Advertisement
ಇಂದ್ರಾಳಿ ರೈಲ್ವೇ ನಿಲ್ದಾಣ ಬಳಿಯ ಕೊರಂಗ್ರಪಾಡಿ ಬ್ರಹ್ಮಸ್ಥಾನ ನಾಗಬನದ ಎದುರು ಹಾದುಹೋದ ಹಳಿಯ ಬಳಿ ಕಾಲು ಹಾಗೂ ಸೊಂಟದ ಚಿಕಿತ್ಸೆಗಾಗಿ ಕೃಷ್ಣ ಪ್ರತಿದಿನ ವಾಯು ವಿಹಾರಕ್ಕೆ ತೆರಳುತ್ತಾರೆ. ಶನಿವಾರವೂ ಎಂದಿನಂತೆ ಅವರು ಸಾಗುತ್ತಿದ್ದಾಗ, ಹಳಿಯಲ್ಲಿ ಮೂಡಿದ್ದ ಬಿರುಕು ಕಾಣಿಸಿತು. ಅಷ್ಟರಲ್ಲಿ ಒಂದು ರೈಲು ಹಾದು ಹೋಯಿತು. ಬಳಿಕ ಬಿರುಕು ಮತ್ತಷ್ಟು ಅಗಲವಾಗಿತ್ತು. ಇನ್ನೊಂದು ರೈಲು ಬರಲು ಸ್ವಲ್ಪವೇ ಸಮಯ ಇತ್ತಷ್ಟೆ. ಕೃಷ್ಣ ಪೂಜಾರಿ ತಮ್ಮ ದೈಹಿಕ ತೊಂದರೆಯನ್ನೂ ಗಮನಿಸಲಿಲ್ಲ. ನೋವನ್ನು ತಡೆದುಕೊಂಡು 3 ಕಿ.ಮೀತನಕ ಓಡಿ ರೈಲು ಅಧಿಕಾರಿಗಳಿಗೆ ಮಾಹಿತಿ ತಲುಪಿಸಿದರು.
ಕೃಷ್ಣ ಅವರ ಮಾಹಿತಿ ಆಧರಿಸಿ ರೈಲ್ವೇ ಅಧಿಕಾರಿಗಳು ಕಾರ್ಯೋನ್ಮುಖರಾದರು. ಒಂದು ಪ್ರಯಾಣಿಕ ರೈಲನ್ನು ಇಂದ್ರಾಳಿ ನಿಲ್ದಾಣದಲ್ಲಿ, ಮತ್ತೂಂದು ರೈಲನ್ನು ಪಡುಬಿದ್ರಿ ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಸುಮಾರು 40 ನಿಮಿಷಗಳ ಅಂತರ ದಲ್ಲಿ ಮೂವರು ಎಂಜಿನಿಯರ್ ತಂಡ ಇಲಾಖೆಯ ನಿರ್ವಹಣೆ ರೈಲು ಗಾಡಿಯ ಮೂಲಕ ಕೃಷ್ಣ ಅವರನ್ನು ಕುಳ್ಳಿರಿಸಿಕೊಂಡು ಬಿರುಕು ಬಿಟ್ಟ ಸ್ಥಳಕ್ಕೆ ತಲುಪಿ ತಾತ್ಕಾಲಿಕ ತುರ್ತು ದುರಸ್ತಿ ಪೂರೈಸಿತು. ಅನಂತರ ರೈಲು ಸಂಚಾರಕ್ಕೆ ಹಸಿರು ನಿಶಾನೆ ನೀಡಲಾಯಿತು ಎಂದು ರೈಲ್ವೇ ಎಂಜಿನಿಯರಿಂಗ್ ವಿಭಾಗದ ಮೂಲಗಳು ತಿಳಿಸಿವೆ.
ದಿನಗೂಲಿ ನೌಕರ – ರಿಯಲ್ ಗಾಡ್
ಕೃಷ್ಣ ಅವರು ಮೂರು ತಿಂಗಳಿಂದ ಬಲ ಕಳೆದುಕೊಂಡಿದ್ದ ಕಾಲಿನ ಪುನಶ್ಚೇತನಕ್ಕಾಗಿ ಚಿಕಿತ್ಸೆಯ ಜತೆಗೆ ವಾಕಿಂಗ್ ಮಾಡುತ್ತಿದ್ದಾರೆ. ಕೃಷ್ಣ ಅವರು ಕೊರಂಗ್ರಪಾಡಿ ಜಂಕ್ಷನ್ ಬಳಿಯ ಗೋಬಿ ಮಂಚೂರಿ ಅಂಗಡಿಯೊಂದರಲ್ಲಿ ದಿನಗೂಲಿಯಾಗಿ ದುಡಿಯುತ್ತಿದ್ದಾರೆ. ಪತ್ನಿ ಕುಸುಮಾ, ಇಬ್ಬರು ಪುತ್ರರಿದ್ದಾರೆ.