ಮಹಾನಗರದ ವಾಹನದಟ್ಟಣೆಗೆ ತತ್ತರಿಸಿ ಹೋಗಿದ್ದ ಜನರಿಗೆ ನಮ್ಮ ಮೆಟ್ರೋ ತುಸು ಸಮಾಧಾನ ಹೇಳುತ್ತಿದೆ. ಅದು ನಗರದ ಸಾರಿಗೆ ವ್ಯವಸ್ಥೆಗೆ ಹೊಸ ಗಾಂಭೀರ್ಯ, ಹೊಸ ಜೋಶ್ ತಂದಿದ್ದು, ಪ್ರತಿದಿನ ಸುಮಾರು ಮೂರು ಲಕ್ಷಕ್ಕೂ ಹೆಚ್ಚಿನ ಪ್ರಯಾಣಿಕರನ್ನು ಅವರ ಗಮ್ಯ ಸ್ಥಾನಗಳಿಗೆ ತಲುಪಿಸುತ್ತಿದೆ. ನಾವೀಗ ಜನ ದಟ್ಟಣೆಯ ಬಸ್ಸುಗಳು, ದುಬಾರಿ ಕ್ಯಾಬ್‌ಗಳು, ಕರೆದ ಕಡೆ ಬರದ ಆಟೋಗಳು ಹಾಗೂ ಖಾಸಗಿ ವಾಹನಗಳಿಂದ ಮುಕ್ತಿ ನೀಡಿ, ಹವಾನಿಯಂತ್ರಿತ ಕೋಚ್‌ಗಳಲ್ಲಿ ಆರಾಮಾಗಿ ಪ್ರಯಾಣ ಬೆಳೆಸಬಹುದು. ಮಾಲಿನ್ಯಮುಕ್ತ ಸೇವೆಯಿಂದ ನಗರದ ಸ್ವಾಸ್ಥ್ಯವನ್ನೂ ಕಾಪಾಡುತ್ತಿದೆ.
ಇಷ್ಟೆಲ್ಲಾ ಅನುಕೂಲಗಳನ್ನು ಮಾಡಿಕೊಟ್ಟಿರುವ ಮೆಟ್ರೋ ನಿರ್ಮಾಣದಿಂದ ಆಗಿರುವ ಹಾನಿ ನಗಣ್ಯವೇನಲ್ಲ. ಮೆಟ್ರೊದ ಮೂಲ ಸೌಲಭ್ಯಗಳು, ಸಣ್ಣ ಪುಟ್ಟ ರಸ್ತೆಗಳ ಮಧ್ಯದಲ್ಲಿರುವ ಎಡರು- ತೊಡರು ನಿಲ್ದಾಣಗಳು, ಭೂಮಿಯ ಮೇಲ್ಭಾಗದ ಹಾಗೂ ಕೆಳಭಾಗದ ಜಿಗ್‌ಜಾಗ್ ರೇಲ್ವೆ ಹಳಿಗಳ ಹಾಗೂ ನೂರಾರು ಪಿಲ್ಲರ್‌ಗಳು ಹಸಿರ ಚಾವಣಿಯನ್ನು ಹೊಸಕಿ ಹಾಕಿ, ನಗರದ ಭೂಮಿಯ ಮೇಲ್ಮೆ„ ರಚನೆಯನ್ನೇ ಅಂದಗಾಣದಂತೆ ಮಾಡಿಬಿಟ್ಟಿವೆ. ಆನೆ ನಡೆದದ್ದೇ ದಾರಿ ಎಂಬಂತೆ ತನ್ನ ಮಾರ್ಗದಲ್ಲಿದ್ದ ಮನೆ, ಅಂಗಡಿ, ಕಚೇರಿ, ಕಟ್ಟಡಗಳು ಹಾಗೂ ಕೋಟ್ಯಂತರ ರುಪಾಯಿ ಮೌಲ್ಯದ ಆಸ್ತಿಗಳನ್ನು ನೆಲಸಮ ಮಾಡಿ ಅವೆಷ್ಟೋ ಜನರ ಕಣ್ಣೀರಿಗೂ ಕಾರಣವಾಗಿದೆ.
ಪ್ರಖ್ಯಾತ ಛಾಯಾಚಿತ್ರ ಪತ್ರಕರ್ತ ಕೆ. ವೆಂಕಟೇಶ್ ಅವರು ಮೆಟ್ರೋ ಯೋಜನೆಯ ಸಾಹಸಗಾಥೆಯನ್ನು, ಕಾಲಾನುಕ್ರಮದಲ್ಲಿ ಈ ನಗರ ರೂಪಾಂತರಗೊಂಡ ಬಗೆ ಹಾಗೂ ಇಲ್ಲಿನ ನಿವಾಸಿಗಳ ಅಗತ್ಯ ಬೆಳವಣಿಗೆಯ ಫಲಶೃತಿಯ ಅತ್ಯುತ್ತಮ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಇಲ್ಲಿ ನಿಬ್ಬೆರಗಾಗಿಸುವ ಚಿತ್ರಗಳಿವೆ. ಬೆಂಗಳೂರಿನ ಮೆಟ್ರೋ ಮನಸ್ಸುಗಳು ಒಮ್ಮೆ ನೋಡಲೇಬೇಕಾದ ಚಿತ್ರಪ್ರದರ್ಶನ ಇದಾಗಿದೆ.
ಯಾವಾಗ?: ಆಗಸ್ಟ್ 21ರಿಂದ 25
ಸಮಯ: ಬೆ.10ರಿಂದ ರಾತ್ರಿ 7
ಎಲ್ಲಿ?: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ
ಜಾಲತಾಣ:www.beyondfocus.in