Advertisement

ಲೇಡೀಸ್‌ ಡಬ್ಬದಿಂದ ಮಿಸ್ಸಾದವಳು!

07:16 PM Jun 18, 2019 | mahesh |

ಜಗತ್ತಿನ ಥ್ರಿಲ್ಲಿಂಗ್‌ ರೈಲುಯಾನಗಳಲ್ಲಿ ಮುಂಬೈನ ಲೋಕಲ್‌ ರೈಲಿನ ಪ್ರಯಾಣವೂ ಒಂದು. ಗಿಜಿಗಿಜಿ, ದಟ್ಟ ಜನಸಂದಣಿ, “ಅಯ್ಯೋ ರಾಮ’ ಅಂತನ್ನಿಸಿದ್ರೂ, ಅದೇನೋ ಭಿನ್ನ ಅನುಭವ ನೀಡುವ ಪ್ರಯಾಣ. ಇತ್ತೀಚಿಗೆ ರೈಲು ನಿಲ್ದಾಣದಲ್ಲಿ ಮಹಿಳೆಯರೆಲ್ಲರೂ ಪ್ರತಿಭಟನೆ ಮಾಡುವ ಮೂಡಿನಲ್ಲಿದ್ದರು. ಯಾಕಪ್ಪಾ ಅಂತ ಅಧಿಕಾರಿಗಳೆಲ್ಲಾ ತಲೆ ಕೆಡಿಸಿಕೊಂಡು ಸ್ಥಳಕ್ಕೆ ಬಂದಮೇಲೆಯೇ ಅವರಿಗೆ ವಿಚಾರ ಗೊತ್ತಾಗಿದ್ದು. ಕಾರಣ ತಿಳಿದಾಗ ಪ್ರತಿಭಟಿಸುವುದಕ್ಕೆ ಇದೂ ಒಂದು ಕಾರಣವೇ ಅಂತ ಅವರಿಗನ್ನಿಸಿದ್ದು ಸುಳ್ಳಲ್ಲ. ಮಹಿಳಾ ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದ್ದು ಒಂದು ಲೋಗೋ. ಮುಂಬೈ ಲೋಕಲ್‌ನ ಮಹಿಳಾ ಬೋಗಿಯ ಮೇಲೆ ಇದ್ದ ಲೋಗೋ ಅದು. ಅದರ ಕುರಿತು ತಿಳಿದುಕೊಳ್ಳುವ ಮುನ್ನ ಒಂದು ವಿಚಾರ ತಿಳಿದುಕೊಳ್ಳಬೇಕು.

Advertisement

ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲೇ ಶುರುವಾಗಿದ್ದ ಈ ರೈಲಿನಲ್ಲಿ, ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ “ಲೇಡಿಸ್‌ ಡಬ್ಬ’ ಶುರುವಾಗಿದ್ದು 1992ರಲ್ಲಿ. ಆ ಬೋಗಿಗೆ ಒಂದು ಲೋಗೋ ಇತ್ತ. ಸೀರೆಯುಟ್ಟು, ಪಲ್ಲುವನ್ನು ತಲೆಗೆ ಸುತ್ತಿಕೊಂಡು, ಹಣೆಗೆ ಚೆಂದದ ಬಿಂದಿಗೆ ಇಟ್ಕೊಂಡ ಮಹಿಳೆಯ ಲೋಗೋ ನೋಡಿದ ಕೂಡಲೇ ಯಾರಿಗೇ ಆದ್ರೂ, “ಓಹ್‌ ಅದು ಲೇಡೀಸ್‌ ಡಬ್ಬ’ ಅಂತ ಗೊತ್ತಾಗೋದು. ಮಹಿಳಾ ಪ್ರಯಾಣಿಕರು ರೈಲಿನ ಜೊತೆಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಂತೆಯೇ ಆ ಲೋಗೋ ಜೊತೆಗೂ ಆತ್ಮೀಯತೆ ಬೆಳೆಸಿಕೊಂಡಿದ್ದರು. ಅಷ್ಟು ವರ್ಷದಿಂದ ಇದ್ದ ಬಾರತೀಯ ನಾರಿಯ ಲೋಗೋವನ್ನು ಬದಲಾಯಿಸಿದ್ದೇ ಮಹಿಳಾ ಪ್ರಯಾಣಿಕರ ಪ್ರತಿಭಟನೆಗೆ ಕಾರಣವಾಗಿತ್ತು. ಹೊಸ ಲೋಗೋ ಸೂಟು ತೊಟ್ಟ ಆಧುನಿಕ ನಾರಿಯನ್ನು ಪ್ರತಿಬಿಂಬಿಸುತ್ತಿತ್ತು.

“ಮಹಿಳೆ ಸ್ವಾವಲಂಬಿಯಾಗಿ, ತನ್ನ ವೇಷಭೂಷಣವನ್ನೂ ಬದಲಿಸಿಕೊಂಡಿದ್ದಾಳೆ ಎನ್ನುವ ಅರ್ಥ ಅದು’ ಎಂದು ರೈಲ್ವೇ ಅಧಿಕಾರಿಗಳು ಸ್ಪಷ್ಟನೆ ಕೊಟ್ಟಮೇಲೆಯೇ ಅವರು ಸಮಾಧಾನಗೊಂಡಿದ್ದು. ಆದರೂ ಇದರಿಂದ ಉದ್ಯೋಗಿ ಮಹಿಳೆಯರೇನೋ ಖುಷ್‌ ಆಗಿದ್ದಾರೆ. ಆದರೆ, ಹಳೇ ತಲೆಮಾರಿನ ಹೆಂಗಸರು ಗರಂ ಆಗಿದ್ದಾರಂತೆ. ಜಾಕೆಟ್‌ ಧರಿಸಿ, ಹಣೆಗೆ ಬಿಂದಿಗೆ ಇಡದೇ ಇರೋ ಚಿತ್ರ ಬಳಸಿದ್ದೇಕೆ?- ಎಂಬ ಆಕ್ಷೇಪ ಅವರದ್ದು.

Advertisement

Udayavani is now on Telegram. Click here to join our channel and stay updated with the latest news.

Next