ಉಕ್ರೇನ್‌ನ ಬಂದರು ನಗರ ಮರಿಯುಪೋಲ್‌ನಿಂದ 4 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಪ್ರಯತ್ನ ರವಿವಾರವೂ ವಿಫಲವಾಗಿದೆ.
ರಷ್ಯಾ ನಡೆಸಿದ ಬಿರುಸಿನ ದಾಳಿಯಿಂದಾಗಿ ಹಲವರು ನಾಗರಿಕರು ಅಸುನೀಗಿದ್ದಾರೆ ಎಂದು ಹೇಳಲಾಗಿದೆ. ಮತ್ತೊಂದೆಡೆ ಕೇಂದ್ರ ಉಕ್ರೇನ್‌ನಲ್ಲಿರುವ ವಿನೀಶಿಯಾದಲ್ಲಿರುವ ವಿಮಾನ ನಿಲ್ದಾಣದ ಮೇಲೆ ರಷ್ಯಾ ಸೇನೆ ಎಂಟು ಕ್ಷಿಪಣಿಗಳನ್ನು ಉಡಾಯಿಸಿದ ಪರಿಣಾಮವಾಗಿ ಅದು ಸಂಪೂರ್ಣವಾಗಿ ನಾಶವಾಗಿದೆ.
ಈ ನಡುವೆ ಮರಿಯೂಪೋಲ್‌ನ ರಸ್ತೆಗಳಲ್ಲೆಲ್ಲ ಹೆಣಗಳ ರಾಶಿ ಕಂಡು ಬರುತ್ತಿದೆ. ಆಹಾರ, ಸೇರಿದಂತೆ ಕುಡಿವ ನೀರಿಗೆ ವ್ಯತ್ಯಯ ಉಂಟಾಗಿದೆ.
ವಿಕಿರಣ ಸೋರಿಕೆ ಭೀತಿ: ಖಾರ್ಕಿವ್ ಮೇಲೆ ಮತ್ತೆ ರಷ್ಯಾ ಸೇನೆ ದಾಳಿ ನಡೆಸಿದೆ. ಈ ಬಾರಿ ಅಲ್ಲಿನ ಪ್ರಮುಖ ಭೌತಶಾಸ್ತ್ರ ಅಧ್ಯಯನ ಕೇಂದ್ರದ ಮೇಲೆ ದಾಳಿ ನಡೆಸಲಾಗಿದೆ. ಅಲ್ಲಿ ಅಣ್ವಸ್ತ್ರಕ್ಕೆ ಸಂಬಂಧಿಸಿದ ಪ್ರಯೋಗಗಳೂ ನಡೆಯುತ್ತಿದ್ದವು. ಹೀಗಾಗಿ ಅಲ್ಲಿಂದ ವಿಕಿರಣ ಸೋರಿಕೆ ಉಂಟಾಗುವ ಭೀತಿ ಎದುರಾಗಿದೆ.
ಎರಡು ದಿನಗಳ ಹಿಂದಷ್ಟೇ ಅದು ಚರ್ನೋಬಿಲ್ ಮೇಲೆ ದಾಳಿ ನಡೆಸಿ ಅದನ್ನು ವಶಪಡಿಸಿಕೊಂಡಿತ್ತು. ನೋವಾ ಖಕೋವಾ ಎಂಬ ನಗರದ ಮೇಲೆ ಕೂಡ ರಷ್ಯಾ ಸೇನೆ ದಾಳಿ ನಡೆಸಿ ಗುಂಡು ಹಾರಿಸಿದೆ. ಈ ಸಂದರ್ಭದಲ್ಲಿ ಐವರು ಗಾಯಗೊಂಡಿದ್ದಾರೆ. ಇದರ ಜತೆಗೆ ಉಕ್ರೇನ್‌ನ ನೆರೆಯ ರಾಷ್ಟ್ರ ಮಾಲ್ಡೋವಾದ ಮೇಲೆ ಕೂಡ ರಷ್ಯಾ ದಾಳಿ ನಡೆಸುವ ಭೀತಿ ಎದುರಾಗಿದೆ.