ಖಾನಾಪುರ: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿ ವಲಯದ ಚೋರ್ಲಾ ಅರಣ್ಯ ಪ್ರದೇಶಕ್ಕೆ ಚಾರಣಕ್ಕಾಗಿ ಗೋವಾದಿಂದ ಬಂದಿದ್ದ ಏಳು ವಿದ್ಯಾರ್ಥಿಗಳು ಹಾಗೂ ಒಬ್ಬ ಮಹಿಳೆ ದಾರಿ ತಪ್ಪಿಸಿಕೊಂಡು 26 ಗಂಟೆಗಳ ನಂತರ ಅರಣ್ಯ ಇಲಾಖೆಯ ಪ್ರಯತ್ನದಿಂದ ಸುರಕ್ಷಿತವಾಗಿ ನಾಡಿಗೆ ಮರಳಿದ್ದಾರೆ.
ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಅರಣ್ಯ ಪ್ರವೇಶಿಸಿದ ಈ ಎಂಟು ಮಂದಿ ದಾರಿ ಗೊತ್ತಾಗದೇ ನಾಪತ್ತೆಯಾಗಿದ್ದಾರೆ. ಸುಮಾರು 26 ಗಂಟೆಗಳ ಕಾಲ ಅರಣ್ಯದಲ್ಲೇ ದಿಕ್ಕು ತಪ್ಪಿ ಅಲೆದಾಡಿದ ಇವರನ್ನು ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚಿ ಮರಳಿ ನಾಡಿಗೆ ಕರೆ ತಂದಿದ್ದಾರೆ. ಪಣಜಿಯ ಮೀರಾಮಾರ ಗ್ರಾಮದ ಮೆಲಾನಿ ಮರಿನೊ ಪಿಂಟೋ(32) ಎಂಬ ಮಹಿಳೆಯೊಂದಿಗೆ ಡೆಬ್ರಾ ಗೋನ್ಸಾಲ್ವಿಸ್ (13), ಸನಸಾ ಸಂಪೂಯಾ, (11), ಸಿಯಾರಿಯಾ ಫರ್ನಾಂಡಿಸ್(12), ಪರ್ಲ್ ಫರ್ನಾಂಡಿಸ್ (12), ಸ್ವೇಟ್ಲಾನಾ ಗೋಮಸ್ (12), ಸಾಯನಾ ಡಿಸೋಜಾ (12) ಸಿನಿಯಾ ಡಿಸೋಜಾ (13) ನಾಪತ್ತೆಯಾದವರು.
ಮರುದಿನವಾದರೂ ಮಕ್ಕಳು ಬಾರದೇ ಇದ್ದಾಗ ಸಂಬಂಧಿಕರು ಕರ್ನಾಟಕ ಹಾಗೂ ಗೋವಾ ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಮಂಗಳವಾರ ಬೆಳಗ್ಗೆ ಡಿಎಫ್‌ಒ ಬಸವರಾಜ ಪಾಟೀಲ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ನಾಲ್ಕು ತಂಡ ರಚಿಸಿ ಶೋಧ ಕಾರ್ಯ ನಡೆಸಲಾಯಿತು. ಈ ತಂಡ ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಎಂಟು ಜನರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಎಲ್ಲರೂ ಸುರಕ್ಷಿತವಾಗಿದ್ದು, ಅರಣ್ಯ ಇಲಾಖೆ ಅವರನ್ನು ಗೋವಾ ಪೊಲೀಸರ ವಶಕ್ಕೆ ಒಪ್ಪಿಸಿದೆ. ಕೂಡಲೇ ವೈದ್ಯರನ್ನು ಕರೆಸಿ ಆಂಬ್ಯುಲೆನ್ಸ್‌ನಲ್ಲಿ ಎಂಟೂ ಜನರನ್ನು ಗೋವಾಕ್ಕೆ ಕಳುಹಿಸಲಾಗಿದೆ.
ಕರ್ನಾಟಕ, ಗೋವಾ ರಾಜ್ಯದ ಅರಣ್ಯ ಇಲಾಖೆ, ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು. ಸಿಬ್ಬಂದಿ ಬಸವರಾಜ ಪಾಟೀಲ, ಎಸಿಎಫ್‌ಒ ಸಿ.ಬಿ. ಪಾಟೀಲ, ಸ್ಕ್ವಾಡ್ ಎಸಿಎಫ್‌ಒ, ಗೋವಾ ರಾಜ್ಯದ ನಿವೃತ್ತ ಡಿಎಫ್‌ಒ ಪ್ರಸ್ಸಿಕೋ ಸೇರಿ ಕಣಕುಂಬಿ ವಲಯ ಅರಣ್ಯ ಅಧಿಕಾರಿಗಳು ಹಾಗೂ ಖಾನಾಪುರ, ಬೆಳಗಾವಿ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.
ಚಾರಣಕ್ಕಾಗಿ ಬಂದ ಈ ತಂಡ ಕರ್ನಾಟಕ ಹಾಗೂ ಗೋವಾ ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಅರಣ್ಯ ಪ್ರವೇಶಿಸಿದೆ. ಚಾರಣಕ್ಕೆ ಕರೆದುಕೊಂಡು ಹೋದ ಮಹಿಳೆಗೆ ಅರಣ್ಯದ ಬಗ್ಗೆ ಮಾಹಿತಿ ಇಲ್ಲ. ಅನುಮತಿ ಇಲ್ಲದೇ ಬಂದ ಇವರ ಮೇಲೆ ದೂರು ದಾಖಲಿಸುವಂತೆ ಗೋವಾ ಪೊಲೀಸರಿಗೆ ತಿಳಿಸಲಾಗಿದೆ.
ಬಸವರಾಜ ಪಾಟೀಲ, ಡಿಎಫ್‌ಒ