Advertisement

ತಪ್ಪಿಸಿಕೊಂಡಿದ್ದ ಅತ್ಯಾಚಾರ, ಕೊಲೆ ಆರೋಪಿ ಬಂಧನ

03:07 AM Apr 02, 2019 | Team Udayavani |

ಉಡುಪಿ: ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಅತ್ಯಾ ಚಾರ, ಕೊಲೆ ಆರೋಪಿ ಬಾದಾಮಿಯ ಹನುಮಂತಪ್ಪ ಬಸಪ್ಪ ಕಂಬಳಿ(39) ಹಿರಿಯಡಕ ಸಮೀಪದ ಪೆರ್ಣಂಕಿಲ ಲಾಂಜೋಳಿ ಬಸ್‌ ನಿಲ್ದಾಣದ ಬಳಿ ಹಾಡಿಯಲ್ಲಿ ಸೋಮವಾರ ಸಂಜೆ ಸೆರೆ ಸಿಕ್ಕಿದ್ದಾನೆ.
ಆತ ರವಿ ವಾರ ರಾತ್ರಿ ತಪ್ಪಿಸಿಕೊಂಡ ಕೂಡಲೇ ವಿವಿಧೆಡೆ ನಾಕಾಬಂದಿ ನಡೆಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

Advertisement

ಸುತ್ತಮುತ್ತ ಕಾಡು ಪ್ರದೇಶವಾಗಿದ್ದರಿಂದ ರಾತ್ರಿ ಪತ್ತೆ ಹಚ್ಚುವುದು ಸಾಧ್ಯವಾಗಲಿಲ್ಲ. ಸೋಮ ವಾರವೂ ಶೋಧ ಮುಂದುವರೆಸಿದ ಪೊಲೀಸರಿಗೆ ಸ್ಥಳೀಯರು ನೀಡಿದ ಮಾಹಿತಿ ನೆರವಿಗೆ ಬಂತು.

ಜೀಪಿನಿಂದ ಹಾರಿದ್ದ
ರವಿವಾರ ಸಂಜೆ ಉಡುಪಿಯ ನ್ಯಾಯಾಧೀಶರ ಎದುರು ಹಾಜರು ಪಡಿಸಿ ಕಾರಾಗೃಹಕ್ಕೆ ಕರೆದೊಯ್ಯುವ ವೇಳೆ ಜೈಲಿನ ಸಮೀಪ ತಿರುವಿನಲ್ಲಿ ವಾಹನ ನಿಧಾನವಾಗಿ ಚಲಿಸುತ್ತಿದ್ದಾಗ ಹೊರಗೆ ಜಿಗಿದು ಕಾಡು ಸೇರಿಕೊಂಡಿದ್ದ. ಈ ಬಗ್ಗೆ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತನನ್ನು ಜೈಲಿಗೆ ಕಳುಹಿಸುವ ಜವಾಬ್ದಾರಿಯನ್ನು ನಾಲ್ವರು ಪೊಲೀಸರಿಗೆ ವಹಿಸಲಾಗಿತ್ತು. ಆದರೆ ವಾಹನದಲ್ಲಿ ಚಾಲಕ ಸಹಿತ ಮೂವರು ಪೊಲೀಸರು ಮಾತ್ರ ಇದ್ದರು ಎನ್ನಲಾಗಿದೆ.

ಸಾರ್ವಜನಿಕರ ಸಹಕಾರ
ವರ್ವಾಡಿ ನಿವಾಸಿ ಕೃಷ್ಣ ಕುಲಾಲ್‌ ಅವರ ಪತ್ನಿ ಶ್ರೀಲತಾ ಕುಲಾಲ್‌ ಅವರು ಸೋಮವಾರ ಬೆಳಗ್ಗೆ ಆರೋಪಿ ಬಗ್ಗೆ ಮಾಹಿತಿ ನೀಡಿದರು. ಸಂಜೆ ವೇಳೆ ಲಾಂಜೋಳಿ ನಿವಾಸಿ ಪುಷ್ಪಲತಾ ಕೂಡ ಮಾಹಿತಿ ನೀಡಿದರು. ಸಂಜೆ 6.45ರ ವೇಳೆಗೆ ಆರೋಪಿಯನ್ನು ಬಂಧಿಸಲಾಯಿತು.

ರವಿವಾರ ರಾತ್ರಿ ತಪ್ಪಿಸಿಕೊಂಡ ಬಳಿಕ ಕಾಜಾರಗುತ್ತು ಕಲ್ಲಿನಕೋರೆಯಲ್ಲಿ ಒಣಗಲು ಹಾಕಿದ್ದ ನೀಲಿ ಬಣ್ಣದ ಟೀ ಶರ್ಟ್‌ ಧರಿಸಿಕೊಂಡು ಹೋಗಿದ್ದ. ಈ ಬಗ್ಗೆ ಕೃಷ್ಣಪ್ರಸಾದ್‌ ಶೆಟ್ಟಿ, ಯತೀಶ್‌ ಶೆಟ್ಟಿ ಮತ್ತು ಶೈಲೇಶ್‌ ಶೆಟ್ಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಹಕರಿಸಿದ ಸಾರ್ವಜನಿಕರೆಲ್ಲರಿಗೂ ಎಸ್‌ಪಿ ನಿಶಾ ಜೇಮ್ಸ್‌ ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

ಪ್ರತ್ಯೇಕ ತಂಡ ರಚನೆ
ಆರೋಪಿ ಪತ್ತೆಗಾಗಿ ಎಸ್‌ಪಿ ರವಿವಾರವೇ ಪ್ರತ್ಯೇಕ ತಂಡ ರಚಿಸಿದ್ದು, ಓರ್ವ ಎಎಸ್‌ಪಿ, ಇಬ್ಬರು ಡಿವೈಎಸ್‌ಪಿಗಳು, 6 ಮಂದಿ ಇನ್‌ಸ್ಪೆಕ್ಟರ್‌ಗಳು, 13 ಮಂದಿ ಸಬ್‌ ಇನ್‌ಸ್ಪೆಕ್ಟರ್‌ಗಳು ಹಾಗೂ ಸಿಬಂದಿ ಇದ್ದರು.

ಹೊಟೇಲಲ್ಲಿ ಚಾ ಕುಡಿದಿದ್ದ ; ಮನೆಯಿಂದ ಊಟ ಕೇಳಿದ್ದ!
ಆರೋಪಿ ಸೋಮವಾರ ಬೆಳಗ್ಗೆ ಪೆರ್ಣಂಕಿಲದ ಹೊಟೇಲೊಂದರಲ್ಲಿ ಚಾ ಕುಡಿದು ಹೋಗಿದ್ದ. ಪತ್ರಿಕೆಗಳಲ್ಲಿ ಈತನ ಭಾವಚಿತ್ರ ಪ್ರಕಟವಾಗಿದ್ದರಿಂದ ಕೆಲವರಿಗೆ ಆತನ ಬಗ್ಗೆ ಸಂಶಯ ಮೂಡಿ  ಪೊಲೀಸರಿಗೆ ಮಾಹಿತಿ ನೀಡಿದ್ದರು. ಬೆಳಗ್ಗೆ ಚಾ ಕುಡಿದಿದ್ದ ಆರೋಪಿ ಮಧ್ಯಾಹ್ನ ಜನತಾನಗರ ಎಂಬಲ್ಲಿನ ಮನೆಯೊಂದರಲ್ಲಿ ಊಟ ಕೇಳಿದ್ದ. ಮನೆಯವರು ಊಟ ನೀಡಿದ್ದರು. ಬಳಿಕ ಅವರಿಗೂ ಸಂಶಯ ಬಂದು ಊರಿನವರು ಹುಡುಕಾಟಕ್ಕೆ ಮುಂದಾಗಿದ್ದರು ಎಂದು ತಿಳಿದುಬಂದಿದೆ.

ನಾಲ್ವರು ಪೊಲೀಸರ ಅಮಾನತು
ಕರ್ತವ್ಯ ಲೋಪ ಆರೋಪದಲ್ಲಿ ಮಣಿಪಾಲ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಉಮೇಶ್‌, ಚಾಲಕ ಸುರೇಶ್‌, ಸಿಬಂದಿಯಾದ ರೆಹಮತುಲ್ಲಾ ಹಾಗೂ ಚಿನ್ನೇಶ್‌ ಅವರನ್ನು ಅಮಾನತುಗೊಳಿಸಿ ಎಸ್‌ಪಿ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next