ಜಯನಗರ ಎಂಬುದೊಂದು ರಾಜ್ಯ. ಅಲ್ಲಿ ಉತ್ತಮ ಸೇನನೆಂಬ ರಾಜನಿದ್ದ. ಹೆಸರಿಗೆ ತಕ್ಕಂತೆ ಆತ ಉತ್ತಮ ರೀತಿಯಲ್ಲಿ ಆಡಳಿತ ನಡೆಸುತಿದ್ದ. ಪ್ರಜೆಗಳನ್ನು ಕ್ಷೇಮವಾಗಿ ನೋಡಿಕೊಳ್ಳುವುದು ತನ್ನ ಕರ್ತವ್ಯವೆಂದು ಅವನು ನಂಬಿದ್ದ. ಹೀಗಾಗಿ ಅವನ ಆಡಳಿತದಲ್ಲಿ ಜನರು ನೆಮ್ಮದಿಯಿಂದಿದ್ದರು. ಆದರೆ, ಅದೊಂದು ವರ್ಷ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿಕೊಂಡು ಬಿಟ್ಟಿತು. ವರ್ಷಪೂರ್ತಿ ಮಳೆಯೇ ಆಗಲಿಲ್ಲ. ಇರುವ ಹಳ್ಳ, ಕೆರೆಗಳು ಬತ್ತಿದವು. ಕೃಷಿ ಚಟುವಟಿಕೆಗಳು ನಿಂತು ಹೋದವು. ಜಾನುವಾರುಗಳಿಗೆ ಕುಡಿಯಲು ನೀಡಲು ಇಲ್ಲದಂಥ ಪರಿಸ್ಥಿತಿ ಬಂದಿತು.
ಬರಕ್ಕೆ ಪರಿಹಾರ ಕಂಡು ಹಿಡಿಯಲು ರಾಜ ಮಂತ್ರಿಗಳ ಸಭೆ ಕರೆದ. ಅವರೊಂದಿಗೆ ಸಮಾಲೋಚಿಸಿ ಪ್ರತಿಯೊಂದು ಗ್ರಾಮದಲ್ಲೂ ಬಾವಿ ತೋಡಿಸಬೇಕೆಂದು ಆಜ್ಞೆ ಹೊರಡಿಸಿದ. ಅದರ ಜವಾಬ್ದಾರಿಯನ್ನು ಮಂತ್ರಿಗಳಿಗೆ ನೀಡಿದ. ಮಂತ್ರಿಗಳೂ ಆಯಾ ವ್ಯಾಪ್ತಿಯಲ್ಲಿದ್ದ ಗುತ್ತಿಗೆದಾರರಿಗೆ ಜವಾಬ್ದಾರಿ ನೀಡಿದರು. ಹೀಗೆ ತಿಂಗಳಲ್ಲೇ ಬಾವಿಗಳು ನಿರ್ಮಾಣಗೊಂಡವು. ಎಲ್ಲಾ ಬಾವಿಗಳಲ್ಲೂ ಯಥೇತ್ಛ ನೀರು ಬಂದಿತು. ಜನರ ಬವಣೆಯೂ ತಪ್ಪಿತು. ಪ್ರಜೆಗಳೆಲ್ಲರೂ ಸಂತೋಷದಿಂದ ರಾಜನನ್ನು ಕೊಂಡಾಡಿದರು.
ಅದೊಂದು ಬಾರಿ ರಾಜ ಮಾರುವೇಷದಲ್ಲಿ ನಗರ ಸಂಚಾರಕ್ಕೆ ಹೊರಟಿದ್ದ. ಆಗ ಒಂದಷ್ಟು ಮಂದಿ ಮಹಿಳೆಯರು ಬಿಂದಿಗೆ ಹೊತ್ತುಕೊಂಡು ಕಾಡಿನ ಹಾದಿಯಲ್ಲಿ ನಡೆಯುವುದನ್ನು ನೋಡಿದ. ಅವರನ್ನು ಎಲ್ಲಿಗೆ ಹೋಗುತ್ತಿರುವಿರಿ? ಎಂದು ಕೇಳಿದ. ಅವರಲ್ಲೊಬ್ಬ ಮಹಿಳೆ “ನೀರು ತರಲು ಕಾಡಿನಲ್ಲಿರುವ ಹಳ್ಳಕ್ಕೆ ಹೋಗುತ್ತಿದ್ದೇವೆ. ಅದೂ ಒಣಗಿ ಹೋಗುವ ಸ್ಥಿತಿಯಲ್ಲಿದೆ. ಸಿಕ್ಕಷ್ಟು ನೀರು ತರಬೇಕಿದೆ’ ಎಂದಳು. ಅದನ್ನು ಕೇಳಿದ ರಾಜ “ನಿಮ್ಮೂರಲ್ಲಿ ಬಾವಿ ಇಲ್ಲವೇ?’ ಎಂದು ಕೇಳಿದ.
“ಇಲ್ಲ’ ಎಂದಾಕೆ ಉತ್ತರಿಸಿದಳು. ರಾಜನಿಗೆ ಆಶ್ಚರ್ಯವಾಯಿತು. “ಆದರೆ ರಾಜ ಪ್ರತಿ ಊರಿಗೂ ಬಾವಿ ತೋಡಿಸಿದ್ದಾನಂತಲ್ಲ?’ ಎಂದು ಮರುಪ್ರಶ್ನೆ ಮಾಡಿದ. “ತೋಡಿಸಿದ್ದಾರಂತೆ. ಆದರೆ ನಮ್ಮ ಊರು ಅವರ ಗಮನಕ್ಕೆ ಬಂದಿರಬೇಕಲ್ಲ’ ಎಂದರು. ಆ ಮಹಿಳೆಯರನ್ನು ಬೀಳ್ಕೊಟ್ಟ ರಾಜ ನೇರವಾಗಿ ತನ್ನ ಅರಮನೆಯತ್ತ ನಡೆದ. ಕೂಡಲೆ ಮಂತ್ರಿಗಳ ಸಭೆ ಕರೆದ “ನರಸಾಪುರ ಎಂಬ ಊರಿನಲ್ಲಿ ಬಾವಿಯನ್ನು ತೋಡಿಸಲಾಗಿಲ್ಲ. ಅದರ ಉಸ್ತುವಾರಿ ಯಾರ ಸುಪರ್ದಿಗೆ ಬರುತ್ತದೆ?’ ಎಂದು ಕೇಳಿದ. ಖಾತೆ ತೆರೆದು ನೋಡಿದ ಮಹಾಮಂತ್ರಿ, “ನರಸಾಪುರದಲ್ಲಿ ಬಾವಿಯನ್ನು ತೋಡಿಸಲು ಬೊಕ್ಕಸದಿಂದ ಹಣ ಸಂದಾಯವಾಗಿದೆ. ಅದರ ಉಸ್ತುವಾರಿ ಹೊತ್ತಿದ್ದು ಮುನಿಸ್ವಾಮಿ ಎಂಬಾತ’ ಎಂದು ತಿಳಿಸಿದರು. ಕೂಡಲೇ ಮುನಿಸ್ವಾಮಿಯನ್ನು ಕರೆಸಲಾಯಿತು. ಅವನಿಗೆ ತನ್ನ ಮೋಸ ರಾಜನ ಗಮನಕ್ಕೆ ಬಂದಿರುವುದು ತಿಳಿಯಿತು. ಸಿಕ್ಕಿಬೀಳುವುದು ಖಾತರಿ ಎಂದು ಅರಿತ ಮುನಿಸ್ವಾಮಿ “ಕ್ಷಮಿಸಿ ಮಹಾಪ್ರಭು, ನನ್ನಿಂದ ತಪ್ಪಾಗಿದೆ. ಹಣದಾಸೆಗಾಗಿ ಒಂದೆರಡು ಊರುಗಳಲ್ಲಿ ಬಾವಿಗಳನ್ನು ತೋಡಿಸದೆ, ಖರ್ಚು ತೋರಿಸಿದ್ದೆ. ನನ್ನಿಂದ ಮಹಾ ಅಪರಾಧವಾಗಿದೆ. ದಯಟ್ಟು ಮನ್ನಿಸಬೇಕು’ ಎಂದು ಬೇಡಿಕೊಂಡ.
ರಾಜ “ನನ್ನ ಗಮನಕ್ಕೆ ಬಂದಿದ್ದರಿಂದಾಗಿ ನೀನು ನಿನ್ನ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದೀಯಾ. ಇಲ್ಲದಿದ್ದರೆ ಸುಮ್ಮನೇ ಇದ್ದು ಬಿಡುತಿದ್ದಿ. ನಿನ್ನಿಂದಾಗಿ ಮಹಿಳೆಯರು ಪರದಾಡುತ್ತಿದ್ದಾರೆ. ಇದಕ್ಕೆ ಶಿಕ್ಷೆ ಆಗಲೇ ಬೇಕು’ ಎಂದು ಆತನಿಗೆ 6 ತಿಂಗಳ ಕಾಲ ಸೆರೆಮನೆ ಶಿಕ್ಷೆ ವಿಧಿಸಿದ ರಾಜ. ನರಸಾಪುರದಲ್ಲಿ ಬಾವಿ ತೋಡುವ ಜವಾಬ್ದಾರಿಯನ್ನು ಖುದ್ದು ತಾನೇ ವಹಿಸಿಕೊಂಡ. ಬಾವಿಯ ಉದ್ಘಾಟನೆಯನ್ನು ತಾನೇ ಮಾಡಿದ. ಗ್ರಾಮಸ್ಥರೆಲ್ಲರೂ ರಾಜನಿಗೆ ಜೈಕಾರ ಹಾಕಿದರು.
-ಭೋಜರಾಜ ಸೊಪ್ಪಿಮಠ