ನವದೆಹಲಿ: ಇದು ಕಟ್ಟುಕಥೆಯಲ್ಲ ಯಾಕೆಂದರೆ ಹೀಗೂ ಉಂಟೇ ಅಂತ ಹುಬ್ಬೇರಿಸುತ್ತೀರಿ. ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಕಾಂಪೋಸ್ಟ್ ಅನ್ನು ತುಂಬಿಸಿ ಗೂಡ್ಸ್ ರೈಲಿನಲ್ಲಿ ಕಳುಹಿಸಿದ್ದ ವ್ಯಾಗನ್ 1,400 ಕಿಲೋ ಮೀಟರ್ ದೂರದ ಉತ್ತರಪ್ರದೇಶ ತಲುಪಲು ತೆಗೆದುಕೊಂಡ ಸಮಯ ಬರೋಬ್ಬರಿ ಮೂರುವರೆ ವರ್ಷ!
ಇಂಡಿಯನ್ ಪೋಟಾಶ್ ಲಿಮಿಟೆಡ್ ಕಂಪನಿ 2014ರಲ್ಲಿ ಗೂಡ್ಸ್ ರೈಲಿನಲ್ಲಿ ವ್ಯಾಗನ್(107462)ವೊಂದನ್ನು ಬುಕ್ ಮಾಡಿತ್ತು. ಆಂಧ್ರಪ್ರದೇಶದ ವಿಶಾಖಪಟ್ಟಣಂನ ಬಂದರಿನಿಂದ ಉತ್ತರಪ್ರದೇಶದಲ್ಲಿರುವ ಮೆಸರ್ಸ್ ರಾಮಚಂದ್ರ ಗುಪ್ತಾ ಅವರ ಶಾಪ್ ಗೆ ಕಾಂಪೋಸ್ಟ್ ಕಳುಹಿಸಲು. ಆದರೆ ಎರಡು, ಮೂರು ವರ್ಷ ಕಳೆದರೂ ಪಾರ್ಸೆಲ್ ತುಂಬಿದ್ದ ವ್ಯಾಗನ್ ಮಾತ್ರ ಬಂದು ತಲುಪಿಲ್ಲವಾಗಿತ್ತು.
ತಮಗೆ ಕಾಂಪೋಸ್ಟ್ ಇನ್ನೂ ಬಂದು ತಲುಪಿಲ್ಲ ಎಂದು ರೈಲ್ವೆ ಇಲಾಖೆಗೆ ಹಲವಾರು ಪತ್ರಗಳನ್ನು ಕೂಡಾ ಬರೆದರೂ ಯಾವುದೇ ಪ್ರಯೋಜನವಾಗಿಲ್ಲವಾಗಿತ್ತು. ರೈಲ್ವೆ ಇಲಾಖೆಗೆ ಮೂರುವರೆ ವರ್ಷ ಕಳೆದರೂ ವ್ಯಾಗನ್ ಪತ್ತೆ ಮಾಡಲು ಸಾಧ್ಯವಾಗಿಲ್ಲವಾಗಿತ್ತು.
ಇದೀಗ ಮೂರುವರೆ ವರ್ಷ ಕಳೆದ ನಂತರ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಕಾಂಪೋಸ್ಟ್ ಬಂದು ತಲುಪಿದೆ. ಆದರೆ ಕಾಂಪೋಸ್ಟ್ ಸಂಪೂರ್ಣವಾಗಿ ಹಾಳಾಗಿ ಹೋಗಿದೆ ಎಂದು ವರದಿ ವಿವರಿಸಿದೆ. ಹಾಳಾದ ಕಾಂಪೋಸ್ಟ್ ತೆಗೆದುಕೊಳ್ಳಲು ಶಾಪ್ ಮಾಲೀಕರು ನಿರಾಕರಿಸಿದ್ದಾರೆ.
ಕಾಂಪೋಸ್ಟ್ ತುಂಬಿದ್ದ ವ್ಯಾಗನ್ ಕಳೆದ ಮೂರುವರೆ ವರ್ಷಗಳಿಂದ ದೇಶಾದ್ಯಂತ ಸಂಚರಿಸಿದೆ. ಹಲವಾರು ರೈಲ್ವೆ ನಿಲ್ದಾಣವನ್ನು ಹಾದು ಹೋಗಿದೆ. ಆದರೂ ಕಾಂಪೋಸ್ಟ್ ತುಂಬಿದ್ದ ವ್ಯಾಗನ್ ಅನ್ನು ಪತ್ತೆ ಹಚ್ಚುವಲ್ಲಿ ರೈಲ್ವೆ ಅಧಿಕಾರಿಗಳು ವಿಫಲರಾಗಿದ್ದರು.