ಲಕ್ನೋ: ದ್ವಿಚಕ್ರ ವಾಹನದಲ್ಲಿ ಬಂದ ನಾಲ್ವರು ವ್ಯಕ್ತಿಗಳು ಒಬ್ಬ ಗಾರ್ಡ್, ಇಬ್ಬರು ಕ್ಯಾಷಿಯರ್ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬ್ಯಾಂಕಿನ ಮುಂದೆ ಹೊಡೆದು ಸುಮಾರು 39 ಲಕ್ಷ ರೂ ದರೋಡೆ ಮಾಡಿದ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಇಂದು ಹಾಡುಹಗಲೇ ನಡೆದಿದೆ.
ಬ್ಯಾಂಕ್ ಗೆ ಹಣ ಸಾಗಾಟ ಮಾಡುವ ವಾಹನದಿಂದ ಹಣ ಪೆಟ್ಟಿಗೆಯನ್ನು ದೋಚಿ ಪರಾರಿಯಾಗಿದ್ದಾರೆ.
ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, ಉಳಿದ ಮೂವರು ಇನ್ನೂ ವೈದ್ಯಕೀಯ ನಿಗಾದಲ್ಲಿದ್ದಾರೆ. ಇಡೀ ಘಟನೆಯು ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬರು ವ್ಯಾನ್ ನ ಸುತ್ತಲೂ ಸುತ್ತಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಸ್ತ್ರಸಜ್ಜಿತ ಕಾವಲುಗಾರ ಹೊರಗೆ ನಿಂತಿದ್ದಾಗ ಬ್ಯಾಂಕ್ ಉದ್ಯೋಗಿಗಳು ವ್ಯಾನ್ ನ ಹಿಂದಿನ ಬಾಗಿಲನ್ನು ತೆರೆದರು. ಇದ್ದಕ್ಕಿದ್ದಂತೆ, ಹೆಲ್ಮೆಟ್ ಧರಿಸಿದ್ದ ಇನ್ನೊಬ್ಬ ವ್ಯಕ್ತಿ ಅಲ್ಲಿ ಕಾಣಿಸಿಕೊಂಡು ಹಿಂಭಾಗದಲ್ಲಿ ಗಾರ್ಡ್ ಗೆ ಹತ್ತಿರದಿಂದ ಶೂಟ್ ಮಾಡಿದರು. ಈ ವೇಳೆ ಕಾದು ನಿಂತಿದ್ದ ವ್ಯಕ್ತಿ ಬಂದೂಕನ್ನು ಹೊರತೆಗೆದು ವ್ಯಾನ್ ನಲ್ಲಿದ್ದ ಒಬ್ಬರಿಂದ ಬ್ಯಾಕ್ ಪ್ಯಾಕನ್ನು ಕಸಿದುಕೊಂಡರು, ಇನ್ನೊಬ್ಬ ವ್ಯಕ್ತಿ ವ್ಯಾನ್ ನ ಹಿಂಭಾಗದಿಂದ ದೊಡ್ಡ ಪೆಟ್ಟಿಗೆಯನ್ನು ಹೊರತೆಗೆದ. ಬಳಿಕ ಅವರೆಲ್ಲರೂ ಸ್ಥಳದಿಂದ ಪರಾರಿಯಾದರು.
ಅಪರಾಧದ ಸ್ಥಳವನ್ನು ತನಿಖೆ ಮಾಡಲು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ), ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಎಸ್‌ಪಿ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.