Advertisement
ಅದೇನೋ ಹೊಸತನ, ಹೊಸಜನ. ನನ್ನವರೂ ಯಾರೂ ಇಲ್ಲದ ಭಾವ, ಏಕಾಂಗಿಯಾಗಿ ನಾನು ಅಲ್ಲಿಗೆ ಬಂದರೆ ಮನದಲ್ಲಿ ಏನೋ ಭಯ, ಆದರೂ ಕಲಿಯಬೇಕೆಂಬ ಹಂಬಲ ನನ್ನನ್ನು ಅಲ್ಲಿ ಸ್ಥಿರವಾಗಿ ನಿಲ್ಲಿಸಿತ್ತು.
Related Articles
Advertisement
ಇಂಗ್ಲಿಷ್ ಕಲಿಯಲು ಕಷ್ಟಪಡುತ್ತಿದ್ದ ನನಗೆ ಆತ ಹೇಳಿದ್ದು ಇಷ್ಟೇ Don’t Worry ಎಂದು. ಆತ ದಿನಂಪ್ರತಿ ನನ್ನೊಡನೆ ಮಾತನಾಡುತ್ತಿದ್ದ. ನಾನು ಅವನಿಗೆ ಪ್ರೊಫೆಸರ್ ಮತ್ತು ತರಗತಿಯ ಇತರ ಸಹಪಾಠಿಗಳ ಕನ್ನಡದ ಮಾತನ್ನು ಅವನಿಗೆ ಇಂಗ್ಲಿಷ್‌ಗೆ ಅನುವಾದ ಮಾಡಿ ಹೇಳುತ್ತಿದ್ದೆ.
ನನಗೆ ಅರ್ಥಶಾಸ್ತ್ರದ ಬಗ್ಗೆ ಅನೇಕ ವಿಷಯ ಕಲಿಸಿದ. ಅವರ ಭಾಷೆ, ಆಚಾರ, ಆಹಾರದ ಬಗ್ಗೆ ತಿಳಿಸಿದ. ಅವನ ಮಾತೃಭಾಷೆ “ಸ್ವಹಿಲಿ’ಯ ಕೆಲವು ಪದಗಳನ್ನು ಹೇಳಿಕೊಟ್ಟ. ನಾನು ಅವನಿಗೆ ಕನ್ನಡದ ಕೆಲವು ಪದಗಳು ಹೇಳಿಕೊಟ್ಟಿದ್ದೆ. ಆತನ ಸ್ನೇಹ ಹೃದಯಕ್ಕೆ ಬಹಳ ಹತ್ತಿರವಾಗ ತೊಡಗಿತ್ತು. ನಾವಿಬ್ಬರು ಸಿಟಿ ಸೆಂಟರ್, ಮಾಲ್, ಬೀಚ್, ದೇವಾಲಯಗಳನ್ನು ಸುತ್ತಿದೆವು.
ಮತ್ತೂಂದು ಅಚ್ಚರಿಯ ಸಂಗತಿಯೆಂದರೆ ಆತನ ವಯಸ್ಸು 32. ಮದುವೆಯಾಗಿ ಒಂದು ಮಗುವಿನ ತಂದೆ ಆತ, ಮೂರು ವಾರದ ಮಗುವನ್ನು ಬಿಟ್ಟು ಕಲಿಕೆಯ ಉದ್ದೇಶದಿಂದ ಭಾರತಕ್ಕೆ ಬಂದಿದ್ದ. ಆತನ ಹಂಬಲ, ಶಿಕ್ಷಣ ಪಡೆಯುವ ತವಕ ನಮ್ಮ ತರಗತಿಯ ಎಲ್ಲರಿಗೂ ಸ್ಫೂರ್ತಿದಾಯಕ ವಿಷಯವಾಗಿತ್ತು. ದೇಶ-ಭಾಷೆ ಬೇರೆಯಾದರೂ ಆತನ ಮುಗ್ಧತೆ, ಒಳ್ಳೆಯ ಮನಸ್ಸು, ಸಮಾನತೆಯ ಭಾವ ಅವನಿಗಿಂತ 10 ವರ್ಷ ಚಿಕ್ಕವಯಸ್ಸಿನ ನನ್ನನ್ನು ಆತನ ಸ್ನೇಹಿತನಾಗುವಂತೆ ಮಾಡಿತ್ತು.
ಈಗ ನಮ್ಮ ಎರಡು ವರ್ಷದ ಸ್ನಾತಕೋತ್ತರ ತರಗತಿ ಈ ತಿಂಗಳಲ್ಲಿ ಮುಗಿಯುತ್ತಿದೆ. ಆತ ಆತನ ದೇಶಕ್ಕೆ ತೆರಳುತ್ತಿದ್ದಾನೆ. ನಾನು ನನ್ನೂರಿಗೆ ಪ್ರಯಾಣ ಬೆಳೆಸಬೇಕಾಗಿದೆ. ಮುಂದೆ ನಾನು-ಅವನು ಭೇಟಿಯಾಗಲು ಅದೆಷ್ಟು ಸಮಯ ಕಾಯಬೇಕಾಗಿದೆಯೋ ಗೊತ್ತಿಲ್ಲ. ಅವನನ್ನು ಮಿಸ್ ಮಾಡಿಕೋಳ್ಳುತ್ತಿದ್ದೇನೆ. ಹೃದಯ ಭಾರವಾಗುತ್ತಿದೆ. ಸಾವಿರಾರು ಕಿಲೋಮೀಟರ್ ಅಂತರದಲ್ಲಿ ನನ್ನ ಅವನ ಜೀವನ. ಭಾವಪೂರ್ಣ ವಿದಾಯದೊಂದಿಗೆ ಆತನನ್ನು ಬೀಳ್ಕೊಡಬೇಕಾಗಿದೆ. ಆತನ ಸ್ನೇಹ ನೆನಪು ಸದಾ ನನ್ನ ಹೃದಯದಲ್ಲಿದೆ.
ತಿಮ್ಮಯ್ಯ ಮೋನಿ, ಅರ್ಥಶಾಸ್ತ್ರ- ದ್ವಿತೀಯ ಎಂ. ಎ. ಮಂಗಳೂರು ವಿ. ವಿ.