾರರನ್ನು, ದಾರಿಹೋಕರನ್ನು ನಿಲ್ಲಿಸಿ, ಬೆದರಿಸಿ ಹಣ ಕೀಳುವ ಯುವಕರ ಗುಂಪುಗಳು ದ. ಕನ್ನಡ ಮತ್ತು ಕೊಡಗು ಜಿಲ್ಲೆಯಾದ್ಯಂತ ಕಾರ್ಯಾಚರಿಸುತ್ತಿವೆ. 

ಪೆಟ್ಟಿಗೆ ಹಿಡಿದು ತಿರುಗಾಟ
ಜಿಲ್ಲೆಯ ಕಲ್ಲಡ್ಕ, ಉಪ್ಪಿನಂಗಡಿ, ಮಂಗಳೂರು, ಕೊಡಗು ಜಿಲ್ಲೆಯ ಮಡಿಕೇರಿ ಮೊದಲಾದೆಡೆ ಇಂತಹ ಲೂಟಿ ತಂಡಗಳು ಸಕ್ರಿಯವಾಗಿದ್ದು, ಪರಿಹಾರ ನಿಧಿ ಹೆಸರಿನ ಪೆಟ್ಟಿಗೆ ಹಿಡಿದು ತಿರುಗಾಡುತ್ತಿದ್ದಾರೆ. ಕೊಡಗು  ಮಾದಾಪುರ ಸಮೀಪದ ಇಗ್ಗೊಡ್ಲುವಿನಲ್ಲಿ ಹಣ ಹಾಗೂ ಚಿನ್ನಾಭರಣವಿದ್ದ ಬ್ಯಾಗನ್ನೇ ಲಪಟಾಯಿಸಿದ ಘಟನೆ ನಡೆದಿದೆ. ಇಂತಹ ಯುವಕರ ಪಡೆ ಮಾದಕ ವ್ಯಸನಿಗಳಂತೆಯೂ ಕಂಡು ಬರುತ್ತಿದ್ದು, ತಲೆನೋವಾಗಿ ಪರಿಣಮಿಸಿದ್ದಾರೆ. 

ಅನುಕಂಪದ ದುರುಪಯೋಗ
ಇಂತಹ ತಂಡಗಳು ಮುಗ್ಧ ಜನತೆಯನ್ನೇ ಟಾರ್ಗೆಟ್‌ ಮಾಡುತ್ತಿವೆ. ಹೊಟೇಲು, ಬಸ್‌ ನಿಲ್ದಾಣಗಳಲ್ಲಿ ಸಿಕ್ಕವರಿಂದ ಹಣ ಪೀಕಿಸುವ ತಂಡಗಳು ಎರಡೂ ಜಿಲ್ಲೆಗಳಲ್ಲಿ ಕಂಡು ಬರುತ್ತಿವೆ. ಒತ್ತಾಯಿಸಿ ಹಣ ಕೀಳುತ್ತಿರುವ ಬಗ್ಗೆಯೂ ದೂರುಗಳು ಬಂದಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಹಲವರು ಅನುಭವಗಳನ್ನು ಬರೆದುಕೊಂಡಿದ್ದಾರೆ.

ಸಿಎಂ ವಿಕೋಪ ಪರಿಹಾರ ನಿಧಿಗೇ ಹಣ ನೀಡಿ
ಪ್ರವಾಹ ಸಂತ್ರಸ್ತರಿಗೆ ಆರ್ಥಿಕ ನೆರವನ್ನು ನೀಡಲಿಚ್ಛಿಸುವವರು ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ಚೆಕ್‌ ಅಥವಾ ಡಿಡಿ ಮೂಲಕ ಆರ್ಥಿಕ ನೆರವು ನೀಡಬೇಕು. ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳು ಅಥವಾ ಸ್ವಯಂ ಸೇವಕರು, ಸಂಘ-ಸಂಸ್ಥೆಗಳು ಸಾರ್ವಜನಿಕವಾಗಿ ನಗದು ವಂತಿಗೆ ಸಂಗ್ರಹಿಸಲು ಅವಕಾಶವಿಲ್ಲ. ಸಂಘಸಂಸ್ಥೆಗಳು ಕೂಡ ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೇ ಆರ್ಥಿಕ ನೆರವು ನೀಡಬಹುದು ಎಂದು ಎಲ್ಲ ಜಿಲ್ಲಾಡಳಿತಗಳು ಸೂಚನೆ ನೀಡಿವೆ. 

Advertisement

ಪೊಲೀಸ್‌ ದೂರು ನೀಡಿ
ಕೊಡಗಿನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಸಂತ್ರಸ್ತ ರಾಗಿದ್ದಾರೆ. ಇಂತಹವರ ಹೆಸರಿನಲ್ಲಿ ಹಣ ಸಂಗ್ರಹಿಸಿ ದುರುಪಯೋಗ ಮಾಡುವುದು ಸಲ್ಲ. ಜನ ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೇ ಹಣ ನೀಡಬೇಕು. ನೆರೆ ಸಂತ್ರಸ್ತರ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿರುವ ಬಗ್ಗೆ ಗಮನಕ್ಕೆ ಬಂದಲ್ಲಿ ತತ್‌ಕ್ಷಣಕ್ಕೆ ಹತ್ತಿರದ ಠಾಣೆಯಲ್ಲಿ ದೂರು ದಾಖಲಿಸಿ.
-ಶಶಿಕಾಂತ ಸೆಂಥಿಲ್‌, ದ.ಕ. ಜಿಲ್ಲಾಧಿಕಾರಿ

ಪರಿಹಾರ ನಿಧಿಗೆ ಹೀಗೆ ಕಳುಹಿಸಿ
* ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಆರ್ಥಿಕ ನೆರವಾಗಿ ಚೆಕ್‌ ಅಥವಾ ಡಿಡಿಗಳನ್ನು ಕಳುಹಿಸಬೇಕಾದ್ದು: Chief Minister’s Calamity Relief Fund Karnataka State
* ನೇರವಾಗಿ ನಗದು ವರ್ಗಾವಣೆಗೆ No: 37887098605, IFSC Code: SBIN0040277
* ಕೇರಳ ಪ್ರವಾಹ ಸಂತ್ರಸ್ತರಿಗೆ ಆರ್ಥಿಕ ನೆರವಾಗಿ ಚೆಕ್‌ ಅಥವಾ ಡಿಡಿಗಳನ್ನು ಕಳುಹಿಸಬೇಕಾದ್ದು: Chief Minister’s Calamity Relief Fund Kerala State 
*  ನೇರವಾಗಿ ನಗದು ವರ್ಗಾವಣೆಗೆ A/c No: 67319948232 IFSC Code: SBIN0070028   

Advertisement

Udayavani is now on Telegram. Click here to join our channel and stay updated with the latest news.

Next