ಬೆಂಗಳೂರು: ರಾಜ್ಯದಲ್ಲಿ ಭೂಮಿ ಹಾಗೂ ವಸತಿ ಹೊಂದಿಲ್ಲದವರಿಗೆ ಸಮರ್ಪಕವಾಗಿ ಹಕ್ಕುಪತ್ರ ನೀಡುವ ಬಗ್ಗೆ ಉನ್ನತ ಮಟ್ಟದ ಸಮಿತಿ ಸಭೆಯನ್ನು ಸರ್ಕಾರ ಶೀಘ್ರವೇ ನಡೆಸಬೇಕು ಎಂದು ಆಗ್ರಹಿಸಿ ಭೂಮಿ ಹಾಗೂ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಗಾಂಧಿ ಭವನದ ಸಮೀಪವಿರುವ ವಲ್ಲಭನಿಕೇತನದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹ ಗುರುವಾರವೂ ನಡೆಯಿತು.
ತುಂಡು ಭೂಮಿ ಹಾಗೂ ವಸತಿ ಹೊಂದಿಲ್ಲದವರಿಗೆ ಹಕ್ಕುಪತ್ರ ನೀಡುವ ಬಗ್ಗೆ ರಾಜ್ಯ ಸರ್ಕಾರ ನಡೆಸಬೇಕಿದ್ದ ಉನ್ನತ ಮಟ್ಟದ ಸಮಿತಿ ಸಭೆಯನ್ನು ಕರೆಯಲು ಹಿಂದೇಟು ಹಾಕುತ್ತಿದೆ. ಆ ಮೂಲಕ ಗೋಮಾಳ ಸೇರಿದಂತೆ ಸರ್ಕಾರದ ಜಾಗವನ್ನು ಹಿಂಬಾಲಕರಿಗೆ ನೀಡುವ ಶಾಸಕರ ಒತ್ತಡಕ್ಕೆ ಮಣಿಯುತ್ತಿದೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಕೂಗಳತೆ ದೂರದಲ್ಲಿ ಧರಣಿ ನಡೆಸಿದರೂ ಸಿಎಂ ಸಿದ್ದರಾಮಯ್ಯ ಅವರಿಗೆ ಬಡವರ ದನಿ ಕೇಳ್ಳೋದಿಲ್ಲವೇ ಎಂದು ಪ್ರಶ್ನಿಸಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಮಾತನಾಡಿ, ನಿರ್ಗತಿಕರು, ರೈತರು, ಭೂ ರಹಿತರು, ಬಡವರು ಭೂಮಿ ಹಾಗೂ ವಸತಿ ಸಮಸ್ಯೆಗಳನ್ನು ನಿವಾರಿಸಲು ಉನ್ನತ ಮಟ್ಟದ ಸಮಿತಿ ರಚಿಸುವ ಬಗ್ಗೆ ಸಭೆ ನಡೆಸುವುದಾಗಿ ಹೇಳಿದ್ದ ಸರ್ಕಾರ, ಇದೀಗ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೀಗ ಚುನಾವಣೆ ಹತ್ತಿರ ಬಂದಿರುವುದರಿಂದ ರಾಜ್ಯ ಸರ್ಕಾರಕ್ಕೂ ನಡುಕ ಉಂಟಾಗಬಹುದು. ಸಿಎಂ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಕೊಟ್ಟ ಮಾತು ಉಳಿಸಕೊಂಡಿಲ್ಲ. ಸಭೆ ನಡೆಸುವ ಬಗ್ಗೆ ಭರವಸೆ ನೀಡುವ ತನಕ ಜಾಗ ಬಿಟ್ಟು ಕದಲುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೋಮಾಳ, ಕೆರೆ ಮೀಸಲು ಸೇರಿದಂತೆ ಸರ್ಕಾರದ ಜಮೀನಿನಲ್ಲಿ ಹಕ್ಕುಪತ್ರ ನೀಡಲು ಬಡವರು ಸಲ್ಲಿಸಿರುವ 13 ಲಕ್ಷ ಅರ್ಜಿಗಳು ಸರ್ಕಾರಿ ಕಚೇರಿಗಳಲ್ಲಿ ಕೊಳೆಯುತ್ತಾ ಬಿದ್ದಿವೆ. ಅಧಿಕಾರಿಗಳು ಶಾಸಕರ ಕೈಗೊಂಬೆಗಳಾಗಿದ್ದಾರೆ. ಇತ್ತ ರಾಜ್ಯಸರ್ಕಾರಕ್ಕೂ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಮನಸ್ಸಿಲ್ಲ.
-ಸಿರಿಮನೆ ನಾಗರಾಜು, ಹೋರಾಟಗಾರ