ನನಗೆ ನನ್ನೂರಿನಿಂದ ಯಾರಿಗೂ ಹೇಳದೇ ಎಲ್ಲಿಗೋ ಓಡಿ ಹೋದವರ (ತಲೆಮರೆಸಿಕೊಂಡವರ) ವಿಷಯ ಯಾವಾಗಲೂ ಕಾಡುತ್ತದೆ. ನಮ್ಮ ಊರಿನ ಎಲ್ಲರ ಭಾವ ಈಗ ಎಲ್ಲಿದ್ದಾನೆ? ಅಂತರ್‌ಜಾತಿ ಪ್ರೇಮವನ್ನು ಊರಿನಲ್ಲಿ ಮುಂದುವರಿಸಲಾಗದೇ ಓಡಿಹೋದ, ನಾನು, ಅಕ್ಕ ಮತ್ತು ಅಣ್ಣ ಎಂದು ಕರೆಯುತ್ತಿದ್ದ ನಮ್ಮ ಹಳ್ಳಿಯ ಹುಡುಗ ಮತ್ತು ಹುಡುಗಿ ಈಗ ಎಲ್ಲಿದ್ದಾರೆ? ಒಟ್ಟೇ ಇದ್ದಾರೋ? ಓಡಿಹೋಗಿ ಇಪ್ಪತ್ತೈದು ವರುಷದ ನಂತರ ಬಂದ ಗಣಪತಣ್ಣಯ್ಯನಿಗೆ ಕನಿಷ್ಟ ಒಂದು ಮದುವೆ ಮಾಡಿ ತೋಟದ ಒಂದು ಪಾಲು ಕೊಡಬಹುದಿತ್ತಲ್ಲ?- ಹೀಗೆ ಪ್ರತೀ ಮನೆಯ ನಂಬರ (ಸಮಸ್ಯೆ)ಕಣ್ಣ ಮುಂದೆ ಕಾಣುತ್ತದೆ. ಇದಕ್ಕೆ ಜೈಂಟ್ ಪ್ರಸ್‌ರಿಲೀಸ್ ಕೊಡಲು ಸಾಧ್ಯವಿಲ್ಲವಲ್ಲ ! ವಾರ್ ಮೆಮೊರಿಯಲ್ ತರಹದಲ್ಲಿ ನಮ್ಮೂರಿನ ಪಂಚಾಯತಿಯಲ್ಲೋ, ಹತ್ತಿರದ ದೇವಸ್ಥಾನದಲ್ಲಿ ದೇಣಿಗೆ ಕೊಟ್ಟವರ ಹೆಸರು ಫಲಕದಲ್ಲಿ ಹಾಕುತ್ತರಲ್ಲಾ ಹಾಗೇ ಓಡಿ ಹೋದವರ ವಿವರ ಹಾಕುವಂತಿದ್ದರೆ ಬಹಳ ದೊಡ್ಡ ಹಲಗೆಯೇ ಬೇಕಾಗುತ್ತಿತ್ತೇನೋ! ಇಂದೂ ನೀವ್ಯಾರಾದರೂ ನಮ್ಮೂರಿನವರನ್ನು ಪರಿಚಯ ಮಾಡಿಕೊಳ್ಳಲು ಹೋದರೆ ಅವರಲ್ಲಿ ಕೆಲವರು ನಿಮಗೆ ಹೀಗೆ ಹೇಳಬಹುದು- “ನನಗೆ ಒಟ್ಟೂ ನಾಲ್ಕು ಮಕ್ಕಳು, ಎರಡನ್ನು ನಮ್ಮ ಊರಿಗೇ ಕೊಟ್ಟಿದ್ದು, ಒಬ್ಬ ಮನೇಲೇ ತೋಟ ನೋಡಿಕೊಂಡಿದ್ದಾನೆ, ಇನ್ನೊಬ್ಬ ಹೋಗಿ ಮೂವತ್ತೆ„ದು ವರುಷ ಆಯಿತು, ಪತ್ತೆ ಇಲ್ಲ !’
ನಾನು ಚಿಕ್ಕವನಿರುವಾಗ ಊರಲ್ಲಿ ಹಬ್ಬ-ಹರಿದಿನ, ಮುಂಜಿ, ಮದುವೆಯ ಸುದ್ದಿ ಕೇಳಿದಂತೇ ಯಾರಾದರೂ ಓಡಿ ಹೋದರು ಎನ್ನುವ ಸುದ್ದಿಯನ್ನೂ ಕೇಳುತ್ತಿದ್ದೆ. ಅವರು ಯಾರೂ ದೂರದವರಾಗಿರಲಿಲ್ಲ. ನಿನ್ನೆಯವರೆಗೆ ಅವರೊಡನೆ ಮಾತನಾಡಿದ್ದಿರುತ್ತಿತ್ತು, ನನ್ನೊಡನೇ ಶಾಲೆಗೆ ಹೋದ ಅಥವಾ ನನಗಿಂತ ಕೆಲವು ವರುಷ ಸೀನಿಯರ್ ಎನಿಸಿಕೊಂಡವರು ಇರುತ್ತಿದ್ದರು. ನಮ್ಮ ಮನೆಯಿಂದ ಮೂರನೆಯ ಮನೆಯಲ್ಲಿ ಇರುವವನು ನಮಗೆ ಯಾವತ್ತೂ ದಿನಾ ಹಾಲು ತಂದುಕೊಡುವವ, ಹಲಸಿನಕಾಯಿ ಹಪ್ಪಳಕ್ಕೆ ಸರಿಯಾದ ಹಲಸಿಕಾಯಿ ದೂರದ ಯಾವುದೋ ಒಂದು ಮರದಿಂದ ಕೊಯ್ದು ತಂದುಕೊಡುವವ, ಕೆಲವು ಸಲ ಹಂದಿ, ಹುಲಿ ಬರುತ್ತದೆ ಎಂದು ರಾತ್ರಿ ನಮ್ಮ ಮನೆ ಹಿಂದಿನ ಗದ್ದೆ ಕಾದು ಕೊಡುವಂಥವರು ಯಾರಿಗೂ ಗೊತ್ತಿಲ್ಲದಂತೇ ಮರುದಿನವಾಗುವವರೆಗೆ ಇರುತ್ತಿರಲಿಲ್ಲ. ನಾಪತ್ತೆಯಾಗುತ್ತಿದ್ದರು. ಈ ಕೆಲಸಕ್ಕೆ ನಮ್ಮೂರಲ್ಲಿ ಹೇಳುತ್ತಿದ್ದುದು “ಓಡಿಹೋಗುವುದು’ ಎಂದು.
ಹಾಗೆಯೇ ನಮ್ಮ ಮನೆಯಿಂದ ಎರಡು ಫ‚ರ್ಲಾಂಗ್ ದೂರದಲ್ಲಿ ಒಬ್ಬರು ಓಡಿ ಹೋಗಿದ್ದು. ಸಾದಾ! ಕಳೆದುಹೋಗಿದ್ದರೆ, ಹತ್ತರ ಕೂಡ ಹನ್ನೊಂದು ಎಂದು ಸುಮ್ಮನಿರುತ್ತಿದ್ದರೇನೋ. ಆದರೆ, ಹಾಗಾಗಲಿಲ್ಲ. ಆತ ತನ್ನ ಹೆಂಡತಿಯ ಹತ್ತಿರದ ತಂಗಿಯೊಡನೆಯೇ ಓಡಿಹೋದ. ಊರು, ಪಕ್ಕದ ಊರೆಲ್ಲ ಗುಲ್ಲೇಗುಲ್ಲು. “”ಆತ ಹೆಂಡತಿಯ ತಂಗಿಯನ್ನು ಹಾರಿಸಿಕೊಂಡು ಹೋದ” ಎಂದು. ಆತನಿಗೆ ಮಕ್ಕಳು ಇದ್ದವು, ಆತನ ಹೆಂಡತಿಯ ಮುಖ ಮಾತ್ರ ಕಾಣಲಾಗುತ್ತಿರಲಿಲ್ಲ. ಮನೆಗೆ ನೋಡಲು ಬಂದವರನ್ನು ನೋಡಿ ಮಾತುಗೀತು ಏನೂ ಇರಲಿಲ್ಲ. ಬರಿ ಅಳುವಷ್ಟೇ. ಆದರೂ ಅವಳು, “”ನನ್ನ ಗಂಡಂದು ತಪ್ಪಿಲೆÂ, ಎಲ್ಲ ಅವಳದ್ದೇ ಕಿತಾಪತಿ” ಎಂದು ಹೇಳುತ್ತಿದ್ದುದು ನೆನಪಿದೆ. ಈ ಘಟನೆಯ ನಂತರ ಊರಿನವರ ಬಾಯಲ್ಲಿ ನನಗೆ ಮೊದಲೇ ಅನಿಸಿತ್ತು, ಹೆಂಡತಿಯನ್ನು ಆತ ಕರೆಯುವ ನಮೂನಿನೆ ಬೇರೆ ಇತ್ತು ಎಂದೆಲ್ಲ ಬಂದಿತ್ತು. ಈ ಘಟನೆ ಆಗಿ ಸುಮಾರು ಐದಾರು ತಿಂಗಳವರೆಗೂ ಕೆಲವರು, “”ಅವನನ್ನು ಶಿವಮೊಗ್ಗದಲ್ಲಿ ನೋಡಿದ್ದೇನೆ, ಕಾರವಾರದಲ್ಲಿ ನೋಡಿದ್ದೇನೆ, ನನ್ನನ್ನು ನೋಡುತ್ತಲೇ ಒಂದು ಕ್ಷಣದಲ್ಲಿ ನಾಪತ್ತೆ ಆ ಗಿರಾಕಿ. ನನಗೂ ಬಸ್ಸಿಗೆ ಹೊತ್ತಾಗಿತ್ತು ಹೊರಟೆ, ಯಾವುದಕ್ಕೂ ನೀವು ಯಾಕೆ ಶಿವಮೊಗ್ಗದ ಲೋಕಲ್ ಪತ್ರಿಕೆಯಲಿ ಒಂದು ಜಾಹೀರಾತು ಹಾಕಬಾರದು” ಎಂದೆಲ್ಲ ಹೇಳುತ್ತಿದ್ದರು. ಕಳೆದುಕೊಂಡವರಿಗೆ ಈ ತರದ ಮಾತುಗಳನ್ನು ಕೇಳಿ ಒಮ್ಮೆ ಜೀವ ಬಂದಂತಾಗುತ್ತಿತ್ತು.ಇನ್ನೊಂದು ನಾಲ್ಕಾರು ತಿಂಗಳು ಶಿವಮೊಗ್ಗದಲ್ಲಿ ಗುರುತಿನವರು ಯಾರಾದರೂ ಇದ್ದಾರಾ ಎಂದು ಹುಡುಕುವುದು, ಗುರುತದವರು ಯಾರಾದರೂ ಸಿಕ್ಕರೆ ಅವರಿಗೆ ಪತ್ರ ಹಾಕುವುದು ಇತ್ಯಾದಿಗಳು ನಡೆಯುತ್ತಿದ್ದವು.
ಹುಡುಗ-ಹುಡುಗಿ ಒಟ್ಟಿಗೆ ಕಳೆದು ಹೋದರಂತೂ ಆಯಿತು! ಎರಡೂ ಮನೆಯವರು ಯಾವುದೇ ಧಾರ್ಮಿಕ ವಿಧಿ-ವಿಧಾನವಿಲ್ಲದೇ ಸಂಬಂಧಿಕರಾಗಿಬಿಡುತ್ತಿದ್ದರು! ಸಂಬೋಧಿಸಲಾಗದಿದ್ದರೂ ಅಳಿಯ, ಅತ್ತೆ-ಮಾವ, ಭಾವ ಒಮ್ಮೆಲೆ ಡೆಸಿಗ್ನೇಟ್ ಆಗಿಬಿಡುತ್ತಿತ್ತು. ಎರಡೂ ಮನೆಯವರು ಸೇರಿ ಹುಡುಕುವುದೋ ಅಥವಾ ಬೇರೆ ಬೇರೆ ಹುಡುಕು ವುದೋ, ಗಂಡಿನ ಮನೆಯವರಿಗೆ ಅಥವಾ ಹೆಣ್ಣಿನ ಮನೆಯವರಿಗೆ ಪ್ರತ್ಯೇಕವಾಗಿ ಅವರು ಸಿಕ್ಕರೆ ಅವರ ಬದುಕನ್ನು ಮನೆಗೆ ಕರೆದುಕೊಂಡು ಬಂದು ಇನ್ನೊಂದು ಪಾರ್ಟಿಯನ್ನು ಸ್ಟೇಶನ್ನಿಗೆ ಕಳುಹಿಸುವುದೋ, ಹುಡುಕಿದ ನಂತರ ಹುಡುಗಿಯನ್ನು ಊರಿಗೆ ಕರೆಸದೇ ದೂರದ ಊರಿನ ಸಂಬಂಧಿಕರ ಮನೆಯಲ್ಲೇ ಇಟ್ಟು ಅಲ್ಲಿಂದಲೇ ಬೇರೆ ಸಂಬಂಧ ಹುಡುಕಿಮದುವೆ ಮಾಡುವುದೋ, ಹೀಗೆ ಏನೇನೋ ನಡೆಯುತ್ತಿದ್ದವು. ಓಡಿ ಹೋಗಿ ಸುಮಾರು ವಾರ ಎರಡು ವಾರದವರೆಗೆ ಊರಲ್ಲಿ ಯಾವುದೇ ಮರದಲ್ಲಿ ಗಾಳಿಯಿಂದ ಸೀರೆ-ಲುಂಗಿ ಹೋಗಿ ಮೇಲೆ ಸಿಕ್ಕಿಹಾಕಿ ಕೊಂಡರೂ ಅವರು ನೇಣು ಹಾಕಿಕೊಂಡಿದ್ದಾರೆ ಎನ್ನುವ ಗುಲ್ಲಾಗುತ್ತಿತ್ತು.
ಆದರೆ, ಊರಲ್ಲಿ ಯಾವುದಾದರೂ ಹತ್ತನೇ ಕ್ಲಾಸು ಫ‚ೇಲಾದ, ಅಥವಾ ಸ್ವಲ್ಪ$ಅಧಿಕ ಮಾಡಿಕೊಂಡು ಮನೆಯಲ್ಲಿ, ಊರಲ್ಲಿ ಯಾರ ಮಾತೂ ಕೇಳದೇ ಅಡ್ಡಾಡುವ ಹುಡುಗ ಓಡಿಹೋದರೆ ಮಾತ್ರ ಯಾರಿಗೂ ಅಷ್ಟು ಬೇಜಾರಿರಲಿಲ್ಲ. ಹಾಗೆಯೇ ಲಾಟೀನು ಹಿಡಿದು ಏಣಿಯ ಮೇಲಿನಿಂದ ಕೆಳಗೆ ಬಿದ್ದರೂ “ಲಾಟೀನಿನ ಗಾಜು ಜರಿದಿಯಲ್ಲೊ’ ಅನ್ನುತ್ತಾ ಮಗನ ಕಾಲು ಮುರಿದುದರ ಪರಿವೆಯೆ ಇಲ್ಲದೇ ಇನ್ನೊಂದು ಏಟು ಹಾಕುವ ತಂದೆಯಂದಿರೂ ಆಗ ಊರಲ್ಲಿ ತುಂಬಿಕೊಂಡಿದ್ದರು. ಇವನ್ನೆಲ್ಲ ಗಮನಿಸುತ್ತಿರುವ ಉಳಿದ ಹುಡುಗರ ಅಪ್ಪಂದಿರೂ “”ಪಿ.ಯು.ಸಿ ಬೇರೆ, ಇನ್ನೊಂದು ಎರಡು ವರುಷ ಅವ ಊರಲ್ಲೇ ಇದ್ದಿದ್ದರೆ ನಮ್ಮ ಮಕ್ಕಳೂ ಪೂರ್ತಿ ಹಾಳಾಗ್ತಿದ್ರು” ಎನ್ನುತ್ತಿದ್ದರು. ಓಡಿ ಹೋದ ಹುಡುಗ ಅವನ ತಂದೆಯಿಂದ ಮನೆಯಲ್ಲಿದ್ದ ಮೂರು ಸೆಲ್ಲಿನ ಟಾರ್ಚ್, ಕಸಬರಿಗೆ, ದೊಣ್ಣೆ, ಸ್ಟೀಲ್ ಪಾತ್ರೆಯಿಂದ ಎಷ್ಟು ಬಾರಿ ಹೊಡೆತ ತಿಂದಿರುತ್ತಿದ್ದನೋ! “ಒಂದು ದಮಿx ಕಾಸೂ ಇಲ್ಲೆ, ಹೊರಗೆ ಬಿದ್ದು ಹೋಗು’ ಎಂದು ಸಿಟ್ಟು ಬಂದಾಗ ತಂದೆಯಿಂದ ಎಷ್ಟು ಬಾರಿ ಹೇಳಿಸಿಕೊಂಡಿರುತ್ತಿದ್ದನೋ! ಆತನ ಮಿತ್ರ ಗೋವಾ, ಮುಂಬಯಿ, ಬೆಂಗಳೂರಿನಲ್ಲಿರಲಿ ಅಥವಾ ಇಲ್ಲದೇ ಇರಲಿ, ಮಾಣಿ ಹೊರಡಬೇಕೆಂದು ನಿರ್ಧಾರ ಮಾಡಿಬಿಟ್ಟರೆ ಆಯಿತು.ಓಡಿಹೋದ ವಸುಮ್ಮನೇ ಉಟ್ಟಬಟ್ಟೆಯಲ್ಲಿ ಹೊರಟ ಎಂದೇ ಎಲ್ಲಾ ಸಾರಿ ಎಂದುಕೊಳ್ಳಬೇಕಾಗಿರಲಿಲ್ಲ. ಮಾಣಿ ಇನ್ನೂ ಮನೆಗೆ ಬರಲಿಲ್ಲ ಎನ್ನುತ್ತಿದ್ದಂತೇ ತಂದೆಯಂದಿರು ಮನೆಯ ಗಿಳೀಗುಟ್ಟಕ್ಕೆ ನೇತು ಹಾಕಿದ ಸೈಕಲ್/ಬೈಕ್ ಕೀ ಇದೆಯಾ ಎಂದು ನೋಡುತ್ತಿದ್ದರೆ, ತಾಯಿ ಒಗ್ಗರಣೆ ಡಬ್ಬಿಯಲ್ಲಿಟ್ಟ ಹಣ ಬಂಗಾರವೆಲ್ಲ ಇದೆಯಾ ಎಂದು ಖಾತ್ರಿ ಮಾಡಿಕೊಳ್ಳುತ್ತಿದ್ದಳು. ಹೋದ ಎರಡು ದಿವಸ ಜಗುಲಿಯಲ್ಲಿ ಗಟ್ಟಿ ಕುಳಿತ ತಂದೆ, “ಎಲ್ಲಿ ಹೋಗುತ್ತಾನೆ ದುಡ್ಡು ಖಾಲಿಯಾದ ಮೇಲೆ ಮನೆಗೇ ಬರಬೇಕಲ್ಲ’ ಎಂದರೆ, ತಾಯಿ ಏನೂ ಮಾತನಾಡುತ್ತಿರಲಿಲ್ಲ. ಮೂರು-ನಾಲ್ಕು ದಿವಸವಾದ ಮೇಲೆ ತಂದೆಗೆ ನಿಜವಾಗಲೂ ಬೇಜಾರು, ಊಟಕ್ಕೆ ಕುಳಿತಾಗ ಬಿನ್ನಗೆ, ಊಟ ಸೇರದೇ ಇರುವುದು, ಇವರ ಸಂಗಡ ಊಟಕ್ಕೆ ಕುಳಿತ ಮನೆಯ ಅಜ್ಜಿ ಅಂದರೆ ತಂದೆಯ ತಾಯಿ, “ಎಲ್ಲ ನಿನ್ನಿಂದಲೇ ಆದದ್ದು’ ಎಂದು ತನ್ನ ಮಗನಿಗೇ ಜರಿಯುವುದು ನಡೆಯುತ್ತಿತ್ತು. ಮಗ ಎಲ್ಲೂ ಕಾಣುತ್ತಿಲ್ಲ ಎಂದು ಕೇಳುತ್ತಿದ್ದಂತೇ ಎಚ್ಚರತಪ್ಪಿ$ಹೋಗುವ ತಾಯಂದಿರಿದ್ದರು. “ಊರವರ ಬಾಯಲ್ಲಿ, ನಮ್ಮ ಮನೆಯವರ ಬಾಯಲ್ಲಿ ಬೀಳುವುದಕ್ಕಿಂತ ಎಲ್ಲಾದರೂ ದೂರ ಹೋಗಿ, ಗಟ್ಟಿಯಾಗಿ, ನೀನು ಯಾರು ಎಂದು ತೋರಿಸು’ ಎಂದು ಒಗ್ಗರಣೆ ಡಬ್ಬಿಯಲ್ಲಿದ್ದ ದುಡ್ಡನ್ನೆಲ್ಲ ಕೊಟ್ಟು ಹರಸಿದ ತಾಯಂದಿರೂ ಇದ್ದರು.
ಹೀಗೆ ನಮ್ಮ ಊರಿನಲ್ಲಿ ನಾಪತ್ತೆಯಾದವರು ಊರಿಗೆ ಪುನಃ ಬಂದಿದ್ದು ಕಡಿಮೆಯೇ. ನಾವು ಹುಟ್ಟುವ ಇಪ್ಪತ್ತೆ„ದು ವರುಷ ಮೊದಲೇ ಓಡಿಹೋದ ಒಂದಿಬ್ಬರು ತಿರುಗಿ ಬಂದಿದ್ದಿದೆ. ಆದರೆ, ಅಷ್ಟರಲ್ಲಿ ಹೋದವನು ಇನ್ನು ಬರುವುದು ಸುಳ್ಳು ಎಂದು ಆತನನ್ನು ಬಿಟ್ಟೇ ಜಮೀನಿನ ಹಿಸೆ ಆಗಿ ತನ್ನ ರಕ್ತ ಸಂಬಂಧಿಕರ ನಡುವೆಯೇ ಆತ ಅನಾಥನಾಗಿ “ನನಗೆ ನನ್ನ ಪಾಲಿನ ಜಮೀನು ಕೊಡಿ’ ಎಂದು ಹೇಳಿಕೊಂಡು ಯಾವ ಕೆಲಸವನ್ನೂ ಮಾಡದೇ ಸಾಯುವವರೆಗೂ ಚಿಪ್ಪು ಹೆಕ್ಕಿದ್ದಿದೆ ! ಹೀಗೆ ನಮ್ಮೂರಿನ ಹೆಚ್ಚಿನ ಮನೆಗಳಲ್ಲಿ ಒಂದು ತಲೆಮರೆಸಿಕೊಂಡವರ ಕತೆಯಿದೆ. ಈ ನಾಪತ್ತೆಯಾಗುವಿಕೆಯೇ ನಮ್ಮೂರ ಸಾಮಾಜಿಕ ಸಮತೋಲನವಾಗಿತ್ತೆನ್ನಬಹುದು!
ಇವೆಲ್ಲ ನಡೆದು ಸುಮಾರು ಮೂವತ್ತು-ಮೂವತ್ತೆ„ದು ವರುಷಗಳೇ ಆಗಿರಬೇಕು. ತಲೆಗೆ ಒಂದು ಕೆಲಸ ಬೇಕಲ್ಲ ! ಇತ್ತೀಚೆಗೆ ನನ್ನ ತಲೆಯಲ್ಲಿ ಈ ಪ್ರಶ್ನೆ ಬಂದು ಹೋಗುತ್ತಿದೆ- ಈಗ ಯಾಕೆ ಮೊದಲಿನಂತೇ ನಮ್ಮೂ ರಲ್ಲಿ ಯಾರೂ ತಲೆ ಮರೆಸಿಕೊಳ್ಳುತ್ತಿಲ್ಲ, ನಾಪತ್ತೆಯಾಗುತ್ತಿಲ್ಲ? ಎಂದು.
ಅಂತರ್‌ಜಾತಿ ಮದುವೆಯಾದ ಹುಡುಗ-ಹುಡುಗಿ ಅದೇ ಊರಿನಲ್ಲಿರಲು ಸಾಧ್ಯವಿಲ್ಲ ಎಂದೇ ಓಡಿ ಹೋಗಿದ್ದಿರಬೇಕು.ಆರೆಂಟು ಮಕ್ಕಳಿರುವ ಮನೆಯಲ್ಲಿ ಒಬ್ಬಿಬ್ಬರಿಗೆ ಏನಾದರೊಂದಾಗಿ ರಬಹುದು. ಹತ್ತನೆಯ ತರಗತಿಯಲ್ಲಿ ಫ‚ೇಲಾದ ಪುಂಡು ಮಾಡುವ ಮಾಣಿ ಊರಿನವರ ಪ್ರಶ್ನೆ- ಸಲಹೆಗಳನ್ನು ತಡೆಯಲಾಗದೇ ಊರು ಬಿಟ್ಟಿರಬೇಕು. ಅದೇ ಸಮಯಕ್ಕೆ ಆತನ ಮುಂಬೈ ಗೆಳೆಯ ತನ್ನ ಹೊಸ ಊರಿನ ರಂಗಿನ ಬಗ್ಗೆ ಹೇಳಿರಲೂಬಹುದು. ಈ ಮೇಲಿನ ಎಲ್ಲ ಉದಾಹರಣೆಗಳಲ್ಲೂ ಇರುವ ಒಂದು ಸತ್ಯ ಎಂದರೆ ತಾವು ತೆಗೆದುಕೊಂಡ ನಿರ್ಧಾರ ಅಥವಾ ನಡವಳಿಕೆಯಿಂದಾಗಿ ಅವನು/ಳು ಆ ಊರಲ್ಲಿ ತಮ್ಮ ಮುಖ ಮತ್ತೆ ತೋರಿಸಲಾಗದೇ ಇದ್ದುದು. ಈ ಸಮಸ್ಯೆಗೆ ಪರಿಹಾರವೆಂದು ಅವರು ಅಡಗುವ ನಿರ್ಧಾರ ಮಾಡಿದ್ದು. ಇದು ಪರಿಚಿತ ಎನ್ನುವ ಸಮಾಜಕ್ಕಿರುವ ಕಷ್ಟ.
ಹತ್ತನೇ ತರಗತಿಯ ನಂತರ ಎಲ್ಲರೂ ಈ ಪರಿಚಿತ ಸಮಾಜದಿಂದ ಅಪರಿಚಿತ ಸಮಾಜಕ್ಕೆ ಹೊರಟರೆ, ಅದಕ್ಕೆ ಓಡಿಹೋಗುವುದ್ಯಾಕೆ ! ಆಗಿನ ಅಷ್ಟು ದೊಡ್ಡ ವಿಷಯ ಈಗ ದೊಡ್ಡದೇ ಅಲ್ಲವೆನ್ನುವಂತೇ ಬಹಳ ಅಪ್ರಸ್ತುತವೂ ಆಗಿದೆ ಎನ್ನೋಣ. (ಡಿಸ್ರಪ್ಟಿವ್ ಟೆಕ್ನಾಲಜಿ !) ಈ ಪರಿಚಿತ ಸಮಾಜವೆನ್ನುವ ಹಳ್ಳಿಗಳೂ ಅಪರಿಚಿತ ಸ್ತರಗಳ ಕಡೆಗೆ ಬೆಳೆಯುವಾಗ, ನಿನ್ನ ಬಗ್ಗೆ ಪಕ್ಕದ ಮನೆಯವನು ಯಾವ ದಿಕ್ಕಿನಿಂದಲೂ ತಲೆಕೆಡಿಸಿಕೊಳ್ಳದಿದ್ದರೆ ತಲೆ ಮರೆಸುವುದು ಯಾಕೆ? ಎನ್ನುವುದು ಗಟ್ಟಿಯಾಗುತ್ತದೆ. ಓಡಿ ಹೋಗುವವರು ನಮ್ಮೂರಲ್ಲಿ ಕಾಣುತ್ತಿಲ್ಲವೆಂದಷ್ಟೇ ಹೇಳುತ್ತಿದ್ದೇನೆಯೇ ಹೊರತು ಅದು ಈಗ ಇಲ್ಲವೇ ಇಲ್ಲವೆನ್ನುತ್ತಿಲ್ಲ. ಉತ್ತರಪ್ರದೇಶ, ಬಿಹಾರ, ಪೂರ್ವೋತ್ತರ ರಾಜ್ಯಗಳಿಂದ ದಿನಾ ಇನ್ನೆಷ್ಟು ಬ್ಯಾಗುಗಳು ದೆಹಲಿ, ಮುಂಬೈಯ ರೇಲ್ವೇ ನಿಲ್ದಾಣದ ಪ್ಲಾಟ್‌ಫ‚ಾರ್ಮ್ನಲ್ಲಿ ಬಂದು ನಿಂತು, ಮುಂದೇನು ಎನ್ನುವ ಪ್ರಶ್ನೆ ಹೊತ್ತು, ಅಲ್ಲೇ ಇರುವ ನಳದಲ್ಲಿ ಮೊದಲೊಂದಿಷ್ಟು ನೀರು ಕುಡಿಯೋಣಾ ಎನ್ನುವುದು ನಡೆಯುತ್ತಲೇ ಇದೆ. ಅಪರಿಚಿತ ಎನ್ನುವ ಮಹಾನಗರಗಳಲ್ಲೂ ಪರಿಚಿತ ಎನ್ನುವ ಪ್ರಾಕ್ಸಿಮಿಟಿಯಲ್ಲಿ ನಿನ್ನೆಯವರೆಗೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದವನು ಇಂದು ಕಾಣದೇ ಇದ್ದಿದ್ದು, ಚಿಟ್ ಫ‚ಂಡ್ ಇತ್ಯಾದಿ ಮಾಡಿ ಕೈಸುಟ್ಟುಕೊಂಡು ಕುಟುಂಬ ಕುಟುಂಬವೇ ರಾತ್ರಿ ಬೆಳಗಾಗುವವರೆಗೆ ನಾಪತ್ತೆಯಾಗಿದ್ದು ಹತ್ತಿರದಿಂದಲೇ ನೋಡಿರುತ್ತೇವೆ. ಅವರೂ ಕಾಡುತ್ತಾರೆ.
ಹಲವು ವರ್ಷಗಳ ಹಿಂದೆ ಓಡಿಹೋದವರು ಜನರಿಂದ ತಪ್ಪಿಸಿ ಕೊಳ್ಳಬೇಕು ಎಂದು ಯೋಚಿಸಿದ್ದರೆ, ಈಗಿನವರು ಕೆಲಸದ ಒತ್ತಡ, ಜನಸಂದಣಿ, ಮೊಬೈಲ್, ಮನೆ ಸಾಲ, ಕ್ರೆಡಿಟ್‌ಕಾರ್ಡ್ ಇತ್ಯಾದಿಗಳೆಂಬ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಬೇಕೆಂದು ಹವಣಿಸುತ್ತಿದ್ದಾರೆ. ಅದಕ್ಕೇ ಇರ ಬೇಕು, ಪ್ರವಾಸೀ ವೆಬ್ ಸೈಟುಗಳಲ್ಲಿ ನೀವು ಜಾಹೀರಾತು ನೋಡಿದರೆ ಮೂರು ರಾತ್ರಿ, ನಾಲ್ಕು ದಿನ ಗೋವಾ ಎಸ್ಕೇಪ್‌ಎಂದು ಇರುತ್ತದೆ. ಮೊದಲು ಖುಷಿ, ಮೋಜು ಎಂದೆಲ್ಲ ಇದ್ದ ಜಾಗದಲ್ಲಿ ಈಗ ಎಸ್ಕೇಪ್ ಬಂದಿದೆ.
ಹಿಂದೆಲ್ಲ ಹೊರಡಬೇಕು ಎಂದು ನಿರ್ಧರಿಸಿದ ಕೆಲವೇ ಕ್ಷಣಗಳಲ್ಲಿ ಆತ ರೋಡಿಗೆ ಬಂದು ದೂರ ಹೊರಟ ಲಾರಿಗೆ ಕೈಮಾಡಿದರಾಯಿತು. ಡ್ರೆ„ವರ್ ಹತ್ತಿಸಿಕೊಳ್ಳಲು ನಿಲ್ಲಿಸಿದ ಎಂದರೆ ಆತ ನಾಪತ್ತೆಯಾದ ಎಂದೇ ಅರ್ಥ. ಆದರೆ ಈಗ?! ಮೇಲೆ ಉಲ್ಲೇಖೀಸಿದ ವ್ಯವಸ್ಥೆಯಿಂದ ನಿಜವಾಗಲೂ ಕಾಣೆಯಾಗಲು ಸಾಧ್ಯವೇ? ಈಗ ಹೈಡಿಂಗ್ ಐಡೆಂಟಿಟಿ ಎಷ್ಟರಮಟ್ಟಿಗೆ ಸಾಧ್ಯವಿದೆ? ಈ ಅಪರಿಚಿತ ಸಮಾಜದಲ್ಲಿ ಇನ್ನೆಷ್ಟು ಸಾವಿರ ಕಡೆ ನಮ್ಮ ವಿಳಾಸ ಮತ್ತು ನಂಬರ್, ಬಯೋಮೆಟ್ರಿಕ್ ಹಂಚಿದ್ದೇವೋ, ಗುರುತು ಸ್ವೀಕರಿಸಿದವರೆಲ್ಲ ಇದು ಕಾನ್ಫಿಡೆನ್‌ಶಿಯಲ್ ಡೇಟಾ, ನಾವು ಯಾರಿಗೂ ಕೊಡುವುದಿಲ್ಲ ಎಂದೇ ತೆಗೆದುಕೊಂಡವರು. ಕೈಗೆ ಏನೂ ಸಿಗದೇ ಹತ್ತಿರವಿದ್ದ ಪೆನ್ನಲ್ಲಿ ಬೆನ್ನನ್ನು ಕೆರೆದುಕೊಳ್ಳಲು ಪ್ರಯತ್ನಿಸಿ. ಕ್ಷಣದಲ್ಲಿ ನಿಮ್ಮ ಮೊಬೈಲಿಗೆ ಹತ್ತಿರದ ಮೆಡಿಕಲ್ ಶಾಪಿನ ವಿಳಾಸ ಮತ್ತು ಅಲ್ಲಿ ಸಿಗುವ ಆ್ಯಂಟಿಸೆಪ್ಟಿಕ್ ಕ್ರೀಮಿನ ಪ್ರಿಸ್ಕ್ರಿಪ್ಷನ್ ಬರಬಹುದು! ಈ ರೀತಿ ನಮ್ಮ ಹೆಜ್ಜೆ ಹೆಜ್ಜೆಯನ್ನೂ ನಮೂದಿಸಿಕೊಳ್ಳುತ್ತಿರುವ ಅಪರಿಚಿತ ಸಮಾಜದ ಜಂಜಾಟ ಬೇಡವೆಂದು ಒಮ್ಮೆ ಎಲ್ಲವನ್ನೂ ಶಾಶ್ವತವಾಗಿ ಡಿಲೀಟ್ ಮಾಡಲು ನೋಡಿ. ಇಷ್ಟು ಹೊತ್ತು ಅಪರಿಚಿತವಿದ್ದ ವ್ಯವಸ್ಥೆಗೆ ಸಂಶಯ ಪ್ರಾರಂಭವಾಗಿ ಒಮ್ಮೆಲೇ ಜಾಗೃತವಾಗುತ್ತದೆ. ಆಗಲೇ ನೀವು ಲೈವ್ ಬರುವುದು!
ಸಚ್ಚಿದಾನಂದ ಹೆಗಡೆ