ಕುಂದಾಪುರ: ಅಗತ್ಯ ವಸ್ತುಗಳ ಖರೀದಿಗಾಗಿ ಓಡಾಟಕ್ಕೆ ನೀಡಿದ ವಿನಾಯಿತಿಯನ್ನು ದುರುಪಯೋಗಪಡಿಸಿಕೊಳ್ಳಬಾರದು. ಅದರ ಕಾರಣದಿಂದ ಪೇಟೆ ಸುತ್ತಾಡಬಾರದು. ಹಾಗೊಂದು ವೇಳೆ ಅನಗತ್ಯ ಓಡಾಟ ಕಂಡು ಬಂದರೆ ಕಠಿನ ಕಾನೂನು ಕ್ರಮ ಕೈಗೊಳ್ಳಲು ಸ್ಥಳೀಯವಾಗಿ ಅಧಿಕಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
ಅವರು ಶುಕ್ರವಾರ ಇಲ್ಲಿಗೆ ಆಗಮಿಸಿ ಕಾನೂನು ಸುವ್ಯವಸ್ಥೆ ಪರಿಶೀಲಿಸಿ, ಅಧಿಕಾರಿಗಳ ಜತೆ ಸಭೆ ನಡೆಸಿ ಮಾಧ್ಯಮದೊಂದಿಗೆ ಮಾತನಾಡಿದರು.
ದಿನಬಳಕೆ ವಸ್ತುಗಳ ಸಾಗಾಟಕ್ಕೆ ತೊಂದರೆ ಉಂಟು ಮಾಡಬಾರದು. ಈಗಾಗಲೇ ಎಪಿಎಂಸಿಯವರ ಜತೆಗೂ ಮಾತನಾಡಲಾಗಿದೆ. ಗ್ರಾಮಾಂತರ ಪ್ರದೇಶಕ್ಕೆ ಕೂಡಾ ದಿನ ಬಳಕೆ ವಸ್ತುಗಳ ಸಾಗಾಟ ನಡೆಯಲಿದೆ. ಜನ ದಿನನಿತ್ಯದ ವಸ್ತುಗಳ ಖರೀದಿಗೆ ಪ್ರತಿನಿತ್ಯ ಬರಬೇಕಾದ ಅಗತ್ಯವಿಲ್ಲ. ಒಂದು ವಾರಕ್ಕೆ ಬೇಕಾದ ಸಾಮಗ್ರಿಗಳನ್ನು ಕೊಂಡೊಯ್ಯಿರಿ. ಮೀನುಗಾರಿಕೆಗೆ ನಿಷೇಧ ಹೇರಿಲ್ಲ. ಜನಜಂಗುಳಿ ಸೇರುವ ಕಾರಣ ಮೀನು ಮಾರುಕಟ್ಟೆ ಮುಚ್ಚಲಾಗಿದೆ. ಮೀನು ಗಾರಿಕೆ ನಡೆಸುವುದಾದರೆ ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸಬಹುದು. ಯಾವ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಿರುವು ದಿಲ್ಲವೋ ಅಂತಹ ಅಂಗಡಿ ಮುಚ್ಚಲು ಆದೇಶ ನೀಡಲಾಗಿದೆ ಎಂದರು.
ಎಲ್ಲೆಡೆ ಸ್ಯಾನಿಟೈಸರ್ ಕೊರತೆ ಇರುವುದು ಕಂಡು ಬಂದಿದೆ. ಈ ಕುರಿತು ಡಿಸ್ಟಲರೀಸ್ ಕಂಪೆನಿ ಜತೆ ಮಾತನಾಡಿದ್ದು ಅವರು ಸ್ಯಾನಿಟೈಸರ್ ತಯಾರಿಸಿ ಕೊಡುವುದಾಗಿ ಹೇಳಿದ್ದು ಈಗಾಗಲೇ ತಯಾರಿಸಿದ ಮಾದರಿಯನ್ನು ನೀಡಿದ್ದು ಉಪಯೋಗಕ್ಕೆ ಅರ್ಹವಾಗಿದೆ. ಮಾಸ್ಕ್ ಕೊರತೆ ಎಲ್ಲೆಡೆ ಇದೆ. ಆರೋಗ್ಯವಂತರು ಮಾಸ್ಕ್ ಧರಿಸಬೇಕೆಂದಿಲ್ಲ ಎಂದ ಅವರು, ಮಾಸ್ಕ್ ಧರಿಸದ ಕಾರಣಕ್ಕಾಗಿ ಪೊಲೀಸರು ಲಾಠಿ ಏಟು ನೀಡುತ್ತಿರುವುದನ್ನು ಪ್ರಶ್ನಿಸಿದಾಗ, ಈ ಕುರಿತು ಈಗಾಗಲೇ ಎಸ್‌ಪಿ ಅವರ ಜತೆ ಮಾತನಾಡಿದ್ದೇನೆ. ಮಾಸ್ಕ್ ಹಾಕದ ಕಾರಣಕ್ಕಾಗಿ ಹೊಡೆಯುವಂತಿಲ್ಲ. ಆದರೆ ಸರದಿ ಸಾಲಿನಲ್ಲಿ ನಿಂತಿದ್ದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಮಾಸ್ಕ್ ಧರಿಸಿದ್ದರೆ ಉತ್ತಮ ಎಂದರು.
ಸಹಾಯಕ ಕಮಿಷನರ್ ಕೆ. ರಾಜು ಆವರು ಉಪಸ್ಥಿತರಿದ್ದರು. ಶಾಸ್ತ್ರಿ ಸರ್ಕಲ್‌ನಲ್ಲಿ ಮೆಡಿಕಲ್ ಶಾಪ್‌ಗೆ ಭೇಟಿ ನೀಡಿದ ಡಿಸಿ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು. ಮಿನಿ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ನಿಯಮ ಪಾಲಿಸಿ
ಹೋಮ್ ಕ್ವಾರಂಟೈನ್‌ಗೆ ಒಳಗಾದವರು ಪೇಟೆ ಸುತ್ತಾಡುತ್ತಾ ಕಾನೂನು ಉಲ್ಲಂಘನೆ ಮಾಡಿದ ಮೂವರ ಮೇಲೆ ಕಠಿನ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಅವರು ಸೂಚಿತ ನಿರ್ದಿಷ್ಟ ಅವಧಿ ತಿರುಗಾಡುವಂತಿಲ್ಲ. ಸರಕಾರದಿಂದ ಕೂಡಾ ಈ ಕುರಿತು ಸೂಚನೆ ಬಂದಿದ್ದು ಕಾನೂನು ಪಾಲನೆ ಮಾಡದವರಿಗೆ ಲಾಠಿ ಏಟಷ್ಟೇ ಅಲ್ಲ ಜೈಲಿಗೆ ಕಳುಹಿಸುವ ಕೆಲಸವೂ ನಡೆಯಲಿದೆ. ಆದ್ದರಿಂದ ತುರ್ತು ಕಾರ್ಯಕ್ಕಾಗಿ ಮಾತ್ರ ಮನೆಬಿಟ್ಟು ಹೊರಬನ್ನಿ.
-ಜಿ.ಜಗದೀಶ್,ಜಿಲ್ಲಾಧಿಕಾರಿ