Advertisement

ಕಳೆದುಹೋದ ಕಾಲೇಜು ದಿನಗಳು

06:00 AM Sep 07, 2018 | |

ಕಾಲೇಜು ಜೀವನ ಎಂದರೆ ಮರೆಯಲಾಗದ ಸುಂದರ ಬದುಕು. ದ್ವಿತೀಯ ಪಿಯುಸಿ ಮುಗಿದ ಕೂಡಲೇ ಯಾವ ಕಾಲೇಜಿನಲ್ಲಿ ಪದವಿ ಮಾಡುವುದು ಎಂದು ಗೆಳೆಯರ ಜೊತೆ ಹರಟೆಹೊಡೆಯುತ್ತ ಚರ್ಚಿಸಿ ಒಂದೇ ಕಾಲೇಜಿಗೆ ಸೇರಿಕೊಂಡೆವು. ಮೊದಲ ದಿನ ಹೊಸ ಕಾಲೇಜು, ಹೊಸ ಮುಖಗಳು. ಜೊತೆಗೆ ಒಂದಿಬ್ಬರು ಪಿಯುಸಿ ಗೆಳೆಯರು. ಇನ್ನು ಕೆಲವರು ಬೇರೆ ಬೇರೆ ವಿಭಾಗಕ್ಕೆ ಇಬ್ಭಾಗವಾದರು. ಕಾಲೇಜು ಆರಂಭದ ಸಮಯ ಮಳೆಗಾಲವಾದ್ದರಿಂದ ಕಾಲೇಜಿಗೆ ಬರುವಾಗ ಮನಸ್ಸಿಗೆ ಒಂದು ತರಹ ಖುಷಿ. ಕಾಲೇಜು ದಿನಗಳಲ್ಲಿ  ನಮ್ಮ ನೆನಪಿನಲ್ಲಿ ಉಳಿಯುವವರು ಎಂದರೆ, ನಾವು ಇಷ್ಟಪಡುವ ನಮ್ಮ ಬೆಸ್ಟ್‌ ಫ್ರೆಂಡ್ಸ್‌  ಹಾಗೂ ಮರೆಯಲಾಗದಂತಹ ಉಪನ್ಯಾಸಕರು.

Advertisement

ಮೊದ ಮೊದಲು ಹೊಸ ಹೊಸ ಮುಖಗಳಾದರೂ ದಿನಗಳು ಕಳೆದಂತೆ ಎಲ್ಲರೊಂದಿಗೆ ಆತ್ಮೀಯತೆ ಬೆಳೆದು ಗೆಳೆಯರ ಪಟ್ಟಿ ಉದ್ದವಾಗುತ್ತಾ ಹೋಯಿತು. ಕಾಲೇಜಿನಲ್ಲಿ ನಡೆಯುವ ಇಲೆಕ್ಷನ್‌ಗೆ ಕಾಲೇಜು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವನ ಪರಿಚಯ ಇಲ್ಲದಿದ್ದರೂ ಸೀನಿಯರ್‌ಗಳ ಮಾತಿಗೆ ತಲೆಯಾಡಿಸಿ ಓಟು ಹಾಕಿ ಅಧ್ಯಕ್ಷನನ್ನು ಆರಿಸಿಯೂ ಆಯಿತು. ದಿನ ಕಳೆದು ಹೋಗುತ್ತಿದ್ದಂತೆ ಮೊದಲ ಇಂಟರ್‌ನಲ್‌ ಪರೀಕ್ಷೆ ಬಂದೇಬಿಟ್ಟಿತು. ಇಂಟರ್‌ನಲ್‌ ಏನು ಅಂತ ಗೊತ್ತಿರದಿದ್ದರೂ ಹೇಗಾದರೂ ಕಷ್ಟಪಟ್ಟು ಓದಿ ಬರೆದು ಪಾಸಾದಾಗ ತುಂಬಾ ಖುಷಿ!

ಮೊದಲ ವರ್ಷದಲ್ಲಿ ಕಾಲೇಜಿನಲ್ಲಿ ಚಿಕ್ಕ ಮಕ್ಕಳಂತೆ ಎಲ್ಲಿಗೇ ಹೋಗುವುದಾದರೂ ನಾವು ಒಟ್ಟಿಗೇ ಹೋಗುವುದು, ಹುಡುಗಿಯರಲ್ಲಿ ಮಾತನಾಡಲು ನಾಚುವುದು, ಪಕ್ಕದ ತರಗತಿಯ ಹುಡುಗಿಯರನ್ನು ನೋಡುವುದು, ಅವರಿಗೆ ಗೊತ್ತಾಗಿದೆ ಎಂದು ಭಾವಿಸಿ ಸಂತೋಷ ಪಡುವುದು, ಇದರಿಂದ ಮನಸ್ಸಿನ ಹಿಡಿತ ತಪ್ಪುವುದು, ಮೊದಲ ತರಗತಿಗೆ ಬಂಕ್‌ ಮಾಡುವಾಗ ತುಂಬಾ ಭಯವಾಗುವುದು-ಹೀಗೆ ಹೊಸ ಹೊಸ ಅನುಭವಗಳು. ಸೀನಿಯರ್‌ಗಳಿಗೆ ಜಾಸ್ತಿ ಮರ್ಯಾದೆ ಕೊಡುವುದು, ಉಪನ್ಯಾಸಕರ ವ್ಯಕ್ತಿತ್ವವನ್ನು ಗಮನಿಸುವುದು, ಕಮೆಂಟ್‌ ಮಾಡುತ್ತಾ ದಿನಗಳು ಉರುಳಿದಂತೆ ಒಂದು ವರ್ಷ ಮುಗಿದದ್ದು ಗೊತ್ತೆ ಆಗಲಿಲ್ಲ.

ಪರೀಕ್ಷೆ ಮುಗಿದು ರಜೆ ಸಿಕ್ಕಿದ ಹೊತ್ತಿಗೆ ಮನೆಯಲ್ಲಿ ತುಂಬಾ ಬೋರು. ಬೇಸರ ಕಳೆಯಲು ಗೆಳೆಯರಿಗೆ ಫೋನ್‌ ಮಾಡಿ ಮಾತನಾಡುವುದು, ವಾಟ್ಸಾಪ್‌ನಲ್ಲಿ ಚಾಟ್‌ ಮಾಡುವುದು, ಎಲ್ಲರನ್ನು ಮಿಸ್‌ ಮಾಡಿಕೊಂಡು ಯಾವಾಗ ಕಾಲೇಜು ಆರಂಭವಾಗುತ್ತದೆ ಎಂದು ಕಾಯುತ್ತಿರುವಷ್ಟರಲ್ಲಿ  ಮತ್ತೆ ದ್ವಿತೀಯ ವರ್ಷದ ತರಗತಿಗಳ  ಆರಂಭ. ಮೊದಲ ದಿನ ಎಲ್ಲರನ್ನು ನೋಡಿದಾಗ ಸಂತೋಷ. ಗೆಳೆಯರೆಲ್ಲ  ಸೇರಿ ಸುತ್ತಾಡಲು ಹೋಗುವುದು, ತರಗತಿಗೆ ಬಂಕ್‌ ಹೊಡೆದು ಕಾಲೇಜು ಮೈದಾನದಲ್ಲಿ ಕುಳಿತು ಮಾತನಾಡುವುದು, ಸಿನೆಮಾಕ್ಕೆ ಹೋಗುವುದು, ಮನೆಯಲ್ಲಿ ವಿಶೇಷ ತರಗತಿ ಎಂದು ಹೇಳಿ ತಿರುಗಾಡಲು ಹೋಗುವುದು ಒಂಥರಾ ಖುಷಿ. 

ಕಾಲೇಜು ಕಾರಿಡಾರ್‌ನಲ್ಲಿ ನಿಂತು ಹುಡುಗ-ಹುಡುಗಿಯರು ಮಾತನಾಡುವುದೇ ಒಂದು ಸಂತೋಷ. ಕಾಲೇಜು ಗೇಟ್‌ನ ಬಳಿ ಬೈಕ್‌ ನಿಲ್ಲಿಸಿ ಹರಟೆ ಹೊಡೆಯುವುದು, ಕ್ಯಾಂಟೀನಿಗೆ ಹೋಗುವುದು, ಅಲ್ಲಿ ತಿಂಡಿ ತಿನ್ನುತ್ತಾ ಹರಟೆ ಹೊಡೆಯುವುದು, ತರಗತಿಯಲ್ಲಿ ಲೆಕ್ಚರರ್ ನೋಟ್ಸ್‌ ಕೊಡುವಾಗ ಬರೆಯದೇ ಬೇರೆಯವರ ನೋಟ್ಸ್‌ ಕಾಪಿ ಮಾಡುವುದು, ಪರೀಕ್ಷೆಯ ಮೊದಲ ದಿನ ಓದುವುದು, ಫ‌ಲಿತಾಂಶ ಬರುವಾಗ ಆತಂಕಗೊಳ್ಳುವುದು, ಒಳ್ಳೆಯ ಮಾರ್ಕ್ಸ್ ಬಂದಾಗ ಗೆಳೆಯರೊಂದಿಗೆ ಹಂಚಿಕೊಳ್ಳುವುದು, ಇದೆಲ್ಲದರೊಂದಿಗೆ ಇನ್ನೂ ಹೆಚ್ಚು ಸಂತೋಷ ನೀಡುವ ವಿಷಯವೆಂದರೆ, ಕಾಲೇಜಿನಲ್ಲಿ ವಿವಿಧ ಸಂಘಗಳ ಸದಸ್ಯರ ಜೊತೆ ಸೇರಿ ಸಾಂಸ್ಕೃತಿಕ-ಸಾಮಾಜಿಕ ಕೆಲಸವನ್ನು ಮಾಡುವುದು ಮನಸ್ಸಿಗೆ ತುಂಬಾ ಖುಷಿ ನೀಡುತ್ತದೆ. ಹೀಗೆ ದ್ವಿತೀಯ ವರ್ಷದ ಪದವಿಯೂ ಮುಗಿದು ಹೋಗಿ ಕೊನೆಯ ವರ್ಷಕ್ಕೆ ಕಾಲಿಟ್ಟದ್ದೇ ತಿಳಿಯಲಿಲ್ಲ.

Advertisement

ಕೊನೆಯ ವರ್ಷದಲ್ಲಿ ನಮ್ಮ ಭಾವನೆ, ವ್ಯಕ್ತಿತ್ವ, ಸ್ಟೈಲ್‌ ಎಲ್ಲವು ಬದಲಾಗಿರುತ್ತದೆ. ನಮ್ಮದೇ ಹವಾ ಎಂಬ ಭಾವನೆ ಮನಸ್ಸಿಗೂ ಬಂದು, ನಾವೇ ಸೀನಿಯರ್ ಎಂದು ಭಾವಿಸಿ ಕಾಲೇಜಿಗೆ ಲೇಟಾಗಿ ಬರುವುದು, ಹುಡುಗಿಯರೊಂದಿಗೆ ಪ್ರೀತಿಯಿಂದ ಮಾತನಾಡುವುದು, ಉಪನ್ಯಾಸಕರ ಜೊತೆ ಗೆಳೆಯರಂತೆ ಇರುವುದು, ಇಲೆಕ್ಷನ್‌ ಸಮಯದ‌ಲ್ಲಿ ಎಲ್ಲ ತರಗತಿಗೆ ಹೋಗಿ ಪ್ರಚಾರ ಮಾಡುವುದು, ಜೂನಿಯರ್‌ಗಳಿಗೆ ಫೆಸ್ಟ್‌ ಮಾಡುವುದರ ಜೊತೆಗೆ ಪರೀಕ್ಷೆ ಬಂದದ್ದೇ ಗೊತ್ತಾಗದೆ, ಪರೀಕ್ಷೆಯ ದಿನ ಬೆಳಿಗ್ಗೆ ಗೆಳೆಯನಿಗೆ ಫೋನ್‌ ಮಾಡಿ ಯಾವ ಪ್ರಶ್ನೆ ಬರಬಹುದು ಎಂದು ಕೇಳುವುದು, ಪರೀಕ್ಷೆ ನಡೆಯುವ ಮೊದಲು ಎಲ್ಲರೂ ಗುಂಪಾಗಿ ಕೂತು ಪುಸ್ತಕ ಬಿಡಿಸಿಟ್ಟು  ಪಟಪಟನೆ ಓದುವುದು, ಉಪನ್ಯಾಸಕರು ಎಂದರೆ ಭಯವಿದ್ದರೂ ಪರೀಕ್ಷಾ ಕೊಠಡಿಯಲ್ಲಿ ಅವರ ಕಣ್ಣು ತಪ್ಪಿಸಿ ನಕಲು ಮಾಡುವುದು, ಉಪನ್ಯಾಸಕರು ಪಾಠ ಮಾಡುವಾಗಲೂ ಕಮೆಂಟ್‌ ಮಾಡುವುದು, ನಂತರ ತರಗತಿಯಿಂದ ಹೊರಗೆ ಹಾಕುವುದು- ಎಲ್ಲವೂ ಕಾಲೇಜುಜೀವನದ ಸಾಧನೆ ಎಂದು ಭಾಸವಾಗುತ್ತಿತ್ತು.

ಕೊನೆಯ ವರ್ಷದ ಕೊನೆಯ ವಾರ್ಷಿಕೋತ್ಸವ ಎಲ್ಲವೂ ಮುಗಿದು ವಿದಾಯಕೂಟ ಸಮಾರಂಭದ ದಿನ ಪ್ರಾಂಶುಪಾಲರಿಂದ ಹಿಡಿದು ವಾಚ್‌ಮನ್‌ವರೆಗೂ ಫೋಟೊ ತೆಗೆಸಿಕೊಳ್ಳುವುದು, ಇದರ ನಡುವೆ ಕೆಲವರಿಗೆ ಉದ್ಯೋಗದ ಸಿದ್ಧತೆಯಾದರೆ, ಇನ್ನು ಕೆಲವರಿಗೆ ಉನ್ನತ ವ್ಯಾಸಂಗದ ಚಿಂತೆ. ಹೀಗೆ ಕಾಲೇಜು ಜೀವನ ಮುಗಿದುಹೋಗಿ ಹಿಂದಿರುಗಿ ನೋಡಿದಾಗ ಮನಸ್ಸಿನಲ್ಲಿದ್ದ ನೆನಪು, ಸಂತೋಷ ಎಲ್ಲವೂ ಕಣ್ಣೀರಿನ ಮೂಲಕ ಜಾರಿ ಹೋಯಿತು. ಜೀವದಂತೆ ಪ್ರೀತಿಸುತ್ತಿದ್ದ ಗೆಳೆಯರು ದೂರವಾಗುವ ಹೊತ್ತಿಗೆ ನಮ್ಮಲ್ಲಿರುವ ಪ್ರೀತಿ ವ್ಯಕ್ತವಾಗುತ್ತದೆ. ಪ್ರತಿ ಕ್ಷಣ, ಪ್ರತಿ ನಿಮಿಷ ಕಾಲೇಜು ಆವರಣ ಮತ್ತು ಗೆಳೆಯರ ನೆನಪಿಸುತ್ತಾ ಮನಸ್ಸು ಭಾರವಾಗುತ್ತಾ ಕಣ್ಣಂಚಿನಲ್ಲಿ ಮಾಯವಾಗಿಯೇ ಹೋಯಿತು ಕಾಲೇಜು ಜೀವನ.

ಶ್ರೀಕಾಂತ್‌ ಪೂಜಾರಿ ಬಾರಾವು
ತೃತೀಯ ಬಿ. ಕಾಂ. ವಿವೇಕಾನಂದ ಪದವಿ ಕಾಲೇಜು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next