Advertisement

Mission Amrit Sarovar; ಸೊರಗುತ್ತಿವೆ ಅಮೃತ ಸರೋವರಗಳು!

11:47 PM Jun 24, 2023 | Team Udayavani |

ಉಡುಪಿ: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ “ಅಮೃತ್‌ ಸರೋವರ’ ಯೋಜನೆಯಡಿ ಪ್ರತೀ ಜಿಲ್ಲೆಯ 75 ಕೆರೆಗಳನ್ನು ಆಯ್ಕೆ ಮಾಡಿ ಅಭಿವೃದ್ಧಿಪಡಿಸಲಾಗಿತ್ತು. ಕೆಲವು ಕಡೆಗಳಲ್ಲಿ ಈಗಲೂ ನಡೆಯುತ್ತಿದೆ. ಆದರೆ ಅಭಿವೃದ್ಧಿ ಹೊಂದಿದ ಬಹುತೇಕ ಕೆರೆಗಳು ನಿರ್ವಹಣೆ ಇಲ್ಲದೇ ಸೊರಗುತ್ತಿವೆ.

Advertisement

ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮೊದಲ ಹಂತದಲ್ಲಿ ತಲಾ 75 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅನಂತರ ಉಭಯ ಜಿಲ್ಲೆಗಳಲ್ಲೂ ತಲಾ 25ಕ್ಕೂ ಅಧಿಕ ಕೆರೆಗಳನ್ನು ಹೆಚ್ಚುವರಿಯಾಗಿ ಪಟ್ಟಿಗೆ ಸೇರಿಸಲಾಗಿದೆ. ಹೀಗೆ ಉಭಯ ಜಿಲ್ಲೆಯಲ್ಲಿ 200ಕ್ಕೂ ಅಧಿಕ ಕೆರೆಗಳನ್ನು ಅಭಿವೃದ್ಧಿಗೆ ಕೈಗೆತ್ತಿಕೊಳ್ಳಲಾಗಿದೆ.

ಅಭಿವೃದ್ಧಿ ಆಗಿತ್ತು
ಕೇಂದ್ರ ಸರಕಾರದ ಯೋಜನೆ ಇದಾಗಿದ್ದು, ಗ್ರಾ.ಪಂ.ಗಳಲ್ಲಿ ಲಭ್ಯ ಅನುದಾನ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರ ಮತ್ತು ಸರಕಾರದ ಅನುದಾನ ಬಳಸಿ ಕೆರೆಗಳ ಸುತ್ತ ತಡೆಗೋಡೆ, ಕೆರೆ ನೀರಿನ ಉಪಯೋಗಕ್ಕಾಗಿ ಹೂಳೆತ್ತುವುದು, ಮೆಟ್ಟಿಲು ನಿರ್ಮಾಣ, ಸ್ವತ್ಛತೆ ಹೀಗೆ ವಿವಿಧ ಅಭಿವೃದ್ಧಿ ಕಾರ್ಯ ನಡೆಸಲಾಗಿತ್ತು. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವದಂದು ಧ್ವಜಾರೋಹಣ ನೆರವೇರಿಸಲು ಧ್ವಜಕಟ್ಟೆಯನ್ನು ನಿರ್ಮಿಸಲಾಗಿದೆ. ಸದ್ಯ ಕೆರೆಯ ಮುಂಭಾಗದಲ್ಲಿ ಧ್ವಜಕಟ್ಟೆ ಮಾತ್ರ ಉಳಿದುಕೊಂಡಿದೆ. ಬಹುತೇಕ ಕೆರೆಗಳು ಬೇಸಗೆಯಲ್ಲಿ ನೀರಿಲ್ಲದೆ ಸೊರಗಿವೆ. ಕೆಲವು ಕೆರೆಗಳು ಕೊಳಚೆ, ತಾಜ್ಯಗಳನ್ನು ಒಡಲಿನಲ್ಲಿ ತುಂಬಿಕೊಂಡಿವೆ. ಕೆಲವು ಹೂಳು ತುಂಬಿಕೊಂಡು ಮೊದಲಿನ ಸ್ಥಿತಿಗೆ ತಲುಪಿವೆ.

ಸಮಿತಿ ನಿಷ್ಕ್ರಿಯ: ಕೆರೆಗಳ ಅಭಿವೃದ್ಧಿಗೆ ಸ್ಥಳೀಯ ಸಂಜೀವಿನ ಸಂಘ, ಯುವಕ/ ಯುವತಿ ಮಂಡಳಿ ಸೇರಿದಂತೆ ಸ್ಥಳೀಯರನ್ನು ಒಗ್ಗೂಡಿಸಿಕೊಂಡು ಕೆರೆ ನಿರ್ವಹಣೆ ಸಮಿತಿ ರಚನೆ ಮಾಡಲಾಗಿದೆ. ಆದರೆ ಸಮಿತಿ ರಚನೆಯಾದ ದಿನದಿಂದಲೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪವಿದೆ.

ಮೀನು ಸಾಕಣೆ: ಅಭಿವೃದ್ಧಿ ಹೊಂದಿದ ಕೆರೆಗಳನ್ನು ಸುಸ್ಥಿತಿಯಲ್ಲಿ ಡುವ ನಿಟ್ಟಿನಲ್ಲಿ ಜಿ.ಪಂ.ಗಳಿಂದ ಮೀನುಗಾರಿಕೆ ಇಲಾಖೆಯ ಜತೆಗೆ ಮಾತುಕತೆ ನಡೆಸಲಾಗಿದೆ. ಮೀನಿನ ಮರಿಗಳನ್ನು ಕೆರೆಗೆ ಬಿಡುವ ಮೂಲಕ ಗ್ರಾ.ಪಂ.ಗೆ ಸಣ್ಣ ಆದಾಯದ ಮೂಲ ಮಾಡಿಸಿ ಕೊಟ್ಟು, ಆ ಮೂಲಕ ಕೆರೆಯ ನಿರ್ವಹಣೆಗೂ ಚಿಂತನೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಅಮೃತ್‌ ಸರೋವರ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಿದ ಕೆರೆಗಳಲ್ಲಿ ಮಳೆಗಾಲದಲ್ಲಿ ಹೆಚ್ಚಿನ ನೀರು ಸಂಗ್ರಹವಾಗಲಿದೆ. ಈ ಮೂಲಕ ಜಲ ಮೂಲ ವೃದ್ಧಿಯೂ ಆಗಲಿದೆ. ಸಂಜೀವಿನಿ ಸಂಘ, ಯುವಕ ಮಂಡಲ, ಯುವತಿ ಮಂಡಳಿಗಳ ಮೂಲಕ ನಿರ್ವಹಣೆ ಮಾಡುವ ಕಾರ್ಯ ಆಗುತ್ತಿದೆ.
– ಪ್ರಸನ್ನ ಎಚ್‌., ಜಿ.ಪಂ. ಸಿಇಒ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next