ಹರಿಹರ: ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ಕೊನೆಯ ಮುಖ್ಯಮಂತ್ರಿ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಎಸ್.ಸುರೇಶ್ ಕುಮಾರ್ ಭವಿಷ್ಯ ನುಡಿದ್ದಾರೆ. ತಾಲೂಕಿನ ಹೊಳೆಸಿರಿಗೆರೆ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರದ ದುರಾಡಳಿತ ಹಾಗೂ ಸಿದ್ದರಾಮಯ್ಯರ ಉಡಾಫೆ ಮಾತುಗಳಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ರಾಜ್ಯದಲ್ಲೂ ಕಾಂಗ್ರೆಸ್ ಆಡಳಿತ ಪರ್ವ ಕೊನೆಯಾಗಲಿದೆ. ಸಿದ್ದರಾಮಯ್ಯ ಕಾಂಗ್ರೆಸ್ಸಿನ ಕೊನೆ ಸಿಎಂ ಆಗಲಿದ್ದಾರೆ ಎಂದು ಹೇಳಿದರು. ಕಾಂಗ್ರೆಸಿಗರು ನಾಲ್ಕು ವರ್ಷದ ಸಂಭ್ರಮ ಆಚರಿಸುತ್ತಿದ್ದಾರೆ,
ಆದರೆ ಭ್ರಷ್ಟಾಚಾರ, ದುರಾಡಳಿತ, ಉಡಾಫೆ, ಅಹಂಕಾರ, ನಿದ್ರಾವಸ್ಥೆಯೇ ಈ ಸರ್ಕಾರದ ಮುಖ್ಯ ಲಕ್ಷಣ. ಕಾಂಗ್ರೆಸ್ ಸರಕಾರ ಜನರ ನಿರೀಕ್ಷೆ ಸಂಪೂರ್ಣವಾಗಿ ಹುಸಿಗೊಳಿಸಿದೆ. ರೈತರ ಆತ್ಮಹತ್ಯೆ, ಬರ ಪರಿಹಾರ ಕಾರ್ಯದಲ್ಲಿ ವೈಫಲ್ಯ, ಜನರ ಕೈಗೆ ಸಿಗದ ಸಚಿವರು, ಅಧಿಧಿಕಾರಿಗಳು ಇದೆಲ್ಲದರ ಪರಿಣಾಮ ರಾಜ್ಯವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಜನರೆ ನಿರ್ಧರಿಸಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ತರಲು ಮಿಷನ್ 150 ಘೋಷಿಸಲಾಗಿದೆ. ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಒಗ್ಗಟ್ಟಾಗಿದ್ದು, ಕಾರ್ಯಕರ್ತರು, ಜನತೆಯ ಅಪೇಕ್ಷೆಯಂತೆ ನಡೆಯಲಿದ್ದಾರೆ. ಜನರು ಕೇಂದ್ರದ ಮೋದಿ ಸರಕಾರದ ಸಾಧನೆಯನ್ನು ಗಮನಿಸುತ್ತಿದ್ದು, ರಾಜ್ಯದಲ್ಲಿಯೂ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.
ಪಕ್ಷದ ಜಿಲ್ಲಾ, ತಾಲೂಕು ಸಂಘಟನೆಗಳಲ್ಲಿ ಕೆಲ ಗೊಂದಲಗಳಿರುವುದು ನಿಜ. ಅವುಗಳ ನಿವಾರಣೆಗೆ ಮುಖಂಡರು ಕಾರ್ಯಶೀಲರಾಗಿದ್ದಾರೆ. ತುಮಕೂರಿನಿಂದ ಬಿಜೆಪಿ ಮುಖಂಡರ ಪ್ರವಾಸ ಆರಂಭವಾಗಿದೆ. ಎಂಟು ತಿಂಗಳ ಹಿಂದೆಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು, ಬಿ.ಎಸ್. ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.
ಈ ಬಗ್ಗೆ ಪಕ್ಷದ ಎಲ್ಲ ಮುಖಂಡರಲ್ಲೂ ಒಮ್ಮತವಿದೆ ಎಂದರು. ಜಿಲ್ಲಾ ಸ್ಲಮ್ ಮೋರ್ಚಾ ಅಧ್ಯಕ್ಷ ಮಾಲತೇಶ್ ಜಿ. ಭಂಡಾರಿ, ನಗರ ಘಟಕದ ಉಪಾಧ್ಯಕ್ಷ ಎಚ್.ಎಸ್. ರಾಘವೇಂದ್ರ, ಉಮ್ಮಣ್ಣ, ನೀಲಾಂಬಿಕ ಸ್ವ-ಸಹಾಯ ಸಂಘದ ಮುಖ್ಯಸ್ಥೆ ಗೀತಮ್ಮ ಇತರರಿದ್ದರು.