ನವದೆಹಲಿ: ಇಸ್ರೋ ವಿಜ್ಞಾನಿಗಳು ದೇಶಿಯವಾಗಿ ನಿರ್ಮಿಸಿದ ಎ ಸ್ಯಾಟ್ ಮಿಸೈಲ್ ನಿಂದ ಬಾಹ್ಯಾಕಾಶದಲ್ಲಿಯೇ ಲೈವ್ ಸ್ಯಾಟಲೈಟ್ ಅನ್ನು ಎಲ್ ಇಒ(ಲೋ ಅರ್ಥ್ ಆರ್ಬಿಟ್) ಮೂಲಕ ಹೊಡೆದುರುಳಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಘೋಷಿಸಿದ್ದರು. ಏನಿದು ಎ ಸ್ಯಾಟ್..ಮಿಷನ್ ಶಕ್ತಿ ಕುರಿತ ಸಂಕ್ತಿಪ್ತ ಮಾಹಿತಿ ಇಲ್ಲಿದೆ…
ಎಸ್ಯಾಟ್ ಮಿಸೈಲ್ ಪರೀಕ್ಷೆ ಯಶಸ್ವಿ:
ಮಾರ್ಚ್ 27ರಂದು ಭಾರತ ಮಿಷನ್ ಶಕ್ತಿ ಮೂಲಕ ನಡೆಸಿದ ಆ್ಯಂಟಿ ಸ್ಯಾಟಲೈಟ್ ಮಿಸೈಲ್ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಡಾ.ಎಪಿಜೆ ಅಬ್ದುಲ್ ಕಲಾಂ ಐಲ್ಯಾಂಡ್ ಲಾಂಚ್ ಕಾಂಪ್ಲೆಕ್ಸ್ ನಲ್ಲಿ ಭಾರತದ ವಿಜ್ಞಾನಿಗಳು ಈ ಪರೀಕ್ಷೆ ನಡೆಸಿದ್ದರು. ಡಿಆರ್ ಡಿಒನಿಂದ ಈ ತಂತ್ರಜ್ಞಾನದ ಮಿಷನ್ ಅಭಿವೃದ್ಧಿಗೊಳಿಸಲಾಗಿತ್ತು. ಇದರಿಂದ ಭಾರತ ಬಾಹ್ಯಾಕಾಶ ಕೇಂದ್ರದಲ್ಲಿಯೂ ಬಲಿಷ್ಠ ರಾಷ್ಟ್ರಗಳ ಸಾಲಿಗೆ ಸೇರಿದಂತಾಗಿದೆ.
ಮಿಷನ್ ಶಕ್ತಿ ಪರೀಕ್ಷೆ ಸಂಪೂರ್ಣ ಯಶಸ್ವಿಯಾಗಿದ್ದಲ್ಲದೇ, ಭಾರತೀಯ ವಿಜ್ಞಾನಿಗಳ ಸತತ 9 ವರ್ಷಗಳ ಸಾಧನೆಗೆ ಫಲಸಿಕ್ಕಂತಾಗಿದೆ.
ಯಾವ ಸ್ಯಾಟಲೈಟ್ ಉಪಯೋಗಿಸಲಾಗಿತ್ತು?
ಎಸ್ಯಾಟ್ ಪರೀಕ್ಷಾರ್ಥ ಪ್ರಯೋಗಕ್ಕೆ ಭಾರತದ ಸ್ಯಾಟಲೈಟ್ ಅನ್ನೇ ಉಪಯೋಗಿಸಲಾಗಿತ್ತು.
ಇದೊಂದು ಉಪಗ್ರಹ ನಿರೋಧಕ ಕ್ಷಿಪಣಿಯಾಗಿದ್ದು, ಶತ್ರುರಾಷ್ಟ್ರದ ಹಾಗೂ ಗೂಢಚಾರಿಕೆ ನಡೆಸುವ ಉಪಗ್ರಹವನ್ನು ಬಾಹ್ಯಾಕಾಶದಲ್ಲಿಯೇ ಹೊಡೆದುರುಳಿಸುವಲ್ಲಿ ಈ ಎಸ್ಯಾಟ್ ಮಿಸೈಲ್ ಮಹತ್ವದ ಪಾತ್ರವಹಿಸಲಿದೆ.
ಚೀನಾ, ಅಮೆರಿಕ ಹಾಗೂ ರಷ್ಯಾದ ಬಳಿಕ ಭಾರತವು ಕೂಡಾ ಶತ್ರು ಉಪಗ್ರಹಗಳನ್ನು ಪತ್ತೆ ಹಚ್ಚಿ ಹೊಡೆದುರುಳಿಸುವ ಶಕ್ತಿಶಾಲಿ ರಾಷ್ಟ್ರಗಳ ಸಾಲಿಗೆ ಸೇರ್ಪಡೆಗೊಂಡತಾಗಿದೆ. 300 ಕಿಲೋ ಮೀಟರ್ ದೂರದಲ್ಲಿದ್ದ ಉಪಗ್ರಹವನ್ನು 3ನಿಮಿಷದಲ್ಲಿಯೇ ದೇಶಿಯ ನಿರ್ಮಿತ ಎಸ್ಯಾಟ್ ಮಿಸೈಲ್ ಯಶಸ್ವಿಯಾಗಿ ಹೊಡೆದುರುಳಿಸಿದೆ.