ಹೊಸದಿಲ್ಲಿ : ಎರಡು ಇಂಡಿಗೋ ವಿಮಾನಗಳು ಭಾರತ-ಬಾಂಗ್ಲಾ ಗಡಿಯಲ್ಲಿನ ವಾಯು ಪ್ರದೇಶದಲ್ಲಿ ಪರಸ್ಪರ ಢಿಕ್ಕಿ ಯಾಗುವುದು ಸ್ವಲ್ಪದರಲ್ಲೇ ತಪ್ಪಿದೆಯಲ್ಲದೆ ಆಗಸದಲ್ಲಿನ ಸಂಭವನೀಯ ಮಹಾ ದುರಂತವೊಂದು ಅದೃಷ್ಟವಶಾತ್ ನೀಗೀತೆಂದು ಭಾರತೀಯ ವಾಯು ಪ್ರಾಧಕಾರದ ಅಧಿಕಾರಿಗಳು ಇಂದು ಗುರುವಾರ ತಿಳಿಸಿದ್ದಾರೆ.
ಎರಡು ಇಂಡಿಗೋ ವಿಮಾನಗಳು ಆಗಸದೆತ್ತರದಲ್ಲಿ ಪರಸ್ಪರ ಡಿಕ್ಕಿಯಾಗುವುದಕ್ಕೆ ಕೇವಲ 45 ಸೆಕೆಂಡುಗಳು ಇದ್ದಾಗ ಕೋಲ್ಕತಾದಲ್ಲಿನ ವಾಯು ನಿಯಂತ್ರಣ ಗೋಪುರದಲ್ಲಿದ್ದ ಅಧಿಕಾರಿ, ಒಂದು ಇಂಡಿಗೋ ವಿಮಾನಕ್ಕೆ ಬಲಕ್ಕೆ ತಿರುಗಿ ಇನ್ನೊಂದು ಇಂಡಿಗೋ ವಿಮಾನದಿಂದ ದೂರ ಸರಿಯುವಂತೆ ಸೂಚಿಸಿದರು. ಅತ್ಯಂತ ನಿಕಟಕ್ಕೆ ಸಾಗಿದ್ದ ಇಂಡಿಗೋ ವಿಮಾನ ಆ ಪ್ರಕಾರ ಬಲಕ್ಕೆ ತಿರುಗಿ ಇನ್ನೊಂದು ಇಂಡಿಗೋ ವಿಮಾನದ ಪಥದಿಂದ ದೂರ ಸರಿಯಿತು. ಹಾಗಾಗಿ ಸಂಭವನೀಯ ವಾಯು ದುರಂತ ತಪ್ಪಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಮಿತವ್ಯಯ ಪ್ರಯಾಣದ ಇಂಡಿಗೋ ವಿಮಾನಯಾನ ಕಂಪೆನಿಗೆ ಸೇರಿದ ಈ ಎರಡೂ ವಿಮಾನಗಳು ನಿನ್ನೆ ಬುಧವಾರ ಸಂಜೆ ಭಾರತ-ಬಾಂಗ್ಲಾ ಗಡಿಯ ವಾಯು ಪ್ರದೇಶದಲ್ಲಿ ಬಹತೇಕ ಒಂದೇ ಮಟ್ಟದಲ್ಲಿ ಅತ್ಯಂತ ಸನಿಹಕ್ಕೆ ಬಂದಿದ್ದವು. ಅವು ಪರಸ್ಪರ ಎಷ್ಟು ನಿಕಟವಾಗಿದ್ದವೆಂದರೆ ಇನ್ನೇನು ಢಿಕ್ಕಿ ಹೊಡೆದುಕೊಳ್ಳುವುದರಲ್ಲಿ ಇದ್ದವು; ಸರಿಯಾದ ಹೊತ್ತಿನಲ್ಲಿ ನೀಡಲಾದ ತುರ್ತು ಸಂದೇಶದಿಂದ ಭಾರೀ ವಿಮಾನ ದುರಂತ ತಪ್ಪಿತು ಎಂದು ಕೋಲ್ಕತ ವಿಮಾನ ನಿಲ್ದಾಣದಲ್ಲಿನ ಎಎಐ ಅಧಿಕಾರಿ ಪಿಟಿಐ ಸುದ್ದಿಸಂಸ್ಥೆಗೆ ಫೋನಿನಲ್ಲಿ ತಿಳಿಸಿದರು.
ಒಂದು ಇಂಡಿಗೋ ವಿಮಾನ ಚೆನ್ನೈನಿಂದ ಗುವಾಹಟಿಗೆ ಹೋಗುತ್ತಿತ್ತು. ಇನ್ನೊಂದು ವಿಮಾನ ಗುವಾಹಟಿಯಿಂದ ಕೋಲ್ಕತಕ್ಕೆ ಹೋಗುತ್ತಿತ್ತು. ಬುಧವಾರ ಸಂಜೆ 5.10ರ ಹೊತ್ತಿಗೆ ಇವು ಆಗಸದಲ್ಲಿ ಅತ್ಯಂತ ಸನಿಹಕ್ಕೆ ಬಂದವು. ಕೋಲ್ಕತಕ್ಕೆ ಹೋಗುತ್ತಿದ್ದ ವಿಮಾನವು ಬಾಂಗ್ಲಾ ವಾಯು ಪ್ರದೇಶದಲ್ಲಿ 36,000 ಅಡಿ ಎತ್ತರದಲ್ಲಿ ಹಾರುತ್ತಿತ್ತು. ಇನ್ನೊಂದು ಇಂಡಿಗೋ ವಿಮಾನ ಭಾರತೀಯ ವಾಯು ಪ್ರದೇಶದಲ್ಲಿ 35,000 ಅಡಿ ಎತ್ತರದಲ್ಲಿ ಹಾರುತ್ತಿತ್ತು.
ಬಾಂಗ್ಲಾದೇಶ ಎಟಿಸಿ ಆಗ ಕೋಲ್ಕತಕ್ಕೆ ಹೋಗುತ್ತಿದ್ದ ವಿಮಾನಕ್ಕೆ 35,000 ಅಡಿಗೆ ಇಳಿಯುವಂತೆ ಸೂಚಿಸಿತು. ಆಗ ಎರಡೂ ವಿಮಾನಗಳು ಪರಸ್ಪರ ನಿಕಟಕ್ಕೆ ಬಂದವು. ಇದನ್ನು ತತ್‌ಕ್ಷಣ ಗಮನಿಸಿದ ಕೋಲ್ಕತ ಎಟಿಸಿ ಅಧಿಕಾರಿ ಕೂಡಲೇ ಚೆನ್ನೈ-ಗುವಾಹಟಿ ವಿಮಾನಕ್ಕೆ ಬಲಕ್ಕೆ ತಿರುಗುವಂತೆ ಸೂಚಿಸಿದರು ಮತ್ತು ಆ ಮೂಲಕ ಇನ್ನೊಂದು ವಿಮಾನದ ಪಥದಿಂದ ದೂರ ಸರಿಯುವಂತೆ ಹೇಳಿದರು. ತತ್ಪರಿಣಾಮವಾಗಿ ಸಂಭವನೀಯ ವಾಯು ದುರಂತ ತಪ್ಪಿತು ಎಂದವರು ಹೇಳಿದರು.
ಈ ಬಗ್ಗೆ ಪಿಟಿಐ ಮಾಹಿತಿ ಕೇಳಿದಾಗ ಇಂಡಿಗೋ ವಕ್ತಾರ, “ನಮಗೆ ಈ ತನಕ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದರು.
ವಾಯುಯಾನ ನಿಮಯಗಳ ಪ್ರಕಾರ ಈ ಘಟನೆಯ ಬಗ್ಗೆ ಈಗಿನ್ನು ತನಿಖೆ ನಡೆಯಲಿದೆ ಎಂದು ಇನ್ನೋರ್ವ ಎಎಐ ಅಧಿಕಾರಿ ತಿಳಿಸಿದರು. ವಾಯು ಸಾರಿಗೆ ನಿಯಮದ ಪ್ರಕಾರ ಒಂದೇ ಪಥದಲ್ಲಿ ಸಂಚರಿಸುವ ವೇಳೆ ಎರಡು ವಿಮಾನಗಳ ಅಕ್ಕಪಕ್ಕದ ಮತ್ತು ಲಂಬಾಂತರ ಕನಿಷ್ಠ 1,000 ಅಡಿ ಇರಲೇ ಬೇಕು ಎಂದವರು ಹೇಳಿದರು.