Advertisement

ಮಿಷನ್‌ 150+ ಬಿಜೆಪಿಯ ಗುರಿ

06:00 AM Sep 17, 2017 | Team Udayavani |

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ 150 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಮಿಷನ್‌-150 ಘೋಷಣೆ ಮೊಳಗಿಸಿದ್ದ ಬಿಜೆಪಿ, ಇದೀಗ ಆ ಗುರಿಯನ್ನು ಮಿಷನ್‌-150 ಪ್ಲಸ್‌ ಎಂದು ಹೆಚ್ಚಿಸಿಕೊಂಡಿದೆ.

Advertisement

ವಿಧಾನಸಭೆ ಚುನಾವಣೆ ಸಿದ್ಧತೆ ಕುರಿತಂತೆ ಚರ್ಚಿಸಲು ನಗರದಲ್ಲಿ ಶನಿವಾರ ಕರೆದಿದ್ದ ಹಾಲಿ ಮತ್ತು ಸಂಸದರು, ಶಾಸಕರು, ವಿಧಾನ ಪರಿಷತ್‌ ಸದಸ್ಯರ ಸಭೆಯಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌, ನಮ್ಮದು ಮಿಷನ್‌-150 ಪ್ಲಸ್‌ ಎಂದು ಘೊಷಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು (ಮಿಷನ್‌ 150 ಪ್ಲಸ್‌) ಎಂದು ಹೇಳಿದ್ದಾರೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ. ಅದಕ್ಕಾಗಿ ಕೇಂದ್ರ ಸರ್ಕಾರದ ಸಾಧನೆಗಳು ಮತ್ತು ರಾಜ್ಯದ ಕಾಂಗ್ರೆಸ್‌ ಸರ್ಕಾರದ ಜನವಿರೋಧಿ ನೀತಿಗಳನ್ನು ಎಲ್ಲ ಸಮುದಾಯಗಳಿಗೂ ತಲುಪಿಸಬೇಕು ಎಂದು ಹೇಳಿದರು.

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಗ್ರಾಮ, ಬಡವ, ರೈತ, ಜವಾನ, ಯುವಕರು, ದಲಿತರು, ಶೋಷಿತರು, ಪೀಡಿತರು, ವಂಚಿತರು ಹೀಗೆ ಎಲ್ಲಾ ವರ್ಗದ ಪರ ಕೆಲಸ ಮಾಡುತ್ತಿದೆ. ಹಿಂದುಳಿದ ವರ್ಗದವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲು ರಾಷ್ಟ್ರೀಯ ಹಿಂದುಳಿದ ವರ್ಗದ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲು ಸರ್ಕಾರ ಸಿದ್ಧವಾಗಿದ್ದರೂ ಕಾಂಗ್ರೆಸ್‌ ಅಡ್ಡಿಪಡಿಸುತ್ತಿದೆ.

ಅದೇ ರೀತಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೆನೆಪದರ ಆದಾಯ ಮಿತಿಯನ್ನು 6ರಿಂದ 8 ಲಕ್ಷ ರೂ.ಗೆ. ಹೆಚ್ಚಿಸಿತು. ಹಿಂದುಳಿದ ವರ್ಗಗಳ ಕೆನೆಪದರ ಆದಾಯ ಮಿತಿ ಕಳೆದ 24 ವರ್ಷಗಳಿಂದ ಇದ್ದ ಒಂದು ಲಕ್ಷ ರೂ.ಅನ್ನು ಕೂಡ ಎಂಟು ಲಕ್ಷ ರೂ.ಗೆ ಹೆಚ್ಚಿಸಿದೆ. ಕೋಟ್ಯಂತರ ಮಂದಿ ಇದರ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ತೀರಾ ಹಿಂದುಳಿದ ವರ್ಗದವರಿಗೂ ಮೀಸಲಾತಿ ಕಲ್ಪಿಸಲು ಯೋಚಿಸುತ್ತಿರುವ ಕೇಂದ್ರ ಸರ್ಕಾರ, ಎಲ್ಲಾ ಹಿಂದುಳಿದ ವರ್ಗದವರಿಗೂ ಮೀಸಲಾತಿ ಒದಗಿಸಲು ಬದ್ಧವಾಗಿದೆ. ಇದೆಲ್ಲದ ಪರಿಣಾಮ ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ಬಡವರು, ಹಿಂದುಳಿದವರು ಪ್ರಧಾನಿ ನರೇಂದ್ರ ಮೋದಿ ಪರ ಇದ್ದಾರೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.

Advertisement

2013ರ ಪರಿಸ್ಥಿತಿ ಈಗ ಇಲ್ಲ:
ರಾಜ್ಯದಲ್ಲಿ 2013ರ ರಾಜಕೀಯ ಪರಿಸ್ಥಿತಿಗೂ 2018ರ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. 2013ರಲ್ಲಿ ಬಿಜೆಪಿ ಒಟ್ಟಾಗಿದ್ದರೂ ಬೇರೆ ಬೇರೆ ಸ್ಪರ್ಧೆ ಮಾಡಿತ್ತು. ಈಗ ಒಟ್ಟಾಗಿ ಮತ್ತು ಒಗ್ಗಟ್ಟಾಗಿ ಸ್ಪರ್ಧೆ ಮಾಡುತ್ತಿದ್ದೇವೆ. ಎಲ್ಲಾ ಕಡೆ ಮೋದಿ ಅವರ ಹೆಸರು ಕೇಳಿಬರುತ್ತಿದೆ. ಅಲ್ಲದೆ, ರಾಜ್ಯದ ಕಾಂಗ್ರೆಸ್‌ ಸರ್ಕಾರವೂ ಬಡವರ, ರೈತರ ಮತ್ತು ಜನವಿರೋಧಿಯಾಗಿರುವುದರಿಂದ 150 ಪ್ಲಸ್‌ ಗುರಿ ತಲುಪಲು ಯಾವುದೇ ಅಡ್ಡಿ ಇಲ್ಲದಂತಾಗಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌, ಪಕ್ಷದ ಚುನಾವಣಾ ಸಹ ಉಸ್ತುವಾರಿ ಪಿಯೂಷ್‌ ಗೋಯೆಲ್‌, ವಿಧಾನಸಭೆ ಮತ್ತು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕರಾದ ಜಗದೀಶ್‌ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಆರ್‌.ಅಶೋಕ್‌, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ಮತ್ತಿತರರು ಇದ್ದರು.

ರೈತರ ಸಾಲ ಮನ್ನಾ ಲಾಲಿಪಪ್‌, ಚಾಕೋಲೇಟ್‌ ತಿನ್ನಲೂ ಸಾಕಾಗಲ್ಲ
ರಾಜ್ಯದ ಕಾಂಗ್ರೆಸ್‌ ಸರ್ಕಾರ ಮಾಡಿರುವ ರೈತರ ಸಾಲ ಮನ್ನಾ ಲಾಲಿಪಪ್‌, ಚಾಕೋಲೇಟ್‌ ತಿನ್ನಲೂ ಸಾಕಾಗುವುದಿಲ್ಲ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಮತ್ತು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ವ್ಯಂಗ್ಯವಾಡಿದ್ದಾರೆ.

ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಬೇರೆಯವರತ್ತ ಕೈತೋರಿಸದೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೂ ರೈತರು ಮಾಡಿದ್ದ ಸಾಲ ಮನ್ನಾ ಮಾಡಿದೆ. ರಾಜಸ್ತಾನ ಸರ್ಕಾರವೂ ಅದೇ ರೀತಿ ಕ್ರಮ ಕೈಗೊಂಡಿದೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ರೈತರ ಸಹಕಾರ ಬ್ಯಾಂಕ್‌ಗಳ ಸಾಲ 50 ಸಾವಿರ ರೂ.ವರೆಗಿನದ್ದನ್ನು ಮಾತ್ರ ಮನ್ನಾ ಮಾಡಿದೆ. ಇದು ಲಾಲಿಪಪ್‌, ಚಾಕಲೇಟ್‌ ತಿನ್ನಲೂ ಸಾಕಾಗುವುದಿಲ್ಲ ಎಂದರು.

ಹೀಗಾಗಿ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದು ಕೇವಲ ಬೂಲ್‌ಬುಲಯ್ಯ ಕಥೆಯಂತಾಗಿದೆ. ಎಲ್ಲವೂ ಸುಳ್ಳು ಮತ್ತು ವಾಸ್ತವಕ್ಕೆ ದೂರವಾಗಿದ್ದು, ಸಾಲ ಮನ್ನಾ ಎಂಬುದು ರೈತರ ಸಂಕಷ್ಟಕ್ಕೆ ಅವಮಾನ ಮಾಡಿದಂತೆ ಆಗಿದೆ. ಹೀಗಾಗಿ ಮುಂದಿನ ಏಪ್ರಿಲ್‌ನಲ್ಲಿ ಈ ಸರ್ಕಾರವನ್ನು ಜನ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next