ಶ್ರೀನಿವಾಸಪುರ: ಡಿಸಿಸಿ ಬ್ಯಾಂಕಿಗೆ ನಬಾರ್ಡ್ ನೀಡುವ ಹಣವನ್ನು ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಸಾಲದ ರೂಪದಲ್ಲಿ ನೀಡುತ್ತಿದ್ದು, ಶಾಸಕ ಕೆ.ಆರ್.ರಮೇಶ್ ಕುಮಾರ್ ತನ್ನ ಜೇಬಿನಿಂದ ಕೊಡುವ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ. ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಂಡು, ಸಿಬಿಐ ತನಿಖೆಗೆ ಒಳಪಡಿಸಲಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಆಗ್ರಹಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕರು ಸಹಕಾರ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ತನ್ನ ಸ್ವಂತ ದುಡ್ಡು ಕೊಡು ತ್ತಿರುವಂತೆ ಸಾರ್ವಜನಿಕ ವೇದಿಕೆ ಗಳಲ್ಲಿ ಮಹಿಳೆಯರನ್ನು ಸಂಘಟಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು. ದಿಕ್ಕು ತಪ್ಪಿಸುವ ಹೇಳಿಕೆ: ಡಿಸಿಸಿ ಬ್ಯಾಂಕ್ ನ ಹಣ ತಾನೇ ತಂದು ಕೊಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಇದೇನು ಅವರ ಮನೆಯ ಆಸ್ತಿಯೇ? ಮಹಿಳೆಯರನ್ನು ಸಾರ್ವಜನಿಕವಾಗಿ ಸಂಘಟಿಸಿ ರಾಜಕೀಯವಾಗಿ ಅವರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಅಪಾದಿಸಿದರು.
ಸದನದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವ ಅವರು, ಮಹಿಳೆಯರ ಸಬಲೀಕರಣ ಕುರಿತು ಮಾತನಾಡುತ್ತಾರೆಂದರೆ ಇವರ ವ್ಯಕ್ತಿತ್ವ ಎಂತದ್ದು ಎಂಬುದು ರಾಜ್ಯದ ಹೆಣ್ಣು ಮಕ್ಕಳಿಗೆ ಗೊತ್ತಿದೆ. ಇಂದು ವೇದಿಕೆಗಳಲ್ಲಿ ಅಮ್ಮಾ, ತಾಯಿ ಎಂದು ನಾಟಕ ಮಾಡಿ, ಮೊಸಳೆ ಕಣ್ಣೀರು ಹಾಕುತ್ತಿದ್ದಾರೆಂದು ಹೇಳಿದರು.
ಜನರನ್ನು ಯಾಮಾರಿಸುತ್ತಿದ್ದಾರೆ: ಕಳೆದ ಚುನಾವಣೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರೈಲು ಬೋಗಿ ಕಾರ್ಖಾನೆ, ಕ್ಯಾನ್ಸರ್ ಆಸ್ಪತ್ರೆ, ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿದ್ದೇನೆ ಎಂದು ಕ್ಷೇತ್ರದ ಜನರನ್ನು ದಿಕ್ಕುತಪ್ಪಿಸಿದ್ದರು. ಆದರೆ, ಯಾವುದೂ ಮಾಡಿಲ್ಲ. ನನ್ನ ಅವಧಿಯಲ್ಲಿ ಮಾಡಿದ್ದ ಕೆಲಸ ಬಿಟ್ಟರೆ ಬೇರೇನೂ ಇಲ್ಲ. ವೈಯಕ್ತಿಕ ಲಾಭಕ್ಕೆ ನೂರಾರು ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಜನರನ್ನು ಯಾಮಾರಿಸುತ್ತಿದ್ದಾರೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ ಈಗಾಗಲೇ ಸಹಕಾರ ಸಂಘದಿಂದ ವಿತರಿಸಿರುವ ಸಾಲದಲ್ಲಿ ಶೇ.50, ಅಡ್ಡಗಲ್ ಸೊಸೈಟಿಯಲ್ಲಿ 30 ಕೋಟಿ ರೂ., ರಾಯಲ್ಪಾಡು ಸೊಸೈಟಿ ಯಲ್ಲಿ 4 ಕೋಟಿ ರೂ. ಹಣ ದುರ್ಬಳಕೆ ಮಾಡಿ ಕೊಂಡು, ಸಹಕಾರ ವ್ಯವಸ್ಥೆಯ ನಿಯಮ ಗಾಳಿಗೆ ತೂರಿದ್ದಾರೆ. ಕೂಡಲೇ ಸಿಬಿಐ ತನಿಖೆ ಮಾಡಬೇಕಾಗಿದೆ ಎಂದರು.
ಒಟ್ಟಾರೆಯಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸಹಕಾರ ಸಂಘಗಳ ಮೂಲಕ ಸಾಲ ವಿತರಣೆ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ, ಬ್ಯಾಂಕ್ ಕೊಡುವ ಸಾಲಕ್ಕೂ ಕಾಂಗ್ರೆಸ್‌ಗೆ ಏನಾದರೂ ಸಂಬಂಧವಿದೆಯೇ? ಶಾಸಕರ ವಿರುದ್ಧ ಸಿಎಂ ಗೆ ದೂರು ನೀಡಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಆರ್.ನಾರಾಯಣಸ್ವಾಮಿ, ಬಿ.ವೆಂಕಟ ರೆಡ್ಡಿ, ಪೂಲುಶಿವಾರೆಡ್ಡಿ, ಎ.ಎನ್.ಜಗದೀಶ್, ಏಜಾಜ್, ಮಂಜುನಾಥರೆಡ್ಡಿ ಇತರರಿದ್ದರು.