ಉನ್ನಾವ್: ನಾಪತ್ತೆಯಾದ ಎರಡು ತಿಂಗಳ ನಂತರ, 22 ವರ್ಷದ ದಲಿತ ಮಹಿಳೆಯೊಬ್ಬರ ಶವ ಕೊಳೆತ ರೂಪದಲ್ಲಿ ಪತ್ತೆಯಾದ ಘಟನೆ ಉತ್ತರ ಪ್ರದೇಶದ ಉನ್ನಾವ್ ನಲ್ಲಿ ನಡೆದಿದೆ.
ಮಾಜಿ ಸಚಿವ ಫತೇಹ್ ಬಹದ್ದೂರ್ ಸಿಂಗ್ ನಿರ್ಮಿಸಿದ ಆಶ್ರಮದ ಬಳಿಯ ಖಾಲಿ ಜಾಗದಿಂದ ಆಕೆಯ ಕೊಳೆತ ದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಫತೇ ಬಹದ್ದೂರ್ ಅವರ ಪುತ್ರ ರಾಜೋಲ್ ಸಿಂಗ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಮರಣೋತ್ತರ ಪರೀಕ್ಷೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
“ಆರೋಪಿ ರಾಜೋಲ್ ಸಿಂಗ್ ನನ್ನು ನಾವು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಅದರ ಬಳಿಕ ಎಸ್ ಒಜಿ ತಂಡವು ಮಹಿಳೆಯ ಶವವನ್ನು ಗುರುವಾರ ಪತ್ತೆಹಚ್ಚಿತು. ದೇಹವನ್ನು ಆಶ್ರಮದ ಬಳಿಯ ಜಾಗದಲ್ಲಿ ಸಮಾಧಿ ಮಾಡಲಾಗಿತ್ತು. ಶವವನ್ನು ಸಮಾಧಿ ಮಾಡಿದ ಸ್ಥಳವನ್ನು ಗುರುತಿಸಲು ನಾವು ಸ್ಥಳೀಯ ಗುಪ್ತಚರ ಮತ್ತು ಮೊಬೈಲ್ ಇಂಟಲಿಜೆನ್ಸ್ ಬಳಸಿದ್ದೇವೆ” ಎಂದು ಉನ್ನಾವ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಶೇಖರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಒಡೆದಾಳುವುದು ಮತ್ತು ದೇಶವನ್ನು ಲೂಟಿ ಮಾಡುವುದೇ ಕಾಂಗ್ರೆಸ್ ನೀತಿ: ಪ್ರಧಾನಿ ಮೋದಿ
ಡಿ.8ರಂದು ಯುವತಿಯ ನಾಪತ್ತೆಯಾಗಿದ್ದಳು. ಅದರ ಬೆನ್ನಲ್ಲೇ ಯುವತಿಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ರಾಜೋಲ್ ಸಿಂಗ್ ವಿರುದ್ಧ ಆರೋಪ ಮಾಡಿದ್ದರು. ಪೊಲೀಸರಿಂದ ಯಾವುದೇ ಕ್ರಮ ಬಾರದ ಕಾರಣ ಜ.24ರಂದು ಮಹಿಳೆ ಅಖಿಲೇಶ್ ಯಾದವ್ ಕಾರಿನ ಎದುರು ಸ್ವತಃ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.
ಅದೇ ದಿನ ಪೊಲೀಸರು ರಾಜೋಲ್ ಸಿಂಗ್ ನನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.