Advertisement

‘ಮಿಸ್ ಮಂಗಳೂರು’ಕಿರೀಟ ಮುಡಿಗೇರಿಸಿದ ಕಾಫಿನಾಡಿನ ಪ್ರತಿಭೆ ಸುಷ್ಮಾ ಎಸ್. ಶೆಟ್ಟಿ

10:29 AM Jan 17, 2023 | Team Udayavani |

ಕೊಟ್ಟಿಗೆಹಾರ: ಕಾಫಿನಾಡಿನ ದಿಟ್ಟ ಪ್ರತಿಭೆ ಸುಷ್ಮಾ ಎಸ್. ಶೆಟ್ಟಿ ‘ಮಿಸ್ ಮಂಗಳೂರು’ ಕಿರೀಟ ಮುಡಿಗೇರಿಸುವ ಮೂಲಕ ಪ್ರತಿಭಾವಂತೆಯಾಗಿ ಹೊರ ಹೊಮ್ಮಿದ್ದಾರೆ.

Advertisement

ಮೂಡಿಗೆರೆಯ ಸಂತ ಮಾರ್ಥಾಸ್ ಶಾಲೆಯಲ್ಲಿ ಪ್ರೌಢಶಾಲೆ ವ್ಯಾಸಂಗ ಮುಗಿಸಿದ ವಿದ್ಯಾರ್ಥಿನಿ ಸುಷ್ಮಾ ಹಲವು ಕನಸುಗಳನ್ನು ಕಂಡಾಕೆ. ಪಿಯುಸಿ ವ್ಯಾಸಂಗವನ್ನು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿನಲ್ಲಿ ಮುಗಿಸಿದ್ದಾರೆ. ಇವರಿಗೆ ವಿದ್ಯಾಭ್ಯಾಸದೊಂದಿಗೆ ನೃತ್ಯ, ಭರತನಾಟ್ಯ, ಮಾಡೆಲಿಂಗ್, ಆಂಕರಿಂಗ್, ಭಾಷಣ ಕಲೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದಾರೆ. ಅದರೊಂದಿಗೆ ಕೆಡೆಟ್ ಎನ್.ಸಿ.ಸಿ. ಏರ್ ವಿಂಗ್ ನಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು. ಶಾಲಾ ಹಂತದಲ್ಲಿ ನೃತ್ಯ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳನ್ನು ಪಡೆದು ಸಾಧನೆ ಮಾಡಿದ್ದಾರೆ.  ಕಲಿಕೆಯಲ್ಲೂ ಮುಂದಿದ್ದ ಸುಷ್ಮಾ ಹಲವು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡ ಪ್ರತಿಭೆ.

ಸಂತ ಆಗ್ನೇಸ್ ಕಾಲೇಜಿನಲ್ಲಿ ಬಿಬಿಎ ಮುಗಿಸಿದರು. ಶ್ರೀದೇವಿ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಿಜಿ ಕೆಂಜಾರು ಕಾಲೇಜಿನಲ್ಲಿ ಎಂಬಿಎ ಪದವಿ ಮುಗಿಸಿದ ಇವರಿಗೆ ಏನಾದರೂ ಜೀವನದಲ್ಲಿ ಸಾಧಿಸಬೇಕೆಂಬ ಛಲ ಮನೆ ಮಾಡಿತ್ತು.

ಇವರ ತಂದೆ ಬಿ.ಸುರೇಶ್ ಶೆಟ್ಟಿ ಬಣಕಲ್ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷ ಹಾಗೂ ಉತ್ತಮ ಚತುರತೆಯ ವಾಗ್ಮಿ. ಅವರ ತಾಯಿ ಸೌಮ್ಯ ಎಸ್.ಶೆಟ್ಟಿ  ಗೃಹಿಣಿಯಾಗಿದ್ದು ಜೆಸಿರೇಟ್ ಸದಸ್ಯರೂ ಆಗಿದ್ದು, ಈ ದಂಪತಿಗಳ  ಸಹಕಾರ ಪುತ್ರಿಯ ಸಾಧನೆಗೆ ಕೈಗನ್ನಡಿಯಾಯಿತು.

ಮಂಗಳೂರಿನ ಶ್ರೀದೇವಿ ಕಾಲೇಜಿನಲ್ಲಿ ಹೆವೆನ್ ರೋಜ್ ಆಂಡ್ ಸಿಜ್ಲಿಂಗ್ ಗೈಸ್ ಪ್ರಾಯೋಜಕತ್ವದಲ್ಲಿ ಏರ್ಪಡಿಸಿದ್ದ ಮಿಸ್ ಸ್ಪರ್ದೆಯಲ್ಲಿ ನೂರು ಸ್ಪರ್ಧಾಳುಗಳು ಭಾಗವಹಿಸಿದ್ದರು. ಅದರಲ್ಲಿ ಅಂತಿಮ ಆಯ್ಕೆ ಸುತ್ತಿಗೆ 36 ಸ್ಪರ್ಧಿಗಳು ಆಯ್ಕೆಯಾದರು. ಅದರಲ್ಲಿ ಕೊನೆಯ ಸುತ್ತಿನ 10 ಮಂದಿಯಲ್ಲಿ ಸುಷ್ಮಾ ಆಯ್ಕೆಯಾಗಿ ‘ಮಿಸ್ ಮಂಗಳೂರು’ ಪಟ್ಟವನ್ನು ಅಲಂಕರಿಸಿಕೊಂಡರು.

Advertisement

ಕಾಫಿನಾಡಿನ ಈ ಪ್ರತಿಭೆಗೆ ಮಿಸ್ ಮಂಗಳೂರು ಪಟ್ಟ ಒಲಿದು ಬಂದಿರುವುದು ನಾಡಿಗೆ ಹೆಮ್ಮೆಯ ಪ್ರತೀಕವಾಗಿದೆ. ಹಲವು ಕನಸು ಕಂಡಿರುವ ಸುಷ್ಮಾಗೆ ಇನ್ನಷ್ಟು ಸಾಧನೆ ಮಾಡುವ ಅವಕಾಶ ಸಿಗಲಿ ಎಂಬುದು ಅಭಿಮಾನಿಗಳ ಹಾರೈಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next