Advertisement

Mirabai Chanu ನಿರಾಶೆ : 199 ಕೆ.ಜಿ. ಭಾರ ಎತ್ತಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ

11:55 PM Aug 08, 2024 | Team Udayavani |

ಪ್ಯಾರಿಸ್‌: ಭಾರತದ ಮೀರಾಬಾಯಿ ಚಾನು ಅವರು ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ನೀರಸ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇದರಿಂದ ಭಾರತ ಇನ್ನೊಂದು ಪದಕ ಗೆಲ್ಲುವ ಸುವರ್ಣಾವಕಾಶ ಕಳೆದುಕೊಂಡಿತು.

Advertisement

ಬುಧವಾರ ರಾತ್ರಿ ನಡೆದ ವನಿತೆಇಯರ 49 ಕೆ.ಜಿ. ವಿಭಾಗದ ಸ್ಫರ್ಧೆಯಲ್ಲಿ ಚಾನು ಒಟ್ಟಾರೆ 199 ಕೆ.ಜಿ. ಭಾರ ಎತ್ತಿ ನಾಲ್ಕನೇ ಸ್ಥಾನ ಪಡೆದರು. ಸ್ನ್ಯಾಚ್‌ನಲ್ಲಿ 88 ಕೆ.ಜಿ. ಭಾರ ಎತ್ತಿದ್ದ ಅವರು ಕ್ಲೀನ್‌ ಆ್ಯಂಡ್‌ ಜರ್ಕ್‌ನಲ್ಲಿ 111 ಕೆ.ಜಿ. ಎತ್ತಿದ್ದರು. ಟೋಕಿಯೋ ಗೇಮ್ಸ್‌ ನಲ್ಲಿ ಒಟ್ಟಾರೆ 202 ಕೆ.ಜಿ. ಭಾರ ಎತ್ತಿ ಬೆಳ್ಳಿಯ ಪದಕ ಜಯಿಸಿದ್ದ ಅವರು ಈ ಬಾರಿ ಅದಕ್ಕಿಂತ ಕಳಪೆ ನಿರ್ವಹಣೆ ನೀಡಿ ನಿರಾಶೆ ಮೂಡಿಸಿದರು.

ಸ್ನ್ಯಾಚ್‌, ಕ್ಲೀನ್‌ ಆ್ಯಂಡ್‌ ಜರ್ಕ್‌ನ ಒಟ್ಟು ಆರು ಪ್ರಯತ್ನಗಳಲ್ಲಿ ಚಾನು ಕೇವಲ ಮೂರು ಬಾರಿ ಭಾರ ಎತ್ತಲು ಯಶಸ್ವಿಯಾಗಿದ್ದರು. ಗುರುವಾರ 30ರ ಹರೆಯಕ್ಕೆ ಕಾಲಿಟ್ಟ ಮಾಜಿ ವಿಶ್ವ ಚಾಂಪಿಯನ್‌ ಚಾನು ಸ್ನ್ಯಾಚ್‌ನಲ್ಲಿ 88 ಕೆ.ಜಿ. ಭಾರ ಎತ್ತಿ ಪದಕ ಗೆಲ್ಲುವ ಆಸೆ ಮೂಡಿಸಿದರು. ಕ್ಲೀನ್‌ ಆ್ಯಂಡ್‌ ಜರ್ಕ್‌ನ ಮೂರನೇ ಪ್ರಯತ್ನಯಲ್ಲಿ ಅವರು ಒಂದು ವೇಳೆ 114 ಕೆ.ಜಿ. ಭಾರ ಎತ್ತಲು ಯಶಸ್ವಿಯಾಗಿದ್ದರೆ ಕಂಚು ಗೆಲ್ಲುವ ಸಾಧ್ಯತಯಿತ್ತು. ಆದರೆ ಆ ಪ್ರಯತ್ನದಲ್ಲಿ ವಿಫ‌ಲರಾಗಿ ನಾಲ್ಕನೇ ಸ್ಥಾನಕ್ಕೆ ಕುಸಿದರು.

ಒಲಿಂಪಿಕ್‌ ದಾಖಲೆ
ಕ್ಲೀನ್‌ ಆ್ಯಂಡ್‌ ಜರ್ಕ್‌ನಲ್ಲಿ ಒಟ್ಟು 117 ಕೆ.ಜಿ. ಭಾರ ಎತ್ತಿ ಒಲಿಂಪಿಕ್‌ ದಾಖಲೆ ನಿರ್ಮಿಸಿದ ಚೀನದ ಹೊ ಝಿಹುಯಿ ಒಟ್ಟಾರೆ 206 ಕೆ.ಜಿ. ಭಾರ ಎತ್ತಿ ಚಿನ್ನ ಗೆದ್ದು ಟೋಕಿಯೊ ಸಾಧನೆಯನ್ನು ಯಶಸ್ವಿಯಾಗಿ ಸಮರ್ಥಿಸಿಕೊಂಡರು. ರೊಮಾನಿಯದ ಮಿಹೇಲಾ ಕ್ಯಾಂಬೆಯಿ 205 ಕೆ.ಜಿ. (93+112) ಭಾರ ಎತ್ತಿ ಬೆಳ್ಳಿ ಗೆದ್ದರೆ ಸುರೋದ್‌ಚಾನ ಖಾಂಬಾವೊ 200 ಕೆ.ಜಿ. (88+112) ಭಾರ ಎತ್ತಿ ಕಂಚು ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next