ಕೋವಿಡ್ ಆಟ ಮತ್ತು ಕಾಟ ಶುರುವಾಗಿ ಆಗಲೇ 5 ತಿಂಗಳು ಕಳೆಯುತ್ತಾ ಬಂತು. ಆದರೆ ಇನ್ನೂ ಎಲ್ಲವೂ ಸರಿಯಾಗಿಲ್ಲ. ಜನ ಆತಂಕ-ಗೊಂದಲ ಮತ್ತು ಅಭದ್ರತೆಯ ಭಾವದೊಂದಿಗೇ ಬದುಕುತ್ತಿದ್ದಾರೆ. ಮನದೊಳಗೆ ಬೇಸರ.ದಿನಗಳು ಉರುಳಿ ಹೋಗುತ್ತಿವೆ. ಹಳೆಯ ದಿನಗಳ ಸೊಗಸು ಯಾವಾಗ ಮತ್ತೆ ವಾಪಸ್ ಬರುತ್ತದೆಯೋ ಯಾರಿಗೂ ಗೊತ್ತಿಲ್ಲ. 2020 ರ ಹೊಸ ವರ್ಷವನ್ನು ಅದೆಷ್ಟು ಆಸೆಯಿಂದ ಬರ ಮಾಡಿಕೊಂಡಿದ್ದೆವು. ಆದರೆ, ಆ ಖುಷಿಯನ್ನೆಲ್ಲಾ ಕೋವಿಡ್ ನಿರ್ದಯವಾಗಿ ಹೊಸಕಿಹಾಕಿಬಿಟ್ಟಿತು.
ಈ ಹಿಂದೆಲ್ಲಾ ಬೆಳಗಾದರೆ ಸಾಕು; ಥತ್, ಗಡಿಬಿಡಿಯ ಜೀವನ ಶುರು ಆಯಿತು ಅನ್ನುತ್ತಾ ಗೊಣಗಾಟ ಆರಂಭಿಸುತ್ತಿದ್ದವಳು ನಾನು. ಆದರೆ ಇಂದು, ಪುನಃ ಆ ಗಡಿಬಿಡಿಯ ಜೀವನ ಅದೆಂದು ಮರಳಿ ಬರುವುದೋ ಎಂದು ಕಾತುರದಿಂದ ಕಾಯುತ್ತಿದ್ದೇನೆ. ಮನೆಯಲ್ಲಿ ಮಕ್ಕಳು ಆನ್‌ಲೈನ್ ಶಿಕ್ಷಣವೆಂದು ಬೆಳಗ್ಗೆ ಎದ್ದು ಕಂಪ್ಯೂಟರ್ ಮುಂದೆ ಕುಳಿತರೂ, ಅವರಲ್ಲಿ ಮೊದಲಿನಂತೆ ಉತ್ಸಾಹವಿಲ್ಲ. ಮಕ್ಕಳು ಹಿಂದಿನಂತೆ ಶಾಲೆಗೆ ಹೋಗಿ ಶಿಕ್ಷಕರೊಂದಿಗೆ ನಗುನಗುತ್ತಾ ಪಾಠ ಕೇಳುವ ದಿನಗಳಿಗಾಗಿ ಕಾದು ಕುಳಿತ್ತಿದ್ದಾರೆ.
ಕೋವಿಡ್ ಕಾರಣಕ್ಕೆ ಸಣ್ಣದೊಂದು ಸಂಭ್ರಮವೂ ಇಲ್ಲದೆ ಯುಗಾದಿ ಮುಗಿಯಿತು. ರಾಮನವಮಿಯೂ ಕಳೆಯಿತು. ಯಾವ ಸಡಗರ ಸಂಭ್ರಮಗಳಿಲ್ಲದೆಯೇ ಶ್ರಾವಣ ಮಾಸದಲ್ಲಿ ಬರುವ ಎಲ್ಲಾ ಹಬ್ಬಗಳು ಆಗಿಹೋದವು. ಇದೀಗ ಭಾದ್ರಪದ ಮಾಸವೂ
ಬಂದಿತು. ಗೌರಿ-ಗಣೇಶ ಹಬ್ಬವನ್ನೂ ಬಂಧು-ಬಳಗದವರಿ ಲ್ಲದೆ ಆಚರಿಸಿದ್ದಾಯಿತು. ಎಲ್ಲರೂ ಮನೆಯೊಳಗೆ ಬಂದಿಯಾಗಿದ್ದಾರೆ. ಹೊಸ ಬಟ್ಟೆಗಳ ತೊಡುಗೆಯಿಲ್ಲ, ಮುತ್ತೈದೆಯರನ್ನು ಕುಂಕುಮಕ್ಕೆ ಕರೆಯುವಂತಿಲ್ಲ. ಸಡಗರವಿಲ್ಲದ ಜೀವನ ಖಾಲಿ ಖಾಲಿಯಾದಂತೆ ಅನಿಸುತ್ತಿದೆ. ಆದರೂ ಕಾಯುವುದರಲ್ಲಿ ಅದೇನೋ ಒಂದು ಬಗೆಯ ಸಂತೋಷವಿದೆ. ನಾವು ಮರೆಯಲಾಗದಂತಹ ಕ್ಷಣಗಳು ಈ ವರ್ಷ ಖಂಡಿತ ಸಿಗಬಹುದೇನೋ ಎಂಬ ನಿರೀಕ್ಷೆಯೊಂದಿಗೇ ದಿನಗಳನ್ನು ಕಳೆಯುತ್ತಿರುವೆ ನಾನು. ನನ್ನಂತೆಯೇ ಯೋಚಿಸುವ ಸಾಕಷ್ಟು ಜನ ನನ್ನ ಸುತ್ತಮುತ್ತ ಇದ್ದಾರೆಂಬ ಅಂದಾಜು ನನ್ನದು.
–ವೇದಾವತಿ ಹೆಚ್.ಎಸ್.