Advertisement

ಮಿಸ್‌ ಯು ಮುನಿಯಪ್ಪ…      

02:25 PM May 26, 2018 | |

ಮಾರ್ಕೆಟ್‌ ಎಂದರೆ ಅದೊಂದು ಗದ್ದಲ ಗಲಾಟೆಯಿಂದ ಗಿಜಿಗುಡುವ ಸ್ಥಳ. ಥರಹೇವಾರಿ ವಸ್ತುಗಳನ್ನು ಮಾರುವ ಸ್ಥಳ. ಅದರಲ್ಲೂ ಗಾಂಧಿಬಜಾರು ಎಂದರೆ ಕೇಳಬೇಕೆ? ಮನಸ್ಸು ಗಾಂಧಿಬಜಾರು ಎಂದು ಕವಿ ನಿಸಾರರು ಸುಮ್ಮನೆ ಹೇಳಿದ್ದಲ್ಲ! ಮನಸ್ಸು ಹೇಗೆ ಒಂದು ಕ್ಷಣವೂ ಸುಮ್ಮನಿರದೆ ನಾನಾ ಯೋಚನೆ, ಲೆಕ್ಕಾಚಾರಗಳನ್ನು ಮಾಡುತ್ತಾ ಬಿಝಿಯಾಗಿರುತ್ತದೆಯೋ, ಅದೇ ರೀತಿ ನಮ್ಮ ಗಾಂಧಿಬಜಾರು.

Advertisement

ಅಡುಗೆ ಮನೆಯ ಪರಿಕರಗಳಿಂದ ಹಿಡಿದು ಅತ್ಯಾಧುನಿಕ ಗ್ಯಾಜೆಟ್‌ವರೆಗೆ ಇಲ್ಲಿ ಸಿಗದ ವಸ್ತುಗಳಿಲ್ಲ ಎನ್ನುವುದು ಹಲವರ ನಂಬಿಕೆ. ಹಳೇ ಜಮಾನಾದ, ಎಂದೋ ಮುಚ್ಚಿ ಹೋಗಿರುವ ಕಂಪನಿಗಳ ವಸ್ತುಗಳ ಸ್ಪೇರ್‌ ಪಾರ್ಟುಗಳು ಕೂಡಾ ಇಲ್ಲಿ ಹುಡುಕಿದರೆ ಸಿಗುತ್ತವೆ ಎನ್ನುವುದು ಅನುಭವಸ್ಥರ ಮಾತು. ಹೀಗಾಗಿ ಹಳೇ ಕಾಲದ ಬೆಂಗಳೂರಿಗೆ ಇರುವ ನಂಟು ಗಾಂಧಿಬಜಾರು ಎನ್ನಬಹುದು.

ಇಲ್ಲಿ ಪ್ರತಿ ಹೆಜ್ಜೆಗೂ ಯಾವ ಅಂಗಡಿ ಮುಂಗಟ್ಟುಗಳಿವೆ, ಯಾವ ತಿರುವಿನಲ್ಲಿ ಬಟ್ಟೆ ಅಂಗಡಿ ಇದೆ, ಎಲ್ಲಿ ಪಾನಿಪುರಿ ಚೆನ್ನಾಗಿ ಸಿಗುತ್ತೆ ಮುಂತಾದ ಪಾಯಿಂಟ್‌ ಟು ಪಾಯಿಂಟ್‌ ವಿವರಗಳನ್ನು ತಿಳಿದಿರುವವರಲ್ಲಿ ಲೇಖಕರೂ ಒಬ್ಬರು. 65 ವರ್ಷಗಳಿಂದ ಗಾಂಧಿ ಬಜಾರಿನಲ್ಲಿ ಹಂಡೆ, ಸ್ಟವ್‌, ಕಾಫಿ ಫಿಲ್ಟರ್‌, ಬಾಯ್ಲರ್‌, ಚಕ್ಕುಲಿ ಒರಳು, ಕುಕ್ಕರ್‌, ಇಡ್ಲಿ ಸ್ಟ್ಯಾಂಡ್‌ ಹೀಗೆ ರಿಪೇರಿಗೆ ಬಂದ ಅದೆಂಥದ್ದೇ ವಸ್ತುಗಳನ್ನು ರಿಪೇರಿ ಮಾಡುತ್ತಿದ್ದ ಮುನಿಯಪ್ಪನವರನ್ನು ಲೇಖಕರು ಇಲ್ಲಿ ನೆನಪಿಸಿಕೊಂಡಿದ್ದಾರೆ…

ದಕ್ಷಿಣ ಬೆಂಗಳೂರೆಂದರೆ ಥಟ್ಟನೆ ಅಲ್ಲಿನ ಪ್ರತಿಷ್ಠಿತ‌ ಬಡಾವಣೆ ಬಸವನಗುಡಿ ನೆನಪಾಗುತ್ತದೆ. ಅದರಲ್ಲೂ ಡಿ.ವಿ.ಜಿ. ರಸ್ತೆ, ಗಾಂಧಿಬಜಾರು, ನರಸಿಂಹರಾಜ ಕಾಲೋನಿ, ಹನುಮಂತನಗರ ಕಣ್ಣಿಗೆ ಕಟ್ಟದಿರಲು ಸಾಧ್ಯವೇ ಇಲ್ಲವೆನ್ನಿ. ಶ್ರೀಸಾಮಾನ್ಯರ ಶಾಪಿಂಗ್‌ ಏರಿಯಾ ಎಂದೇ ಹೆಸರುವಾಸಿಯಾದ ಗಾಂಧಿಬಜಾರಿನ ಚಿತ್ರಣವನ್ನು ಕವಿ ನಿಸಾರರು ತಮ್ಮ ಕಾವ್ಯದಲ್ಲಿ ಸೊಗಸಾಗಿ ಬಿಂಬಿಸಿದ್ದಾರೆ.

ಎಂಥವರನ್ನಾದರೂ ಸೂಜಿಗಲ್ಲಿನಂತೆ ಸೆಳೆಯುವ ಮಾಂತ್ರಿಕ ಶಕ್ತಿ ಈ ಬಜಾರಿಗಿದೆ. ವಿದ್ಯಾರ್ಥಿ ಭವನ ಹೋಟೆಲ್‌. ಹಣ್ಣು, ತರಕಾರಿ, ಹೂವು ಮುಂಗಟ್ಟುಗಳು, ಜವಳಿ, ಪಾತ್ರೆ ಪಡಗ, ವಿದ್ಯುತ್‌ ಪರಿಕರಗಳು, ಲಟ್ಟಣಿಗೆ, ದೋಸೆ ಕಲ್ಲು, ವಿವಿಧ ಮಣೆಗಳು, ಪೂಜಾ ಸಾಮಗ್ರಿಗಳು… ಒಟ್ಟಾರೆ ಇಂಥದ್ದು ದೊರಕದು ಎನ್ನುವಂತಿಲ್ಲ. ದಾರದಿಂದ ಧೂಪದವರೆಗೆ ಎಲ್ಲವೂ ಕೆಲವೇ ಹೆಜ್ಜೆಗಳ ಆಸುಪಾಸಿನೊಳಗೆ ಲಭ್ಯ.

Advertisement

ಗಾಂಧಿಬಜಾರಿನ ಮುಖ್ಯರಸ್ತೆಯಲ್ಲಿ ಕಳೆದೊಂದು ವರ್ಷದಿಂದೀಚೆಗೆ ಮಂದಿ ಒಂದನ್ನಂತೂ ವಿಪರೀತ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. ಅದುವೇ ಮುನಿಯಪ್ಪನೆಂಬ ವ್ಯಕ್ತಿಯ ಬೆಸುಗೆ ಕೌಶಲ. ಮುನಿ ಎಂದೇ ಪರಿಚಿತರಾಗಿದ್ದ ಅವರು ಅಕ್ಷರಷಃ ಬೆಸುಗೆ ಯೋಗಿ ಆಗಿದ್ದರು. ಬಸ್‌ ನಿಲ್ದಾಣದ ಮಗ್ಗುಲಲ್ಲಿ ಪಾದಚಾರಿ ರಸ್ತೆಗಂಟಿಕೊಂಡಂತೆ ಒಂದು ದೊಡ್ಡ ರಂಗುರಂಗಿನ ಕೊಡೆ.

ಆ ಆಶ್ರಯವೇ ಅವರಿಗೆ ಸಾಕಾಗಿತ್ತು ತಮ್ಮ ಅನನ್ಯ ಪವಾಡ ಮೆರೆಯಲು. ಎಂಬತ್ತು ವಸಂತಗಳು ದಾಟಿದ್ದರೂ ಮುನಿಯಪ್ಪ ಹಂಡೆ, ಸ್ಟವ್‌, ಕಾಫಿ ಫಿಲ್ಟರ್‌, ಬಾಯ್ಲರ್‌, ಚಕ್ಕುಲಿ ಒರಳು, ಕುಕ್ಕರ್‌, ಇಡ್ಲಿ ಸ್ಟ್ಯಾಂಡ್‌ ಹೀಗೆ ಎಲ್ಲದರ ರಿಪೇರಿ ಮುಂದುವರಿಸಿಯೇ ಇದ್ದರು. ನನ್ನದು 65 ವರ್ಷಗಳ ಸರ್ವೀಸು ಸಾರ್‌ ಎಂದು ಹೆಮ್ಮೆಯಿಂದ ಸಾರುತ್ತಲೇ ಕೊಡ, ಕೊಳಗಕ್ಕೆ ಅಡಿ ಕಟ್ಟುತ್ತಿದ್ದರು ಆತ. ಹಿಡಿ ಅಳಕಗೊಂಡ ಟಿಫ‌ನ್‌ ಕ್ಯಾರಿಯರ್‌, ನೀರಿನ ಜಗ್‌ ಹೊಸ ರೂಪ ಪಡೆದುಕೊಂಡು ಜಗಜಗಿಸುತ್ತಿದ್ದವು.

ವಿಶೇಷವೆಂದರೆ ಮುನಿಯಪ್ಪನವರು ತಮ್ಮ ಇಡೀ ಬೆಸುಗೆ ಬದುಕನ್ನು ಅದೇ ಸ್ಥಳದಲ್ಲೇ ಕಟ್ಟಿಕೊಂಡಿದ್ದು. ಮೂಲತಃ ಅವರದು ಕಲಾಯದ ಕಸುಬು. ಕಸುಬನ್ನು ಕ್ರಮೇಣ ಸ್ತರಿಸಿಕೊಂಡಿದ್ದು ಯಶೋಗಾಥೆ. ಬಹಳ ವರ್ಷಗಳವರೆಗೆ ಅವರು ಅಲ್ಲೇ ಯಾವುದೋ ಕಾರಣಕ್ಕೆ ಬಂದ್‌ ಆಗಿದ್ದ ಒಂದು ಮಳಿಗೆಯ ಮೆಟ್ಟಿಲಿನ ಮೇಲೆ ಕಾರ್ಯಮಗ್ನರಾಗಿರುತ್ತಿದ್ದರು. ಆ ಮಳಿಗೆ ಮರು ತೆರೆದ ನಂತರ ಬಣ್ಣದ ಕೊಡೆಯಡಿಗೆ ಬಂದರು.

ಇದು ಹೇಗೋ ಇರಲಿ. ಮುನಿಯಪ್ಪನವರದು ಗುಣಮಟ್ಟದ ದುರಸ್ತಿ ಕೈಂಕರ್ಯ. ದೂರದ ಬಡಾವಣೆಗಳಿಂದ ಮಾತ್ರವಲ್ಲ, ಹೊರ ಊರುಗಳಿಂದಲೂ ಜನ ಸೀಮೆಣ್ಣೆ ಪಂಪ್‌ ಅಥವಾ ಬತ್ತಿ ಸ್ಟವ್‌, ಮ್ಯಾನ್ಯುವಲ್‌ ಕಾಫಿಪುಡಿ ಯಂತ್ರ ವಗೈರೆ ವಸ್ತುಗಳನ್ನು ರಿಪೇರಿಗೆ ತರುತ್ತಿದ್ದರು. ಎಂಥ ಸಂಕೀರ್ಣ ದುರಸ್ತಿಗೂ ಮುನಿಯಪ್ಪನವರ ಮೋಡಿಯ ಕೈ ಚಳಕ ಸೈ ಎನ್ನುತ್ತಿತ್ತು. “ಮುನಿ ಅಂಕಲ್‌ಗೆ ಕೊಡಿ ನಿಮಿಷಕ್ಕೆ ಸರಿಯಾಗುತ್ತೆ’ ಎನ್ನುವುದು ಗೃಹಿಣಿಯರ ಉಭಯಕುಶಲೋಪರಿಯ ಭಾಗವೇ ಆಗಿತ್ತು.

ಒಮ್ಮೆ ಒಂದು ಹಿತ್ತಾಳೆ ಪಾತ್ರೆಯೊಳಗೆ ಸರಿಸುಮಾರು ಅಷ್ಟೇ ಗಾತ್ರದ ಪಾತ್ರೆ ಹೊಕ್ಕಿತ್ತಂತೆ. ಇವುಗಳ ಪರಸ್ಪರ ಅಗಲಿಕೆ ಅಸಾಧ್ಯವೆಂದೇ ಭಾವಿಸಿ ಮನೆಯವರು ಅದನ್ನು ಅಟ್ಟದ ಮೇಲೆ ಒಗೆದಿದ್ದರಂತೆ. ಮುನಿಯ ಕೈ ಗುಣಕ್ಕೆ ಬಗ್ಗೀತೆಂಬ ವಿಶ್ವಾಸದಿಂದ ಅವರು ಜೋಡಿ ಪಾತ್ರೆ ತಂದಿದ್ದರು. ಮುನಿಯಪ್ಪನವರ ಸುತ್ತಿಗೆಯ ನಾಲ್ಕೇ ಏಟಿಗೆ ಪಾತ್ರೆಗಳು ಪ್ರತ್ಯೇಕಗೊಂಡಿದ್ದವು! ಅವರು ತಮ್ಮ ಸುತ್ತ ರಿಪೇರಿಗೆ ಬಂದ ಪರಿಕರಗಳನ್ನು ಹರಡಿ ಮೋಟು ಸ್ಟೂಲಿನ ಮೇಲೆ ಕೂತ ದೃಶ್ಯ ಇದು ಪ್ರಾಚ್ಯ ವಸ್ತುಗಳ ಪ್ರದರ್ಶನವೇ ಎನ್ನಿಸುತ್ತಿತ್ತು!

ಈಗ ಆ ಬಸ್‌ ನಿಲ್ದಾಣದ ಮಗ್ಗುಲಿನಲ್ಲಿ ನೀರವ ಮೌನ ಮನೆ ಮಾಡಿದೆ. ನಿತ್ಯ ಒಮ್ಮೆ ಗಾಂಧಿಬಜಾರಿನಲ್ಲಿ ಅಡ್ಡಾಡದಿದ್ದರೆ ದಿನ ಕಳೆದಂತಾಗದು ಎನ್ನುತ್ತಿದ್ದವರೆಲ್ಲ ಬೇರೆ ಹಾದಿ ಹಿಡಿಯುತ್ತಾರೆ ಇಲ್ಲವೇ ನಡಿಗೆಯ ವೇಗ ಹೆಚ್ಚಿಸಿಕೊಳ್ಳುತ್ತಾರೆ. ಮುನಿಯಪ್ಪನವರಿಲ್ಲದ ಗಾಂಧಿಬಜಾರಿಗೆ ಹೊಂದಿಕೊಳ್ಳಲೇಬೇಕಲ್ಲ ಎನ್ನುವ ಅನಿವಾರ್ಯ ಅಸಹಾಯಕತೆಯೂ ಆ ಮರುಗಿನಲ್ಲಿದೆ. ಅಡುಗೆಮನೆಯೊಂದಿಗೆ ಅವಿನಾಭಾವ ನಂಟು ಹೊಂದಿದ್ದ ಮತ್ತೂಬ್ಬ “ರಿವೆಟ್‌ ಋಷಿ’ ಅವತರಿಸಬೇಕಿದೆ.

* ಬಿಂಡಿಗನಲೆ ಭಗವಾನ್‌

Advertisement

Udayavani is now on Telegram. Click here to join our channel and stay updated with the latest news.

Next